ಶ್ಲೋಕ – 06
ದ್ವೌ ಭೂತಸರ್ಗೌ ಲೋಕೇSಸ್ಮಿನ್ ದೈವ ಆಸುರ ಏವ ಚ ।
ದೈವೋ ವಿಸ್ತರಶಃ ಪ್ರೋಕ್ತ ಆಸುರಂ ಪಾರ್ಥ ಮೇ ಶೃಣು ॥೬॥
ದ್ವೌ ಭೂತಸರ್ಗೌ ಲೋಕೇ ಅಸ್ಮಿನ್ ದೈವಃ ಆಸುರಃ ಏವ ಚ ।
ದೈವಃ ವಿಸ್ತರಶಃ ಪ್ರೋಕ್ತಃ ಆಸುರಮ್ ಪಾರ್ಥ ಮೇ ಶೃಣು –ಈ ವಿಶ್ವದಲ್ಲಿ ಎರಡು ಬಗೆಯ ಜೀವಸೃಷ್ಟಿಗಳಿವೆ: ದೈವ[ಒಳ್ನಡೆಯದು] ಮತ್ತು ಆಸುರ [ಕೆಡುನಡೆಯದು]. ಒಳ್ನಡೆಯ ಬಗೆಯನ್ನು ಬಿತ್ತರಿಸಿ ಹೇಳಿದ್ದಾಯಿತು, ಪಾರ್ಥ, ಕೆಡುನಡೆಯ ಬಿತ್ತರವನ್ನು ನನ್ನಿಂದ ಕೇಳು.
ಈ ವಿಶ್ವದಲ್ಲಿ ಮೂಲಭೂತವಾಗಿ ಎರಡು ಬಗೆಯ ಮಾನವರಿದ್ದಾರೆ: ಭಗವಂತನೆಡೆಗೆ ಮುಖ ಮಾಡಿ ಸಾಗುವ ದೈವೀ ನಡೆಯುಳ್ಳವರು ಮತ್ತು ಭಗವಂತನಿಗೆ ಬೆನ್ನು ಹಾಕಿ ಸಾಗುವ ಆಸುರೀ ನಡೆಯವರು. ಈ ಎರಡು ವಿಭಾಗದಲ್ಲಿ ಇಲ್ಲಿಯ ತನಕ ದೈವೀ ಸ್ವಭಾವದ ಬಗ್ಗೆ ವಿಸ್ತಾರವಾಗಿ ನೋಡಿದೆವು. ನಮ್ಮ ಆಂತರಿಕ ಮತ್ತು ಸಾಮಾಜಿಕ ನಡೆಯ ಬಗ್ಗೆ ವಿಸ್ತಾರವಾದ ಚಿತ್ರಣ ಕೊಟ್ಟ ಬಳಿಕ ಕೃಷ್ಣ, ಇಲ್ಲಿ ಆಸುರೀ ಸ್ವಭಾವದವರ ನಡೆ-ನುಡಿಗಳ ಬಗ್ಗೆ ವಿವರಿಸುತ್ತಾನೆ. ಈ ಮೂಲಕ ನಾವು ‘ಯಾವ ರೀತಿ ಇರಬಾರದು’ ಅನ್ನುವುದನ್ನು ಕೃಷ್ಣ ನಮಗೆ ತಿಳಿಸಿ ಹೇಳುತ್ತಾನೆ.
