Bhagavad Gita
ಅಧ್ಯಾಯ-1
ಶ್ಲೋಕ – 32
ಕಿಂ ನೋ ರಾಜ್ಯೇನ ಗೋವಿಂದ ಕಿಂ ಭೋಗೈರ್ಜೀವಿತೇನ ವಾ ॥೩೨॥
ನ ಕಾಂಕ್ಷೇ ವಿಜಯಮ್ ಕೃಷ್ಣ ನಚ ರಾಜ್ಯಮ್ ಸುಖಾನಿ ಚ ಕಿಮ್ ನೋ ರಾಜ್ಯೇನ ಗೋವಿಂದ ಕಿಮ್ ಭೋಗೈ ಜೀವಿತೇನ ವಾ- ಕೃಷ್ಣ, ನಾನು ಗೆಲುವನ್ನು ಬಯಸುವುದಿಲ್ಲ; ಇಲ್ಲ ಅರಸೊತ್ತಿಗೆಯನ್ನು; ಸುಖಗಳನ್ನು ಕೂಡಾ. ಗೋವಿಂದ, ನಮಗೆ ದೊರೆತನದಿಂದೇನು? ಐಷಾರಾಮಗಳಿಂದೇನು ? ಬದುಕಿಯಾದರೂ ಏನು ?
ಅರ್ಜುನ ಧರ್ಮರಾಯನ ಪರ ಹೋರಾಟಕ್ಕೆ ನಿಂತವ. ಯುದ್ಧವನ್ನು ನಿಲ್ಲಿಸುವುದಾಗಲಿ ಅಥವಾ ನಿರ್ಣಯ ತೆಗೆದುಕೊಳ್ಳುವುದಾಗಲಿ ಅದು ಕೊನೆಯದಾಗಿ ಧರ್ಮರಾಯನ ವಿವೇಚನೆಯಂತೇ ನಡೆಯಬೇಕು. ಇಲ್ಲಿ ಅರ್ಜುನ ತಾನೇ ನಿರ್ಣಾಯಕ ಎನ್ನುವಂತೆ ಮಾತನಾಡುತ್ತಾನೆ. “ಯಾರಿಗೆ ಬೇಕಾಗಿದೆ ಈ ಗೆಲುವು ಕೃಷ್ಣ, ನನಗೆ ವಿಜಯ ಬೇಕಾಗಿಲ್ಲ, ನಾನು ಗುರುಹಿರಿಯರನ್ನು ಕೊಂದು, ಗೆಲುವನ್ನು ಬಯಸುವುದಿಲ್ಲ” ಎನ್ನುತ್ತಾನೆ. ಈ ಶ್ಲೋಕದಲ್ಲಿ ಆತ ಪುನಃ “ಕೃಷ್ಣ” ಎಂದು ಸಂಬೋಧಿಸುತ್ತಾನೆ. ಇಲ್ಲಿ “ಕೃಷ್ಣಃ” ಎಂದರೆ ಕರ್ಷಣೆ ಮಾಡುವವ. ತನ್ನ ಸೌಂದರ್ಯದಿಂದ ಆಕರ್ಷಿಸಿ ಉತ್ಕರ್ಷಣೆ ಮಾಡುವವ ಎಂದರ್ಥ. “ಲೋಕದ ಆಕರ್ಷಣ ಶಕ್ತಿಯಾದ ನೀನು ನಮ್ಮನ್ನು, ಈ ಹದಿನೆಂಟು ಅಕ್ಷೋಹಿಣಿ ಸೈನ್ಯವನ್ನು ಏಕೆ ಎಳೆದುತಂದೆ?” ಎನ್ನುವ ಭಾವಾರ್ಥದಲ್ಲಿ ಅರ್ಜುನ ಮಾತನಾಡುತ್ತಾನೆ.
ಇಲ್ಲಿಂದ ಮುಂದುವರೆದು ಹೇಳುತ್ತಾನೆ “ನಮಗೆ ಈ ರಾಜ್ಯ ಪಡೆದು ಏನಾಗಬೇಕಾಗಿದೆ. ಈ ರಾಜ್ಯವನ್ನು ಪಡೆದು, ಭೋಗವನ್ನು ಪಡೆದು ಏನು ಪ್ರಯೋಜನ ಗೋವಿಂದಾ?” ಎಂದು. ಇಲ್ಲಿ ಅರ್ಜುನ ಭಗವಂತನನ್ನು “ಗೋವಿಂದಃ” ಎಂದು ಸಂಬೋಧಿಸುತ್ತಾನೆ. ಗೋವಿಂದ ಎಂದರೆ ವೇದವನ್ನು ಪಡೆದವನು, ವೇದಗಳಿಂದ ವಾಚ್ಯನಾದವನು, ವೇದಗಳ ಸಮಗ್ರ ಅರ್ಥ ತಿಳಿದವನು, ಭೂಮಿಗಿಳಿದು ಬಂದವನು, ಗೋವುಗಳನ್ನು ಕಾಯ್ದವನು ಇತ್ಯಾದಿ. ಕೃಷ್ಣ ಎಷ್ಟೋ ದುಷ್ಟ ರಾಕ್ಷಸರ ಹಾಗು ರಾಜರ ಸಂಹಾರ ಮಾಡಿದವ. ಆದರೆ ಎಲ್ಲಿಯೂ ಸಿಂಹಾಸನವೇರಿ ಅರಸೊತ್ತಿಗೆ ಮಾಡಿರಲಿಲ್ಲ. ಗೋಪಾಲಕರ ಜೊತೆಗೆ ಸೇರಿ ಗೋವುಗಳನ್ನು ಕಾಯ್ದವ ಆತ. ಇಲ್ಲಿ ಅರ್ಜುನ “ನಿನ್ನಂತೆ ನನಗೆ ಯಾವುದೇ ಸಿಂಹಾಸನವೇರುವ ಆಸೆ ಇಲ್ಲ” ಎನ್ನುವ ಅರ್ಥದಲ್ಲಿ ಮಾತನಾಡುತ್ತಿದ್ದಾನೆ. “ಭೂಮಿಗಿಳಿದು ಬಂದ ನೀನು ನನ್ನನ್ನೇಕೆ ಯುದ್ಧಕ್ಕೆ ಪ್ರೇರೇಪಿಸುತ್ತಿದ್ದಿ? ” ಎನ್ನುವ ಭಾವದಲ್ಲಿ ಆತ ಭಗವಂತನನ್ನು ‘ಗೋವಿಂದ‘ ಎಂದು ಸಂಬೋಧಿಸಿದ್ದಾನೆ.

[…] https://vicharavisthara.com/bhagavad-gita-shloka-32/ 1. ಭಗವದ್ಗೀತೆ – ದಿನಕ್ಕೊಂದು ಶ್ಲೋಕ – 32 […]