ಲಾಹೋರ್: ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಪೂಜಾ ಸ್ಥಳಗಳ ಮೇಲಿನ ದಾಳಿಗಳು ಮುಂದುವರಿದಿರುವ ನಡುವೆಯೇ, ನರೋವಾಲ್ ಜಿಲ್ಲೆಯ ಸಿರಾಜ್ ಗ್ರಾಮದಲ್ಲಿದ್ದ ಶತಮಾನಗಳಷ್ಟು ಹಳೆಯ ಐತಿಹಾಸಿಕ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆಗೆ ಭಾರತ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕುಗಳು ಹಾಗೂ ಅವರ ಪೂಜಾ ಸ್ಥಳಗಳ ಸುರಕ್ಷತೆ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದೆ.
ದೇವಾಲಯ ಧ್ವಂಸಗೊಳಿಸಿರುವ ವರದಿಗಳ ಕುರಿತು ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಂಧೀರ್ ಜೈಸ್ವಾಲ್, ಅಲ್ಪಸಂಖ್ಯಾತ ಸಮುದಾಯದ ಪೂಜಾ ಸ್ಥಳದ ಮೇಲೆ ನಡೆದಿರುವ ಈ ಕೃತ್ಯವನ್ನು ಭಾರತ ಬಲವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.
ಸ್ಥಳೀಯ ಆಡಳಿತ ಮತ್ತು ಪಾಕಿಸ್ತಾನ ಸರ್ಕಾರದ ನಿರ್ಲಕ್ಷ್ಯದಿಂದಲೇ ಇಂತಹ ಐತಿಹಾಸಿಕ ಧಾರ್ಮಿಕ ಸ್ಥಳ ನಾಶವಾಗಿರುವುದು ಅತ್ಯಂತ ಕಳವಳಕಾರಿ ಸಂಗತಿ ಎಂದು ಅವರು ಹೇಳಿದ್ದಾರೆ. ದೇಶದಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರು ಎದುರಿಸುತ್ತಿರುವ ಭದ್ರತಾ ಸಮಸ್ಯೆಗಳು ಹಾಗೂ ಹಕ್ಕುಗಳ ಉಲ್ಲಂಘನೆಗೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ ಎಂದು ಜೈಸ್ವಾಲ್ ಅಭಿಪ್ರಾಯಪಟ್ಟಿದ್ದಾರೆ.
ದೇವಾಲಯ ಧ್ವಂಸ ಪ್ರಕರಣದ ಬಗ್ಗೆ ಪಾಕಿಸ್ತಾನ ಸರ್ಕಾರವು ತಕ್ಷಣವೇ ಪಾರದರ್ಶಕ ಹಾಗೂ ಸಮಗ್ರ ತನಿಖೆ ನಡೆಸಬೇಕು. ಕೃತ್ಯಕ್ಕೆ ಹೊಣೆಗಾರರಾದವರನ್ನು ಗುರುತಿಸಿ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭಾರತ ಆಗ್ರಹಿಸಿದೆ.
ಅಲ್ಲದೆ, ಧ್ವಂಸಗೊಂಡ ದೇವಾಲಯವನ್ನು ಶೀಘ್ರ ಪುನರ್ನಿರ್ಮಿಸಿ, ಅದರ ಪಾವಿತ್ರ್ಯವನ್ನು ಮರುಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಪಾಕಿಸ್ತಾನಕ್ಕೆ ಭಾರತ ಒತ್ತಾಯಿಸಿದೆ.
ಅಲ್ಪಸಂಖ್ಯಾತ ನಾಗರಿಕರ ಧಾರ್ಮಿಕ ಹಕ್ಕುಗಳು, ಸಂಸ್ಕೃತಿ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವುದು ಪಾಕಿಸ್ತಾನ ಸರ್ಕಾರದ ಜವಾಬ್ದಾರಿಯಾಗಿದೆ. ಅವರ ಧಾರ್ಮಿಕ ಸ್ಥಳಗಳಿಗೆ ಸೂಕ್ತ ಭದ್ರತೆ ಒದಗಿಸುವ ಮೂಲಕ ಈ ಹೊಣೆಗಾರಿಕೆಯನ್ನು ಸರ್ಕಾರ ತಕ್ಷಣ ನಿಭಾಯಿಸಬೇಕು ಎಂದು ಭಾರತ ಸ್ಪಷ್ಟಪಡಿಸಿದೆ.
