ಆಲೂರು: ತಾಲ್ಲೂಕಿನ ಕದಾಳು, ಕಬ್ಬಿನಹಳ್ಳಿ, ಬಿಲುಗುಂದ, ಮುಳುಗಡೆ ಹಾಗೂ ಗೊದ್ದನಕೊಪ್ಪಲು ಗ್ರಾಮಗಳ ಜನರಲ್ಲಿ ಹಲವು ದಿನಗಳಿಂದ ಆತಂಕ ಮೂಡಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಕೊನೆಗೂ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.
ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ವಿಶೇಷ ಕಾರ್ಯಾಚರಣೆ ಕೈಗೊಂಡು, ಎರಡು ದಿನಗಳ ಹಿಂದೆ ಕದಾಳು ಹಾಗೂ ಬಿಲುಗುಂದ ಗ್ರಾಮದ ಸುತ್ತಮುತ್ತ ಎರಡು–ಮೂರು ಕಡೆಗಳಲ್ಲಿ ಬೋನುಗಳನ್ನು ಅಳವಡಿಸಿತ್ತು. ಆದರೆ ಚಿರತೆ ಬೋನಿಗೆ ಬೀಳದೆ ಗ್ರಾಮಸ್ಥರಲ್ಲಿ ಆತಂಕ ಮುಂದುವರಿದಿತ್ತು.
ಶುಕ್ರವಾರ ರಾತ್ರಿ ಕದಾಳು ಗ್ರಾಮದ ಸಮೀಪ ಯಗಚಿ ನದಿ ದಡದಲ್ಲಿರುವ ಬಿಜೆಪಿ ಮಾಜಿ ಅಧ್ಯಕ್ಷ ಲೋಕೇಶ್ ಹಾಗೂ ನವೀನ್ ಅವರ ಜಮೀನಿನಲ್ಲಿ ಅಳವಡಿಸಿದ್ದ ಬೋನಿಗೆ ಚಿರತೆ ಬಿದ್ದಿದೆ.
ಚಿರತೆ ಸೆರೆ ಸಿಕ್ಕಿರುವ ಸುದ್ದಿ ತಿಳಿಯುತ್ತಿದ್ದಂತೆ ಹಲವು ದಿನಗಳಿಂದ ಆತಂಕದಲ್ಲಿದ್ದ ಸುತ್ತಮುತ್ತಲಿನ ಗ್ರಾಮಗಳ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಸದ್ಯ ಬೋನಿನಲ್ಲಿ ಬಂಧಿಯಾಗಿರುವ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಪರಿಶೀಲಿಸಿದ್ದು, ಮೇಲಧಿಕಾರಿಗಳ ಅನುಮತಿ ಪಡೆದ ಬಳಿಕ ಚಿರತೆಯನ್ನು ಸುರಕ್ಷಿತವಾಗಿ ಕಾಡಿಗೆ ಬಿಡುವ ಪ್ರಕ್ರಿಯೆ ನಡೆಸಲಾಗುವುದು ಎಂದು ಆಲೂರು ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.
