ರಾಮನಾಥಪುರ:ಇಲ್ಲಿನ ಬಸವೇಶ್ವರ ವೃತ್ತದಲ್ಲಿರುವ ಶ್ರೀ ಪಟ್ಟಾಭಿರಾಮ ಗ್ರಾಮಾಂತರ ಪ್ರೌಢಶಾಲೆಯ ಆವರಣದಲ್ಲಿ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ 2026-27ನೇ ಸಾಲಿನ 14 ವರ್ಷ ವಯೋಮಿತಿಯ ರಾಮನಾಥಪುರ ಹೋಬಳಿ ಮಟ್ಟದ ಕ್ರೀಡಾಕೂಟ ನಡೆಯಿತು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಾದ ಗಂಗೂರು, ಜೆ. ಹೊಸಳ್ಳಿ, ಲಕ್ಕೂರು, ಹಂಪಾಪುರ, ಮಲ್ಲಾಪುರ ಹಾಗೂ ರಾಗಿಮರೂರು ಶಾಲೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಈ ಕ್ರೀಡಾಕೂಟದಲ್ಲಿ ರಾಮನಾಥಪುರ ಹೋಬಳಿಯ ಒಟ್ಟು 35 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕ್ರೀಡಾಕೂಟದಲ್ಲಿ ರಾಮನಾಥಪುರದ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ಬಾಲಕಿಯರ ವಿಭಾಗದಲ್ಲಿ ಅತಿ ಹೆಚ್ಚು ಕ್ರೀಡಾ ಅಂಕಗಳನ್ನು ಗಳಿಸುವ ಮೂಲಕ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿನಿಯರು 2026-27ನೇ ಸಾಲಿನ 14 ವರ್ಷ ವಯೋಮಿತಿಯ ರಾಮನಾಥಪುರ ಹೋಬಳಿ ಮಟ್ಟದ ಸಮಗ್ರ ಬಾಲಕಿಯರ ಪ್ರಶಸ್ತಿಯನ್ನು ಪಡೆದುಕೊಂಡರು.
ಅದೇ ರೀತಿ ಬಾಲಕ ಮತ್ತು ಬಾಲಕಿಯರ ಎರಡೂ ವಿಭಾಗಗಳಲ್ಲಿ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಅತಿ ಹೆಚ್ಚು ಕ್ರೀಡಾ ಅಂಕಗಳನ್ನು ಗಳಿಸಿ ಈ ಸಾಲಿನ ಸಮಗ್ರ ಚಾಂಪಿಯನ್ ಪ್ರಶಸ್ತಿಗೆ ಭಾಜನರಾದರು.
ಬಾಲಕರ ವಿಭಾಗದ ವೀರಾಗ್ರಣಿ ಪ್ರಶಸ್ತಿಯನ್ನು ಹೇಮಚಂದ್ರ ಬಿ.ಎನ್. ಹಾಗೂ ಬಾಲಕಿಯರ ವಿಭಾಗದ ವೀರಾಗ್ರಣಿ ಪ್ರಶಸ್ತಿಯನ್ನು ಹಿತೈಷಿ ಜಿ. ಪಡೆದುಕೊಂಡರು.
ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ ಮಾಡಿ ಪ್ರಶಸ್ತಿಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ವಿದ್ಯಾನಿಕೇತನ ಶಾಲೆಯ ಅಧ್ಯಕ್ಷ ವಿರೂಪಾಕ್ಷ ಹಾಗೂ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
ವರದಿ : ಕುಮಾರಸ್ವಾಮಿ ರಾಮನಾಥಪುರ
