ಬೆಂಗಳೂರು: ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಾರ್ಷಿಕ ವಿಶೇಷ ಸಂಚಿಕೆ ‘ಅಂಕುರ–ANKURA’ ಅನ್ನು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರು ಹಾಗೂ ಶಿಕ್ಷಣ ತಜ್ಞರಾದ ನಾಡೋಜ ಡಾ.ವೂಡೇ ಪಿ. ಕೃಷ್ಣ ಅವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಬದುಕಿನ ಹಲವು ತಿರುವುಗಳಿಗೆ ಮಾರ್ಗದರ್ಶನ ನೀಡುತ್ತವೆ ಎಂದರು.
‘ಅಂಕುರ’ ಸಂಚಿಕೆಯಲ್ಲಿ ವಿದ್ಯಾರ್ಥಿಗಳ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳ ಸಾಧನೆ, ಛಾಯಾಚಿತ್ರ ಹಾಗೂ ಪರಿಚಯಗಳನ್ನು ಪ್ರಕಟಿಸಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು.
ಶೇಷಾದ್ರಿಪುರಂ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೆ, ವಿಶ್ವದ ವಿವಿಧೆಡೆ ಉತ್ತಮ ಹುದ್ದೆಗಳನ್ನು ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿರುವುದನ್ನು ಸ್ಮರಿಸಿದ ಡಾ. ಕೃಷ್ಣ, ವಿದ್ಯಾರ್ಥಿಗಳ ಸಾಧನೆಗಳನ್ನು ದಾಖಲಿಸುವಲ್ಲಿ ‘ಅಂಕುರ’ ಮಹತ್ವದ ವೇದಿಕೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಆರ್. ಪ್ರಶಾಂತ್ ಮಾತನಾಡಿ, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಸಭೆಗಳನ್ನು ಆಯೋಜಿಸುವ ಮೂಲಕ ಓದು, ಬರವಣಿಗೆ ಮತ್ತು ಮೊಬೈಲ್ ಬಳಕೆಯಿಂದಾಗುವ ಅನಾನುಕೂಲಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ‘ಮೊಬೈಲ್ ಬಿಟ್ಟು, ಪೆನ್ನು–ಪುಸ್ತಕ ಹಿಡಿಯಿರಿ’ ಎಂಬ ಧ್ಯೇಯದೊಂದಿಗೆ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಚಟುವಟಿಕೆಗಳತ್ತ ಪ್ರೇರೇಪಿಸಲಾಗುತ್ತಿದೆ ಎಂದರು.
ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿನ ಲೇಖನಗಳನ್ನು ಒಳಗೊಂಡಿರುವ ‘ಅಂಕುರ’ ಸಂಚಿಕೆ ಚಿತ್ರ ಸಂಪುಟದಂತೆ ಸುಂದರವಾಗಿ ಮೂಡಿಬಂದಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಚಿಕೆಯ ಸಂಪಾದಕ ಮಂಡಳಿಯ ಸಂಚಾಲಕ ಡಾ. ಸಿಸಿರಾ, ಸದಸ್ಯರಾದ ಡಾ. ವಿ. ಮುರುಳಿ ಮೋಹನ್, ಬಿ.ವಿ. ರಾಧಿಕಾ, ಟಿ.ಜೆ. ಅರ್ಚನಾ, ಡಾ. ಕೃಷ್ಣ ಕೆ.ವಿ. ಹಾಗೂ ಟಿ.ಎಸ್. ಆಶಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
