ತುಮಕೂರು: ಶಿರಾ ತಾಲ್ಲೂಕು ಗಾಣದ ಹುಣಸೆಯಲ್ಲಿರುವ ಸತ್ಯ ಸಾಯಿ ಕಾರುಣ್ಯನಿಕೇತನಂ ಗುರುಕುಲದ ಶಿಕ್ಷಣವನ್ನು ಪಿಯುಸಿ ತನಕ ವಿಸ್ತರಿಸುವ ಉದ್ದೇಶ ಇದೆ ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ನ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
ನಗರದಲ್ಲಿ ನಡೆದ “ದಿವ್ಯಸಂಜೆ” ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಚಿತ್ರನಟ ಅನಿರುದ್ಧಜಟ್ಕರ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸದ್ಗುರು, ತುಮಕೂರು ಜಿಲ್ಲೆಯೊಂದಿಗೆ ನಮ್ಮ ಒಡನಾಟ ಮೂಡಿದ್ದು ದೈವಸಂಕಲ್ಪ. ಒಂದು ಶಾಲೆ ಕಟ್ಟಲೆಂದು ಆರಂಭವಾದ ಪ್ರಯತ್ನದಲ್ಲಿ ಜೊತೆಯಾದ ಕೊಡುಗೈ ದಾನಿಗಳು ಮುಂದೆ ವಿಶ್ವವಿದ್ಯಾಲಯ ನಿರ್ಮಾಣಕ್ಕೂ ಸಹಾಯ ಮಾಡಿದರು ಎಂದು ಹೇಳಿದರು.

ನಗರ ಅಥವಾ ಪಟ್ಟಣಗಳಲ್ಲಿ ದೊಡ್ಡ ಆಸ್ಪತ್ರೆಗಳನ್ನು ಕಟ್ಟುವುದಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಸುಸಜ್ಜಿತ ತುರ್ತು ಆರೈಕೆ ಕೇಂದ್ರಗಳನ್ನು (ಅರ್ಜೆಂಟ್ ಕೇರ್) ಆರಂಭಿಸುವ ಚಿಂತನೆ ಇದೆ. ಈಗಾಗಲೇ ಮಧುಗಿರಿ ಸಮೀಪ ಇಂಥ ಒಂದು ಕೇಂದ್ರ ಆರಂಭವಾಗಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದರು.
ಆರೋಗ್ಯಕ್ಕಾಗಿ ವೆಚ್ಚ ಎಂದರೆ ಕೇವಲ ಔಷಧೋಪಚಾರ ಅಥವಾ ಆಸ್ಪತ್ರೆಗೆ ಓಡಾಡುವ ವೆಚ್ಚವಷ್ಟೇ ಅಲ್ಲ. ಬಡವರು, ಕೂಲಿಕಾರ್ಮಿಕರು ಮೂರ್ನಾಲ್ಕು ದಿನ ದುಡಿಯಲು ಸಾಧ್ಯವಾಗದಿದ್ದರೆ ಅವರ ಬಡತನದ ತೀವ್ರತೆ ಇನ್ನಷ್ಟು ಹೆಚ್ಚಾಗುತ್ತದೆ. ಹೀಗಾಗಿ ಅವರು ವಾಸಿಸುವ ಸ್ಥಳದ ಸಮೀಪವೇ ಅರ್ಜೆಂಟ್ ಕೇರ್ ಕ್ಲಿನಿಕ್ಗಳನ್ನು ಆರಂಭಿಸುತ್ತಿದ್ದೇವೆ ಎಂದು ವಿವರಿಸಿದರು.
ಈ ಕ್ಲಿನಿಕ್ಗಳು ಟೆಲಿಮಿಡಿಸಿನ್ ಸೌಲಭ್ಯದ ಮೂಲಕ ನಮ್ಮ ವೈದ್ಯಕೀಯ ಕಾಲೇಜಿನೊಂದಿಗೆ ಸಂಪರ್ಕ ಹೊಂದಿರುತ್ತದೆ. ಈ ವ್ಯವಸ್ಥೆಯ ಮೂಲಕ ಮೇಘಾಲಯ, ಅಸ್ಸಾಂ, ಬಂಗಾಳದAಥ ರಾಜ್ಯಗಳ ದುರ್ಗಮ ಪ್ರದೇಶಗಳಲ್ಲಿಯೂ ಸೇವೆ ಒದಗಿಸಲು ನಮಗೆ ಸಾಧ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಯಲ್ಲಿ 50 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಿಸಲಾಗುವುದು ಎಂದು ಘೋಷಿಸಿದರು.
ನಾನು ಮಕ್ಕಳ ಮೇಲೆ ವೆಚ್ಚ ಮಾಡುತ್ತಿಲ್ಲ. ನಾನು ದೇಶದ ಭವಿಷ್ಯಕ್ಕಾಗಿ ಹೂಡಿಕೆ ಮಾಡುತ್ತಿದ್ದೇನೆ. ಇನ್ನೊಬ್ಬರ ಸಹಾಯದಿಂದ ಬೆಳೆದೆ ಎನ್ನುವ ಭಾವನೆ ಮಕ್ಕಳಲ್ಲಿ ಬಂದರೆ ಅವರು ಖಂಡಿತ ಇತರರಿಗಾಗಿ ಮಿಡಿಯುತ್ತಾರೆ.
ಇದು ನನ್ನ ಉದ್ದೇಶ ಎಂದು ತಮ್ಮ ಆಲೋಚನೆಯನ್ನು ಹಂಚಿಕೊಂಡರು. ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀಶಿವಸಿದ್ದೇಶ್ವರಸ್ವಾಮೀಜಿ ಆಶೀರ್ಚನ ನೀಡಿ, ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಭಾರತದ ಓರ್ವ ಶ್ರೇಷ್ಠ ಸಂತ. ಅವರ ನೇತೃತ್ವದಲ್ಲಿ ಹಲವು ಮಹತ್ವದ ಯೋಜನೆಗಳು ನಡೆಯುತ್ತಿವೆ. ಪೂಜ್ಯರ ಎಲ್ಲ ಶುಭಸಂಕಲ್ಪಗಳಿಗೆ ಸಿದ್ದಗಂಗಾ ಮಠದ ಗುರುಪರಂಪರೆಯ ಹಾರೈಕೆ ಇರುತ್ತದೆ ಎಂದು ಶ್ಲಾಘಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದೆಹಲಿಯಲ್ಲಿರುವ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ‘ಪ್ರಪಂಚದಲ್ಲಿ ಯಾರೂ ಮಾಡಲು ಸಾಧ್ಯವಾಗದ ಪ್ರಯತ್ನವನ್ನು ಸದ್ಗುರು ಶ್ರೀ ಮಧುಸೂದನ ಸಾಯಿ ಮಾಡಿದ್ದಾರೆ. ಚಿಕ್ಕಬಳ್ಳಾಪುರ ತಾಲ್ಲೂಕು ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ಕೆಲಸಗಳನ್ನು ನೋಡಿದರೆ ಒಂದು ಪವಾಡದಂತೆ ಭಾಸವಾಗುತ್ತದೆ’ ಎಂದು ಹೇಳಿದರು.
ಸ್ವಾಗತ ಭಾಷಣ ಮಾಡಿದ ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರಹಾಲಪ್ಪನವರು ಕರ್ನಾಟಕದ 19 ಜಿಲ್ಲೆಗಳಿಗೆ ತುಮಕೂರು ಹೆಬ್ಬಾಗಿಲು. ಇಲ್ಲಿ ಸುಸಜ್ಜಿತವಾದ ಆರೋಗ್ಯ ಕೇಂದ್ರ ಆರಂಭಿಸಿ. ಶಿರಾ ತಾಲ್ಲೂಕು ಗಾಣದ ಹುಣಸೆಯಲ್ಲಿರುವ ಶಿಕ್ಷಣ ಸಂಸ್ಥೆಯನ್ನು ವಿಸ್ತರಿಸಿ, ತುಮಕೂರು-ನೆಲಮಂಗಲ ಪ್ರದೇಶದಲ್ಲಿ ಇನ್ನೊಂದು ಶಿಕ್ಷಣ ಸಂಸ್ಥೆ ಆರಂಭಿಸಿ ಎಂದು ಜಿಲ್ಲೆಯ ಜನರ ಪರವಾಗಿ ಮನವಿ ಮಾಡಿದರು.
ಟಿ.ಸಿ.ಪ್ರವೀಣ್ ಕುಮಾರ್ ನಿರೂಪಿಸಿದರು. ಕೇಂದ್ರಸಚಿವ ವಿ.ಸೋಮಣ್ಣ,ಡಾ||ಹುಲಿನಾಯ್ಕರ್, ಶಾಸಕ ಜಿ.ಬಿ.ಜ್ಯೋತಿಗಣೇಶ್, ನಾಗಣ್ಣ ಇತರರು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ.
