ಶ್ಲೋಕ – 05
ದೈವೀ ಸಂಪದ್ ವಿಮೋಕ್ಷಾಯ ನಿಬಂಧಾಯಾSಸುರೀ ಮತಾ ।
ಮಾ ಶುಚಃ ಸಂಪದಂ ದೈವೀಮಭಿಜಾತೋSಸಿ ಪಾಂಡವ ॥೫॥
ದೈವೀ ಸಂಪತ್ ವಿಮೋಕ್ಷಾಯ ನಿಬಂಧಾಯ ಆಸುರೀ ಮತಾ ।
ಮಾ ಶುಚಃ ಸಂಪದಮ್ ದೈವೀಮ್ ಅಭಿಜಾತಃ ಅಸಿ ಪಾಂಡವ –ಒಳ್ಳೆಯ ನಡತೆ ಬಿಡುಗಡೆಯ ದಾರಿ. ಕೆಡುನಡೆ ತಮಸ್ಸಿನ ಸೆರೆಯ ದಾರಿ. ಪಾಂಡವ, ಕೊರಗಬೇಡ. ನೀನು ಒಳಿತಿನ ದಾರಿಯನ್ನು ಮೈಗೂಡಿಸಿಕೊಂಡವನು.
ಏಕೆ ದೈವೀ ಸಂಪತ್ತನ್ನು ನಾವು ಬೆಳಸಿಕೊಳ್ಳಬೇಕು ಎನ್ನುವುದನ್ನು ಕೃಷ್ಣ ವಿವರಿಸುತ್ತ ಹೇಳುತ್ತಾನೆ: “ದೈವೀ ಸಂಪತ್ತು ವಿಮೋಕ್ಷಕ್ಕೆ ಕಾರಣವಾಗುತ್ತದೆ, ಆಸುರೀ ಸ್ವಭಾವ ನಿಬಂಧಕ್ಕೆ ಕಾರಣವಾಗುತ್ತದೆ” ಎಂದು. ಇಲ್ಲಿ ಕೃಷ್ಣ ‘ವಿ-ಮೋಕ್ಷ’ ಮತ್ತು ‘ನಿ-ಬಂಧ’ ಎಂದು ವಿಶೇಷವಾಗಿ ಹೇಳಿದ್ದಾನೆ. ವಿ-ಮೋಕ್ಷ ಎಂದರೆ ಅವರವರ ಸಾಧನೆಗೆ ತಕ್ಕಂತೆ ವಿವಿಧ ಸ್ಥರದಲ್ಲಿ ವ್ಯಕ್ತಿತ್ವ ವಿಕಾಸ ಮತ್ತು ಮೋಕ್ಷ. ‘ನಿ-ಬಂಧ’ ಎಂದರೆ ಸಂಸಾರ ಬಂಧವಲ್ಲ. ಇದು ನೀಚ ಬಂಧ. ನಮ್ಮನ್ನು ಕತ್ತಲೆಯ ತಮಸ್ಸಿಗೆ ತಳ್ಳುವ ಬಂಧ.
ಕೃಷ್ಣ ಅರ್ಜುನನನ್ನು ಕುರಿತು ಹೇಳುತ್ತಾನೆ: “ನೀನು ದೈವೀ ಸಂಪತ್ತಿನ ಪೂರ್ಣಪ್ರಮಾಣದ ಆವಿಷ್ಕಾರ. ಅದಕ್ಕಾಗಿ ದೈವೀ ಸಂಪತ್ತಿನ ಮನೆಯನ್ನು ಹುಡುಕಿ ಹುಟ್ಟಿದ್ದೀಯ, ನಿನ್ನ ಸ್ವಭಾವ ಮತ್ತು ನೀನು ಹುಟ್ಟಿದ ಮನೆತನದ ಪ್ರಭಾವ ಒಂದಕ್ಕೊಂದು ಪೂರಕ, ಇದಕ್ಕಾಗಿ ಚಿಂತಿಸಬೇಡ” ಎಂದು.
