ರಾಮನಾಥಪುರ : ಶ್ರೀ ಉತ್ತರಾದಿ ಮಠದಲ್ಲಿ ಶನಿವಾರ ಸಂಜೆ ನಡೆದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಆರಾಧನಾ ಮಹೋತ್ಸವದಲ್ಲಿ ಭಕ್ತರಿಗೆ ಮಹಾದಾಸೋಹ ಏರ್ಪಡಿಸಿರುವುದು.
ಸಮಾಜದ ಎಲ್ಲಾ ವರ್ಗದ ಜನರಿಗೂ ಸುಲಭವಾಗಿ ಒಲಿಯುವ ಕಾಮಧೇನು ಮತ್ತು ಕಲ್ಪವೃಕ್ಷದಂತಿರುವವರು ಶ್ರೀ ರಾಘವೇಂದ್ರ ಗುರುಸಾರ್ವಭೌಮರು. ಪ್ರಪಂಚಕ್ಕೆ ಆಸ್ತಿಕತೆ ಮತ್ತು ಆಧ್ಯಾತ್ಮಿಕತೆಯ ಮಾರ್ಗವನ್ನು ತೋರಿದ ವಿಶ್ವಗುರುಗಳಾಗಿರುವ ರಾಯರು, ತಮ್ಮ ಭೌತಿಕ ಜೀವನವನ್ನು ತ್ಯಜಿಸಿ ಬೃಂದಾವನ ಪ್ರವೇಶಿಸಿ ಇಂದಿಗೂ ಸಮಸ್ತ ಭಕ್ತರನ್ನು ಅನುಗ್ರಹಿಸುತ್ತಿದ್ದಾರೆ ಎಂದು ಶ್ರೀ ರಾಘವೇಂದ್ರಸ್ವಾಮಿ ಮಠದ ವ್ಯವಸ್ಥಾಪಕ ವೇದಮೂರ್ತಿ ಕನಕಾಚಾರ್ಯರು ತಿಳಿಸಿದರು.
ರಾಮನಾಥಪುರದ ಶ್ರೀ ಉತ್ತರಾದಿ ಮಠದಲ್ಲಿ ಮೂರನೇ ದಿನವಾದ ಶನಿವಾರ ಸಂಜೆ ನಡೆದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಮಹಾಮಂಗಳಾರತಿ ಹಾಗೂ ಮಹಾದಾಸೋಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಮನಾಥಪುರದಲ್ಲಿ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಪೂರ್ವಾರಾಧನಾ ಮಹೋತ್ಸವವು ಅತ್ಯಂತ ಭಕ್ತಿ, ಶ್ರದ್ಧೆ ಹಾಗೂ ವಿಜೃಂಭಣೆಯಿಂದ ನಡೆಯುತ್ತಿದ್ದು, ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಆರಾಧನಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಪ್ರತಿದಿನ ದಾಸೋಹದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಆರ್.ಕೆ. ಶ್ರೀನಿವಾಸ ಅಯ್ಯಂಗಾರ್, ಅಂದಿನ ಸೇವಾಕರ್ತರಾದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಮುಖ್ಯ ಅರ್ಚಕ ವೇದಮೂರ್ತಿ ಶ್ರೀನಾಥ್, ಸಮಾಜಸೇವಕರಾದ ನಾಗೇಶ್, ಮೋಕ್ಷ, ವಿರೂಪಾಕ್ಷ, ಧರ್ಮ, ಪ್ರಕಾಶ್, ಸಿದ್ದಯ್ಯ ಸೇರಿದಂತೆ ಹಲವರನ್ನು ಶ್ರೀಮಠದ ವ್ಯವಸ್ಥಾಪಕ ಕನಕಾಚಾರ್ಯರು ಗೌರವಿಸಿದರು.
ವರದಿ : ಕುಮಾರಸ್ವಾಮಿ ರಾಮನಾಥಪುರ
