ಬೆಂಗಳೂರು, ಆ.26, 2026: ಭಾರತದಲ್ಲಿ ಏರ್ಬಿಎನ್ಬಿ ವೇದಿಕೆಯ ಮೂಲಕ ಆತಿಥ್ಯ ಸೇವೆ ಒದಗಿಸುತ್ತಿರುವ ಜೆನ್ಝೀ (18ರಿಂದ 29 ವರ್ಷ ವಯಸ್ಸಿನವರು) ತಲೆಮಾರಿನವರ ಸಂಖ್ಯೆ ಕಳೆದ ಒಂದು ವರ್ಷದಲ್ಲಿ ಸರಿಸುಮಾರು ಶೇ.40ರಷ್ಟು ಹೆಚ್ಚಳ ಕಂಡಿದೆ. 2026ರ ಪ್ರಥಮಾರ್ಧದಲ್ಲಿ ಏರ್ಬಿಎನ್ಬಿ ವೇದಿಕೆಗೆ ಸೇರ್ಪಡೆಯಾದ ಹೊಸ ಆತಿಥೇಯರಲ್ಲಿ ಪ್ರತಿ ಐದು ಮಂದಿಯಲ್ಲಿ ಇಬ್ಬರು ಜೆನ್ಝೀ ತಲೆಮಾರಿನವರಾಗಿದ್ದಾರೆ ಎಂದು ಸಂಸ್ಥೆಯ ದತ್ತಾಂಶ ತಿಳಿಸಿದೆ.
ಭಾರತೀಯ ಜೆನ್ಝೀ ಯುವಕರ ಪ್ರವಾಸದ ಹವ್ಯಾಸಗಳು ಬದಲಾಗುತ್ತಿರುವುದರ ಜತೆಗೆ, ತಮ್ಮ ಮನೆಗಳನ್ನೇ ಪ್ರವಾಸಿಗರಿಗೆ ತೆರೆಯುವ ಮೂಲಕ ಆತಿಥ್ಯ ಕ್ಷೇತ್ರದಲ್ಲಿಯೂ ಹೊಸ ಹೆಜ್ಜೆ ಇಡುತ್ತಿದ್ದಾರೆ. ದೇಶದ ಮಹಾನಗರಗಳು ಮಾತ್ರವಲ್ಲದೆ, ಬೆಳವಣಿಗೆ ಕಾಣುತ್ತಿರುವ ನಗರಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿಯೂ ಯುವಕರು ಏರ್ಬಿಎನ್ಬಿ ಮೂಲಕ ಆತಿಥ್ಯ ಸೇವೆ ನೀಡುತ್ತಿದ್ದಾರೆ.
ಈ ವರ್ಷದ ಆರಂಭದಲ್ಲಿ ಏರ್ಬಿಎನ್ಬಿ ಬಿಡುಗಡೆ ಮಾಡಿದ್ದ ‘ನೆವರ್ ದಿ ಸೇಮ್’ ವರದಿಯಲ್ಲಿಯೂ ಜೆನ್ಝೀ ತಲೆಮಾರಿನವರಿಂದಾಗಿ ಭಾರತದಲ್ಲಿನ ಪ್ರವಾಸ ಮತ್ತು ಪ್ರಯಾಣದ ಹವ್ಯಾಸಗಳಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರುತ್ತಿವೆ ಎಂದು ತಿಳಿಸಲಾಗಿತ್ತು.
ಇಂದೋರ್ನಲ್ಲಿ ಶೇ.120ರಷ್ಟು ಏರಿಕೆ
ಬೆಂಗಳೂರು, ದೆಹಲಿ, ಗುರುಗ್ರಾಮ, ಇಂದೋರ್, ಮುಂಬೈ ಮತ್ತು ನೋಯ್ಡಾದಲ್ಲಿ ಜೆನ್ಝೀ ಆತಿಥೇಯರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇಂದೋರ್ನಲ್ಲಿ ಜೆನ್ಝೀ ಆತಿಥೇಯರ ಪ್ರಮಾಣವು ಶೇ.120ರಷ್ಟು ಹೆಚ್ಚಳ ಕಂಡಿದೆ.
ಡೆಹ್ರಾಡೂನ್, ಗುವಾಹಟಿ, ಹೈದರಾಬಾದ್, ಕೊಚ್ಚಿ, ಲಖನೌ ಮತ್ತು ಮಥುರಾದಲ್ಲಿಯೂ ಯುವಕರು ಆತಿಥ್ಯ ಸೇವೆ ನೀಡುವ ಪ್ರಮಾಣ ಹೆಚ್ಚಾಗಿದೆ.
ಡೆಹ್ರಾಡೂನ್ನ ಜೆನ್ಝೀ ಆತಿಥೇಯರಾದ ಶ್ರೇಯಾ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಡೆಹ್ರಾಡೂನ್ಗೆ ಮರಳಿದ ಬಳಿಕ ತಮ್ಮ ಮನೆಯ ಹೂದೋಟ, ಪ್ರಶಾಂತ ವಾತಾವರಣ ಮತ್ತು ನೆಮ್ಮದಿಯ ಬದುಕನ್ನು ಹೊಸ ದೃಷ್ಟಿಕೋನದಿಂದ ನೋಡಲು ಆರಂಭಿಸಿದ್ದಾಗಿ ಅವರು ಹೇಳಿದ್ದಾರೆ. ತಾಯಿಯ ಪ್ರೋತ್ಸಾಹದಿಂದ ಮನೆಯ ಮೊದಲ ಮಹಡಿಯನ್ನು ಅತಿಥಿಗಳಿಗೆ ನೀಡಲು ಆರಂಭಿಸಿದ್ದು, ಏರ್ಬಿಎನ್ಬಿ ಮೂಲಕ ಆತಿಥ್ಯ ಒದಗಿಸುವುದರಿಂದ ಕುಟುಂಬದೊಂದಿಗೆ ಸಮಯ ಕಳೆಯುವುದರ ಜತೆಗೆ ಪ್ರವಾಸ ಮತ್ತು ಸುಸ್ಥಿರ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಳ್ಳಲು ಅವಕಾಶ ದೊರೆತಿದೆ ಎಂದು ತಿಳಿಸಿದ್ದಾರೆ.
ಆದಾಯದಲ್ಲೂ ಶೇ.60ಕ್ಕಿಂತ ಹೆಚ್ಚು ಹೆಚ್ಚಳ
ಏರ್ಬಿಎನ್ಬಿ ಮೂಲಕ ಆತಿಥ್ಯ ಸೇವೆ ಒದಗಿಸುತ್ತಿರುವ ಜೆನ್ಝೀ ತಲೆಮಾರಿನವರ ಆದಾಯದಲ್ಲಿಯೂ ಗಮನಾರ್ಹ ಏರಿಕೆ ಕಂಡುಬಂದಿದೆ. 2026ರ ಪ್ರಥಮಾರ್ಧದಲ್ಲಿ ಈ ಯುವ ಆತಿಥೇಯರು ಗಳಿಸಿದ ಆದಾಯವು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.60ಕ್ಕಿಂತ ಹೆಚ್ಚು ಹೆಚ್ಚಾಗಿದೆ.
ಅದೇ ರೀತಿ, ಭಾರತದಲ್ಲಿ ಏರ್ಬಿಎನ್ಬಿ ಮೂಲಕ ಆತಿಥ್ಯ ಸೇವೆ ಒದಗಿಸುತ್ತಿರುವ ಜೆನ್ಝೀ ಆತಿಥೇಯರಲ್ಲಿ ಪ್ರತಿ ಏಳು ಮಂದಿಯಲ್ಲಿ ಒಬ್ಬರು ‘ಸೂಪರ್ಹೋಸ್ಟ್’ ಮಾನ್ಯತೆ ಪಡೆದಿದ್ದಾರೆ. ಆತಿಥ್ಯ ಸೇವೆಯಲ್ಲಿ ನಿರಂತರತೆ ಮತ್ತು ಉತ್ತಮ ಗುಣಮಟ್ಟ ಕಾಯ್ದುಕೊಂಡಿರುವವರಿಗೆ ಏರ್ಬಿಎನ್ಬಿ ನೀಡುವ ಮಾನ್ಯತೆ ಇದಾಗಿದೆ.
ನಗರಗಳಾಚೆಗೂ ವಿಸ್ತರಣೆ
ಜೆನ್ಝೀ ಯುವಕರ ಆತಿಥ್ಯ ಸೇವೆಯ ಬೆಳವಣಿಗೆಯ ಮತ್ತೊಂದು ಗಮನಾರ್ಹ ಅಂಶವೆಂದರೆ ಅದು ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಆತಿಥ್ಯ ಸೇವೆ ನೀಡುತ್ತಿರುವ ಜೆನ್ಝೀ ಆತಿಥೇಯರ ಸಂಖ್ಯೆ ಶೇ.60ರಷ್ಟು ಹೆಚ್ಚಾಗಿದೆ. ಕಡಿಮೆ ಜನಸಂಖ್ಯೆ ಹೊಂದಿರುವ ನಗರ ಪ್ರದೇಶಗಳಲ್ಲಿ ಈ ಪ್ರಮಾಣ ಸರಿಸುಮಾರು ಶೇ.70ರಷ್ಟು ಏರಿಕೆಯಾಗಿದೆ.
ಇದರಿಂದ ಪ್ರವಾಸಿಗರಿಗೆ ಸ್ಥಳೀಯ ಸಂಸ್ಕೃತಿ, ಜೀವನಶೈಲಿ ಮತ್ತು ಸಮುದಾಯಗಳೊಂದಿಗೆ ಹತ್ತಿರವಾಗುವಂತಹ ವಾಸ್ತವ್ಯದ ಅವಕಾಶಗಳು ಹೆಚ್ಚಾಗುತ್ತಿವೆ. ಮತ್ತೊಂದೆಡೆ, ಸ್ಥಳೀಯ ಸಮುದಾಯಗಳಲ್ಲಿಯೂ ಯುವ ಆತಿಥೇಯರ ಮೂಲಕ ಹೊಸ ಆರ್ಥಿಕ ಅವಕಾಶಗಳು ಸೃಷ್ಟಿಯಾಗುತ್ತಿವೆ.
ಏರ್ಬಿಎನ್ಬಿ ಇಂಡಿಯಾ ಮತ್ತು ಆಗ್ನೇಯ ಏಷ್ಯಾ ವಿಭಾಗದ ಮುಖ್ಯಸ್ಥ ಅಮನ್ಪ್ರೀತ್ ಸಿಂಗ್ ಬಜಾಜ್ ಮಾತನಾಡಿ, “ಪ್ರವಾಸದಲ್ಲಿ ಭಾಗಿಯಾಗುವುದು ಹೇಗೆ ಎಂಬುದನ್ನು ಜೆನ್ಝೀ ತಲೆಮಾರಿನವರು ಹೊಸದಾಗಿ ವ್ಯಾಖ್ಯಾನಿಸುತ್ತಿದ್ದಾರೆ. ಆತಿಥ್ಯ ಸೇವೆ ಒದಗಿಸುವವರಾಗಿ ಹಾಗೂ ಉದ್ಯಮಿಗಳಾಗಿ ಅವರು ಈ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದ್ದಾರೆ. ತಮ್ಮ ಮನೆಗಳ ಬಾಗಿಲನ್ನು ಅತಿಥಿಗಳಿಗೆ ತೆರೆದು, ಸ್ಥಳೀಯ ಜ್ಞಾನವನ್ನು ಹಂಚಿಕೊಳ್ಳುವ ಮೂಲಕ ಏರ್ಬಿಎನ್ಬಿ ವೇದಿಕೆಯಲ್ಲಿ ಹೊಸ ಅವಕಾಶಗಳನ್ನು ಕಂಡುಕೊಳ್ಳುತ್ತಿದ್ದಾರೆ. ಅವರ ಸೃಜನಶೀಲತೆ, ಔದ್ಯಮಿಕ ಉತ್ಸಾಹ ಮತ್ತು ವಿಶಿಷ್ಟ ಸ್ಥಳೀಯ ದೃಷ್ಟಿಕೋನವು ಏರ್ಬಿಎನ್ಬಿ ಸಮುದಾಯಕ್ಕೆ ಹೊಸ ಆಯಾಮ ನೀಡುತ್ತಿದೆ” ಎಂದು ಹೇಳಿದರು.
ದೇಶದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಬದಲಾವಣೆಗಳು ಕಾಣಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ, ಜೆನ್ಝೀ ತಲೆಮಾರಿನ ಯುವಕರು ಭಾರತದ ವಿವಿಧ ಪ್ರದೇಶಗಳನ್ನು ಪ್ರವಾಸಿಗರಿಗೆ ಪರಿಚಯಿಸುವುದರ ಜತೆಗೆ, ಸ್ಥಳೀಯ ಮಟ್ಟದಲ್ಲಿ ಹೊಸ ಆರ್ಥಿಕ ಅವಕಾಶಗಳಿಗೂ ದಾರಿ ಮಾಡಿಕೊಡುತ್ತಿದ್ದಾರೆ.
