ಮೈಸೂರು: ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ), ಹೂವಿನಹಡಗಲಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಆಗಸ್ಟ್ 30ರಂದು ಮೈಸೂರಿನ ಪುರಭವನದಲ್ಲಿ ‘ರಂಗ ಕಲರವ’ ಕಾರ್ಯಕ್ರಮ ಆಯೋಜಿಸಲಾಗಿದೆ.
ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಅಭಿನಯಪೂರ್ವಕ ಪೌರಾಣಿಕ ನಾಟಕಗಳ ಗೀತಗಾಯನ, ನಾಟಕ ಪ್ರದರ್ಶನ ಹಾಗೂ ವಿವಿಧ ರಂಗದೃಶ್ಯಗಳು ಪ್ರೇಕ್ಷಕರನ್ನು ರಂಜಿಸಲಿವೆ.
ಕರ್ನಾಟಕ ಸುಗಮ ಸಂಗೀತ ಪರಿಷತ್, ಮೈಸೂರು ಅಧ್ಯಕ್ಷ ಡಾ. ನಾಗರಾಜ್ ವಿ. ಭೈರಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ನಿವೃತ್ತ ಉಪ ಆಯುಕ್ತ ಎಚ್.ಎಸ್. ಗೋವಿಂದಗೌಡರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುದರ್ಶನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ನಟ ಹಾಗೂ ನಾಟಕಕಾರ ಎಸ್.ಎಸ್. ಪುಟ್ಟೇಗೌಡರು ಕಾರ್ಯಕ್ರಮದ ಸಂಘಟಕರಾಗಿದ್ದಾರೆ. ಕ.ರಾ.ಬ. ಸಂಘದ ಅಧ್ಯಕ್ಷ ಮಧುನಾಯಕ್ ಲಮಾಣ, ಗೌರವಾಧ್ಯಕ್ಷ ಹಾಗೂ ಸಾಹಿತಿ ಗೊರೂರು ಅನಂತರಾಜು, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಸಿ.ಆರ್., ಸಾಹಿತಿಗಳಾದ ಗಣೇಶ್ ಅಮೀನಗಡ, ರಂಗ ನಿರ್ದೇಶಕ ವಿ. ಕಿರಗಸೂರು ರಾಜಪ್ಪ, ನಿವೃತ್ತ ಡಿವೈಎಸ್ಪಿ ಡಾ. ಶಿವಬಸಪ್ಪ, ಅರಣ್ಯ ಇಲಾಖೆಯ ಮರಿಗೌಡ, ಕಲಾವಿದರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುವರು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10 ಗಂಟೆಗೆ ರಂಗಗೀತೆ ಗಾಯನ ನಡೆಯಲಿದೆ. ನಂತರ ಮಹಿಳಾ ಕಲಾವಿದರಿಂದ ಎಸ್.ಎಸ್. ಪುಟ್ಟೇಗೌಡರ ರಚನೆ ಹಾಗೂ ನಿರ್ದೇಶನದ ‘ಮಹಾತ್ಮ ಕನಕದಾಸ’ ನಾಟಕ ಪ್ರದರ್ಶನಗೊಳ್ಳಲಿದೆ. ಬಳಿಕ ಎಚ್.ಎಸ್. ಗೋವಿಂದಗೌಡರಿಂದ ಏಕವ್ಯಕ್ತಿ ಪ್ರದರ್ಶನ ನಡೆಯಲಿದೆ.
ಸೋಮವಾರಪೇಟೆ ತಾಲ್ಲೂಕಿನ ಕೋಣಗನಹಳ್ಳಿ ಗ್ರಾಮದ ಕಲಾವಿದರು ‘ಹರಿಭಕ್ತ ಮಹಾಂಧಾತ’ ನಾಟಕದ ದೃಶ್ಯಾವಳಿಯನ್ನು ಪ್ರದರ್ಶಿಸಲಿದ್ದಾರೆ. ಮಹದೇವಪ್ಪ ನಿರ್ಮಲ ಅವರು ‘ಕುರುಕ್ಷೇತ್ರ’ ನಾಟಕದ ‘ಗಂಗಾತೀರ’ ದೃಶ್ಯವನ್ನು ಪ್ರದರ್ಶಿಸಲಿದ್ದು , ಅನಂತು ತಂಡದಿಂದ ‘ರಾಮಾಯಣ’ ನಾಟಕದ ‘ದಶರಥ–ಕೈಕೆ ಅಂತಃಪುರ’ ದೃಶ್ಯ ಪ್ರದರ್ಶನಗೊಳ್ಳಲಿದೆ.
ರಂಗಭೂಮಿ, ಪೌರಾಣಿಕ ನಾಟಕ ಹಾಗೂ ಕನ್ನಡ ಸಾಹಿತ್ಯ-ಸಂಸ್ಕೃತಿಯ ಅಭಿಮಾನಿಗಳಿಗೆ ಕಾರ್ಯಕ್ರಮ ವಿಶೇಷ ಅನುಭವ ನೀಡಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
