ಕೊರಟಗೆರೆ: ತಾಲೂಕಿನ ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕೇನಹಳ್ಳಿ ಗ್ರಾಮದಲ್ಲಿ ನೂತನ ಕುಬೇರ ಗಣಪತಿ ದೇವಸ್ಥಾನ ಹಾಗೂ ವಿಗ್ರಹ ಪ್ರತಿಷ್ಠಾಪನೆ, ಸಮುದಾಯ ಭವನ ಮತ್ತು ರಾಜಗೋಪುರ ಉದ್ಘಾಟನಾ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.
ಗ್ರಾಮಸ್ಥರು ಕಳೆದ ಒಂಬತ್ತು ವರ್ಷಗಳಿಂದ ಕಂಡಿದ್ದ ಕನಸು ಇದೀಗ ನನಸಾಗಿದ್ದು, ನೂತನ ದೇವಸ್ಥಾನದ ಉದ್ಘಾಟನೆಯ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಎಲೆರಾಂಪುರ ಮಠದ ಶ್ರೀ ಡಾ. ಹನುಮಂತನಾಥ ಸ್ವಾಮೀಜಿ, ಕಾರದ ಮಠದ ಶ್ರೀ ವೀರ ಬಸವಲಿಂಗ ಸ್ವಾಮೀಜಿ, ಸಮಾಜ ಸೇವಕ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್. ಕೃಷ್ಣಮೂರ್ತಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಕುಬೇರ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು.
ಗ್ರಾಮಗಳ ಅಭಿವೃದ್ಧಿಗೆ ಸಿರಿವಂತರ ಕೊಡುಗೆ ಅಗತ್ಯ
ಈ ಸಂದರ್ಭದಲ್ಲಿ ಮಾತನಾಡಿದ ಪಿ.ಎನ್. ಕೃಷ್ಣಮೂರ್ತಿ ಅವರು, ಪ್ರತಿಯೊಂದು ಹಳ್ಳಿಯಲ್ಲಿರುವ ಸಿರಿವಂತರು ಹಾಗೂ ಅನುಕೂಲಸ್ಥರು ತಮ್ಮ ಕೈಲಾದ ರೀತಿಯಲ್ಲಿ ಗ್ರಾಮಗಳ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.
ದೇವಸ್ಥಾನಗಳು ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯನ್ನು ಉಳಿಸುವ ಕೇಂದ್ರಗಳಾಗಿವೆ. ದೇವಾಲಯಗಳು ಮನುಷ್ಯ ಮತ್ತು ದೇವರ ನಡುವಿನ ಸಂಪರ್ಕದ ಸೇತುವೆಯಾಗಿದ್ದು, ನಿತ್ಯದ ಒತ್ತಡದ ಬದುಕಿನಲ್ಲಿ ಮನಸ್ಸಿಗೆ ಶಾಂತಿ ನೀಡುವ ತಾಣಗಳಾಗಿವೆ. ಈ ರೀತಿಯ ಪೂಜೆ ಮತ್ತು ಧಾರ್ಮಿಕ ಉತ್ಸವಗಳು ಜನರನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತವೆ ಎಂದು ತಿಳಿಸಿದರು.

ಪ್ರತಿಯೊಂದು ಗ್ರಾಮದಲ್ಲೂ ಉತ್ತಮ ದೇವಾಲಯಗಳು, ಮಠಗಳು ಹಾಗೂ ಶಾಲೆಗಳು ಇರಬೇಕು. ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ, ಸಂಸ್ಕೃತಿ ಹಾಗೂ ಆಚಾರ-ವಿಚಾರಗಳ ಅರಿವು ಮೂಡಿಸುವ ಜವಾಬ್ದಾರಿ ಪೋಷಕರು ಮತ್ತು ಸಮಾಜದ ಮೇಲಿದೆ ಎಂದರು.
ತಮ್ಮ ಕ್ಷೇತ್ರದಲ್ಲಿ ಬಡವರ ಅನುಕೂಲಕ್ಕಾಗಿ ಆರು ಹೋಬಳಿಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಿ, ಶುಭಕಾರ್ಯಗಳನ್ನು ಉಚಿತವಾಗಿ ನಡೆಸಲು ಅವಕಾಶ ಕಲ್ಪಿಸುವ ಉದ್ದೇಶ ಹೊಂದಿರುವುದಾಗಿ ಹೇಳಿದರು.
ಹುಟ್ಟೂರಿಗೆ ಕೊಡುಗೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ: ನೀಲೇಶ್
ಉದ್ಯಮಿ ನೀಲೇಶ್ ಮಾತನಾಡಿ, ನಾವು ಎಲ್ಲೇ ಇದ್ದರೂ, ಎಷ್ಟೇ ಎತ್ತರಕ್ಕೆ ಬೆಳೆದರೂ ಹುಟ್ಟಿದ ಗ್ರಾಮವನ್ನು ಮರೆಯಬಾರದು. ನಮ್ಮ ಗ್ರಾಮಕ್ಕೆ ನಮ್ಮ ಕೈಲಾದಷ್ಟು ಕೊಡುಗೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಗ್ರಾಮಗಳ ಅಭಿವೃದ್ಧಿಗೆ ಕೇವಲ ಹಣದ ನೆರವು ಮಾತ್ರವಲ್ಲದೆ, ಸಮಯ, ಶ್ರಮ ಹಾಗೂ ಸೂಕ್ತ ಮಾರ್ಗದರ್ಶನದ ಮೂಲಕವೂ ಸೇವೆ ಸಲ್ಲಿಸಬಹುದು. ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನಿರ್ಮಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ದೇವರ ಆರಾಧನೆಯೊಂದಿಗೆ ತಂದೆ-ತಾಯಿಯ ಸೇವೆಯೂ ಮುಖ್ಯ: ಡಾ. ಹನುಮಂತನಾಥ ಸ್ವಾಮೀಜಿ ಎಲೆರಾಂಪುರ ಮಠದ ಶ್ರೀ ಡಾ. ಹನುಮಂತನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಗಣಪತಿ, ಕುಬೇರ ಮತ್ತು ಲಕ್ಷ್ಮೀ ದೇವಿಯರ ಆರಾಧನೆಯಿಂದ ಆರ್ಥಿಕ ಸಮೃದ್ಧಿ ಹಾಗೂ ನೆಮ್ಮದಿ ದೊರೆಯುತ್ತದೆ ಎಂಬ ನಂಬಿಕೆಯಿದೆ ಎಂದು ತಿಳಿಸಿದರು.
48 ದಿನಗಳ ಕಾಲ ನಿಷ್ಠೆ, ಭಕ್ತಿ ಮತ್ತು ಶ್ರದ್ಧೆಯಿಂದ ಗಣೇಶನ ಪೂಜೆ ಮಾಡುವುದರಿಂದ ಭಗವಂತನ ಅನುಗ್ರಹ ದೊರೆಯುತ್ತದೆ. ಆದರೆ ದೇವರ ಆರಾಧನೆಯ ಜತೆಗೆ ತಂದೆ-ತಾಯಿಯ ಸೇವೆ ಮಾಡುವುದು ಅತ್ಯಂತ ಮುಖ್ಯ. ಹಿರಿಯರನ್ನು ಗೌರವಿಸಿ, ಸತ್ಯ, ಧರ್ಮ ಮತ್ತು ನೀತಿಯ ಮಾರ್ಗದಲ್ಲಿ ಜೀವನ ನಡೆಸಬೇಕು ಎಂದು ಹೇಳಿದರು.
ಮಕ್ಕಳಿಗೆ ಸಂಸ್ಕಾರದ ಶಿಕ್ಷಣ ನೀಡಿ: ವೀರ ಬಸವಲಿಂಗ ಸ್ವಾಮೀಜಿ
ಕಾರದ ಮಠದ ಶ್ರೀ ವೀರ ಬಸವಲಿಂಗ ಸ್ವಾಮೀಜಿ ಮಾತನಾಡಿ, ಮಕ್ಕಳನ್ನು ಕೇವಲ ವಿದ್ಯಾವಂತರನ್ನಾಗಿ ಮಾಡುವುದಷ್ಟೇ ಅಲ್ಲದೆ, ಸಂಸ್ಕಾರವಂತರನ್ನಾಗಿಯೂ ಬೆಳೆಸಬೇಕು ಎಂದು ಕರೆ ನೀಡಿದರು.
ಮೊಬೈಲ್ ಮತ್ತು ಟಿವಿಯ ಅತಿಯಾದ ಬಳಕೆಯನ್ನು ಕಡಿಮೆ ಮಾಡಿ ಕುಟುಂಬದ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಬೇಕು. ತಂದೆ-ತಾಯಿ, ಬಂಧು-ಬಳಗ, ಗುರುಗಳು ಹಾಗೂ ಹಿರಿಯರೊಂದಿಗಿನ ಸಂಬಂಧಗಳ ಮಹತ್ವವನ್ನು ಬಾಲ್ಯದಿಂದಲೇ ಮಕ್ಕಳಿಗೆ ತಿಳಿಸಬೇಕು. ಹಿರಿಯರನ್ನು ಗೌರವಿಸುವ ಗುಣವನ್ನು ಮಕ್ಕಳಲ್ಲಿ ಬೆಳೆಸುವುದು ಅಗತ್ಯ ಎಂದು ಹೇಳಿದರು.

ಗ್ರಾಮಸ್ಥರ ಒಗ್ಗಟ್ಟಿನ ಫಲ: ಶ್ರೀನಾಗ್
ಉದ್ಯಮಿ ಶ್ರೀನಾಗ್ ಮಾತನಾಡಿ, ಸಂಕೇನಹಳ್ಳಿ ಗ್ರಾಮದಲ್ಲಿ ‘ಕುಬೇರ ಗಣಪತಿ’ ಎಂಬ ಹೆಸರು ಮೂಡಿಬರಲು ಪ್ರಮುಖ ಕಾರಣ ಗ್ರಾಮಸ್ಥರ ಭಕ್ತಿ, ಒಗ್ಗಟ್ಟು ಮತ್ತು ಸಂಕಲ್ಪವಾಗಿದೆ ಎಂದರು.
ಗ್ರಾಮಸ್ಥರೆಲ್ಲರೂ ಒಂದಾಗಿ ನಿಂತು ದೇವಸ್ಥಾನದ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ. ಇದು ಕೇವಲ ದೇವಸ್ಥಾನವಲ್ಲ, ಗ್ರಾಮದ ಜನರ ಭಕ್ತಿ ಮತ್ತು ಒಗ್ಗಟ್ಟಿನ ಪ್ರತೀಕವಾಗಿದೆ. ಇದೇ ಒಗ್ಗಟ್ಟಿನಿಂದ ಮುಂದಿನ ದಿನಗಳಲ್ಲಿಯೂ ಗ್ರಾಮದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಹೇಳಿದರು.
ಸಹಸ್ರಾರು ಭಕ್ತರ ಉಪಸ್ಥಿತಿ
ಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಅನ್ನಸಂತರ್ಪಣೆ ನಡೆಯಿತು. ಸಂಕೇನಹಳ್ಳಿ, ಗೋಕುಲ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಂದ ಸಹಸ್ರಾರು ಭಕ್ತರು ಆಗಮಿಸಿ ಕುಬೇರ ಗಣಪತಿಯ ದರ್ಶನ ಪಡೆದು ಪುನೀತರಾದರು. ಭಕ್ತರ ಹೆಚ್ಚಿನ ಸಂಖ್ಯೆಯ ಆಗಮನದಿಂದ ಇಡೀ ಸಂಕೇನಹಳ್ಳಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಒಂಬತ್ತು ವರ್ಷಗಳ ಕಾಲ ಗ್ರಾಮಸ್ಥರ ನಿರಂತರ ಪ್ರಯತ್ನ ಹಾಗೂ ಒಗ್ಗಟ್ಟಿನ ಫಲವಾಗಿ ನಿರ್ಮಾಣಗೊಂಡಿರುವ ಕುಬೇರ ಗಣಪತಿ ದೇವಸ್ಥಾನ ಇದೀಗ ಗ್ರಾಮದ ಭಕ್ತಿ ಮತ್ತು ಸಂಸ್ಕೃತಿಯ ಕೇಂದ್ರವಾಗಿ ಹೊರಹೊಮ್ಮಿದೆ.
ಈ ಸಂದರ್ಭದಲ್ಲಿ ಗ್ಯಾರಂಟಿ ಸಮಿತಿ ಸದಸ್ಯ ವೆಂಕಟೇಶ್ ಮೂರ್ತಿ, ಜೆಡಿಎಸ್ ತಾಲೂಕು ಅಧ್ಯಕ್ಷ ಕಾಮರಾಜು, ಬಿಜೆಪಿ ತಾಲೂಕು ಅಧ್ಯಕ್ಷ ರುದ್ರೇಶ್, ಮಾವತ್ತೂರು ಮಾಜಿ ಅಧ್ಯಕ್ಷ ಮಂಜುನಾಥ್, ಸೀಗೆಪಾಳ್ಯ ಮಾಜಿ ಅಧ್ಯಕ್ಷ ನಾಗರಾಜು, ಕರೆದುಗ್ಗನಹಳ್ಳಿ ಮಾಜಿ ಅಧ್ಯಕ್ಷೆ ಗೀತಾ ನರಸಿಂಹರಾಜು, ಹೊಸಕೋಟೆಯ ಮಾಜಿ ಸದಸ್ಯ ಕಾಮಣ್ಣ, ಬೆಂಗಳೂರಿನ ಪರಮಶಿವಯ್ಯ ಕಿರ್ಲೋಸ್ಕರ್, ಮಧುಕುಮಾರ್ ಹಾಗೂ ಅಕ್ಕಪಕ್ಕದ ಗ್ರಾಮಗಳ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ನರಸಿಂಹಯ್ಯ ಹೊಸಕೋಟೆ
