ಕಲೆಯ ತವರೂರು ಹಾಸನದಲ್ಲಿ ಹಲವು ರೀತಿಯ ಕಲೆಗಳನ್ನು ಪೋಷಿಸುತ್ತಾ ಬಂದಿರುವುದರಲ್ಲಿ ಚಿತ್ರಕಲಾ ಮಾಧ್ಯಮವೂ ಒಂದು. ಚಿತ್ರಕಲೆಯನ್ನು ಆರಾಧಿಸಿ, ಆ ದಿಶೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬರುತ್ತಿರುವ ಕಲಾಪ್ರತಿಭೆ ಮಂಜುಳಾ ಅವರು ತಮ್ಮ ಇತ್ತೀಚಿನ ಕಲಾಕೃತಿಗಳೊಂದಿಗೆ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಹಾಸನದ ಸಂಸ್ಕೃತ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದರು.
ಹಾಸನಕ್ಕೆ ಹೊಂದಿಕೊಂಡಿರುವ ರಾಜಘಟ್ಟ ಮಂಜುಳಾ ಅವರ ಊರು. ಇವರ ತಂದೆ ರಂಗೇಗೌಡರು ಹಾಗೂ ತಾಯಿ ಹನುಮಮ್ಮ. ಬಾಲ್ಯದಿಂದಲೂ ಚಿತ್ರಕಲೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಮಂಜುಳಾ ಅವರು ಪಿಯುಸಿ ನಂತರ ನೇರವಾಗಿ ಹಾಸನದ ಶಾಂತಲಾ ಚಿತ್ರಕಲಾ ಕಾಲೇಜಿಗೆ ಸೇರ್ಪಡೆಯಾದರು. ಅಲ್ಲಿ ಐದು ವರ್ಷಗಳ ಕಾಲ ಚಿತ್ರಕಲೆಯ ವಿವಿಧ ಆಯಾಮಗಳನ್ನು ಅಭ್ಯಾಸ ಮಾಡಿದರು.

ವ್ಯಾಸಂಗ ಪೂರ್ಣಗೊಂಡ ನಂತರ ಕುವೆಂಪು ಶಾಲೆಯಲ್ಲಿ ಶಿಕ್ಷಕಿಯಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಹಾಸನದ ಪ್ರತಿಷ್ಠಿತ ಯೂರೋ ಶಾಲೆ ಹಾಗೂ ಸೇಜಿಯಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಸುಮಾರು 10 ವರ್ಷಗಳ ಕಾಲ ಚಿತ್ರಕಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಿಡುವಿನ ವೇಳೆಯಲ್ಲಿಯೂ ಚಿತ್ರಕಲೆಯ ಬಗ್ಗೆ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಹಲವು ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿದ್ದಾರೆ.

ಮಂಜುಳಾ ಅವರ ಕಲಾಕೃತಿಗಳನ್ನು ವೀಕ್ಷಿಸುತ್ತಿದ್ದಾಗ, ಅವರ ಪೇಂಟಿಂಗ್ಗಳ ಕುರಿತು ವಿವರಿಸುವಂತೆ ಕೇಳಿದೆ. ಅದಕ್ಕೆ ಅವರು, “ಈ ಪೇಂಟಿಂಗ್ ಸ್ತ್ರೀ ಸೌಂದರ್ಯ, ಆಂತರಿಕ ಶಾಂತಿ, ಪ್ರಕೃತಿ ಮತ್ತು ಸೃಜನಶೀಲತೆಯ ಸುಂದರ ಸಂಯೋಜನೆಯಾಗಿದೆ. ಚಿತ್ರದಲ್ಲಿ ಇಬ್ಬರು ಮಹಿಳೆಯರ ಮುಖಗಳು ಒಂದಕ್ಕೊಂದು ಹತ್ತಿರವಾಗಿ ಕಾಣುತ್ತವೆ. ಇಬ್ಬರ ಮುಚ್ಚಿದ ಕಣ್ಣುಗಳು ಹಾಗೂ ಶಾಂತ ಮುಖಭಾವ ಮನಸ್ಸಿನ ನೆಮ್ಮದಿ, ಧ್ಯಾನ ಮತ್ತು ಆತ್ಮಶಾಂತಿಯನ್ನು ಪ್ರತಿಬಿಂಬಿಸುತ್ತವೆ. ಚಿತ್ರದಲ್ಲಿ ಬಳಸಿರುವ ಹಸಿರು ಮತ್ತು ನೀಲಿ ಬಣ್ಣಗಳು ಪ್ರಕೃತಿ, ತಾಜಾತನ ಹಾಗೂ ಶಾಂತಿಯ ಸಂಕೇತಗಳಾಗಿವೆ” ಎಂದು ವಿವರಿಸಿದರು.

“ತುಟಿಗೆ ಹಚ್ಚಿರುವ ಕೆಂಪು ಬಣ್ಣವು ಚಿತ್ರಕ್ಕೆ ಆಕರ್ಷಣೆಯನ್ನು ನೀಡಿದೆ ಅಲ್ಲವೇ?” ಎಂದು ಕೇಳಿದಾಗ ನಗುತ್ತಾ ಮುಂದುವರಿದ ಅವರು, “ಈ ಕಲಾಕೃತಿ ಆಫ್ರಿಕನ್ ಸಂಸ್ಕೃತಿ, ಸೌಂದರ್ಯ ಹಾಗೂ ಮಹಿಳಾ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಚಿತ್ರದಲ್ಲಿ ಇಬ್ಬರು ಮಹಿಳೆಯರನ್ನು ಬದಿಯಿಂದ ಚಿತ್ರಿಸಿದ್ದೇನೆ. ಅವರ ಕಪ್ಪುಬಣ್ಣದ ಮುಖ ಹಾಗೂ ದೇಹಕ್ಕೆ ಬಳಸಿರುವ ಕೆಂಪು, ಬಿಳಿ, ಕಪ್ಪು ಮತ್ತು ಕಂದು ಬಣ್ಣಗಳು ಚಿತ್ರಕ್ಕೆ ಗಾಢ ಹಾಗೂ ಆಕರ್ಷಕ ರೂಪವನ್ನು ನೀಡಿವೆ. ಮಹಿಳೆಯರು ದೊಡ್ಡ ಸಾಂಪ್ರದಾಯಿಕ ಕಿವಿಯೋಲೆ, ಕಂಠಹಾರ ಹಾಗೂ ಅಲಂಕಾರಿಕ ಉಡುಪುಗಳನ್ನು ಧರಿಸಿದ್ದಾರೆ. ಅವರ ತಲೆಯ ಅಲಂಕಾರ ಮತ್ತು ಕೂದಲಿನ ವಿನ್ಯಾಸವೂ ಅವರ ಸಾಂಸ್ಕೃತಿಕ ಗುರುತನ್ನು ಪ್ರತಿಬಿಂಬಿಸುತ್ತದೆ. ಮುಖದ ಮೇಲಿರುವ ಬಿಳಿ ಚುಕ್ಕೆಗಳು ಮತ್ತು ರೇಖೆಗಳು ಸಾಂಪ್ರದಾಯಿಕ ದೇಹ ಅಲಂಕಾರದ ಸಂಕೇತಗಳಾಗಿವೆ” ಎಂದರು.

ಮುಂದಿನ ಕಲಾಕೃತಿಯ ಕುರಿತು ವಿವರಿಸುತ್ತಾ, “ಇದು ಆಫ್ರಿಕನ್ ಬುಡಕಟ್ಟು ಸಂಸ್ಕೃತಿಯ ಮಹಿಳೆಯರ ಸೌಂದರ್ಯ ಹಾಗೂ ಸಾಂಪ್ರದಾಯಿಕ ಜೀವನಶೈಲಿಯನ್ನು ವಿಶಿಷ್ಟ ಶೈಲಿಯಲ್ಲಿ ಚಿತ್ರಿಸಿರುವ ಕಲಾಕೃತಿ. ಚಿತ್ರದಲ್ಲಿ ಇಬ್ಬರು ಮಹಿಳೆಯರು ಪರಸ್ಪರ ಎದುರು ನಿಂತಿರುವಂತೆ ಕಾಣುತ್ತಾರೆ. ಅವರ ಉದ್ದನೆಯ ದೇಹಾಕೃತಿ ಹಾಗೂ ಸರಳ ಮುಖ ವಿನ್ಯಾಸವು ಕಲಾಕೃತಿಗೆ ವಿಶಿಷ್ಟವಾದ ಸಾಂಪ್ರದಾಯಿಕ ಮತ್ತು ಅಲಂಕಾರಿಕ ಶೈಲಿಯನ್ನು ನೀಡಿದೆ. ಉಡುಪು, ಕಂಠಹಾರ, ಕೈ–ಕಾಲಿನ ಆಭರಣಗಳು, ತಲೆಯ ಅಲಂಕಾರ ಹಾಗೂ ಉಡುಪುಗಳ ಮೇಲಿನ ಕೆಂಪು, ಹಸಿರು, ಬಿಳಿ ಮತ್ತು ಕಿತ್ತಳೆ ಬಣ್ಣದ ಜ್ಯಾಮಿತೀಯ ವಿನ್ಯಾಸಗಳು ಅವರ ಸಾಂಸ್ಕೃತಿಕ ಪರಂಪರೆಯನ್ನು ತೋರಿಸುತ್ತವೆ” ಎಂದು ಹೇಳಿದರು.
ಮತ್ತೊಂದು ಕಲಾಕೃತಿ ಭಕ್ತಿ ಸಂಪ್ರದಾಯ ಮತ್ತು ಭಾರತೀಯ ಸಂಸ್ಕೃತಿಯ ಸೊಬಗನ್ನು ಪ್ರತಿಬಿಂಬಿಸುತ್ತದೆ. ಚಿತ್ರದಲ್ಲಿ ಮಹಿಳೆಯೊಬ್ಬರು ದೇವಾಲಯದ ಒಳಗೆ ಭಕ್ತಿಯಿಂದ ನಂದಿಯ ಮುಂದೆ ಪೂಜೆ ಸಲ್ಲಿಸುತ್ತಿರುವ ದೃಶ್ಯವನ್ನು ಚಿತ್ರಿಸಲಾಗಿದೆ. ಕಪ್ಪು ಬಣ್ಣದಲ್ಲಿ ಚಿತ್ರಿಸಿರುವ ನಂದಿ ವಿಗ್ರಹವು ಗಂಭೀರತೆ ಹಾಗೂ ದೈವಿಕತೆಯನ್ನು ಬಿಂಬಿಸುತ್ತದೆ. ನಂದಿಗೆ ಹೂವಿನ ಹಾರದಿಂದ ಅಲಂಕಾರ ಮಾಡಲಾಗಿದೆ. ಮುಂದೆ ಪೂಜಾ ಸಾಮಗ್ರಿಗಳಿದ್ದು, ಮಹಿಳೆಯ ಒಂದು ಕೈಯಲ್ಲಿ ಹೂವುಗಳ ತಟ್ಟೆಯಿದ್ದರೆ, ಮತ್ತೊಂದು ಕೈಯಲ್ಲಿ ಗಂಟೆ ಬಾರಿಸುತ್ತಿರುವ ದೃಶ್ಯವಿದೆ.
ಶಾಲೆಯ ಸಮಯ ಮುಗಿಯಿತು. ಡಣ್… ಡಣ್… ಎಂದು ಗಂಟೆಯ ಸದ್ದು ಕೇಳಿಸಿತು. ಮಂಜುಳಾ ಅವರ ಕಲಾಕೃತಿಗಳಲ್ಲಿನ ಸ್ತ್ರೀ ಸೌಂದರ್ಯ, ಸಾಂಸ್ಕೃತಿಕ ವೈವಿಧ್ಯತೆ ಹಾಗೂ ದೈವಭಕ್ತಿಯ ಅಭಿವ್ಯಕ್ತಿಯನ್ನು ಮನದಲ್ಲಿಟ್ಟುಕೊಂಡು ಅವರಿಗೆ ನಮಸ್ಕಾರ ಹೇಳಿ ಕಲಾ ಪ್ರದರ್ಶನದಿಂದ ಹೊರಬಂದೆ.
ಗೊರೂರು ಅನಂತರಾಜು, ಹಾಸನ
ಮೊ.: 9449462879
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, 3ನೇ ಕ್ರಾಸ್, ಹಾಸನ–573201.
