ಚಿಕ್ಕೋಡಿ (ಬೆಳಗಾವಿ): ಮದ್ಯ ಸೇವಿಸಿ ಗಲಾಟೆ ಮಾಡಿದ ಪ್ರಕರಣದಲ್ಲಿ ಆರೋಪಿಗೆ ದಂಡ ಹಾಗೂ ಜೈಲು ಶಿಕ್ಷೆಯ ಜತೆಗೆ ಪರಿಸರ ಕಾಳಜಿಯ ವಿಭಿನ್ನ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿರುವ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ.
ಯಕ್ಸಂಬಾ ಪಟ್ಟಣದ ನಿವಾಸಿ ಅನಿಲ್ ಪೂಜಾರಿ ಅವರು ಮಾರ್ಚ್ 23ರಂದು ರಾತ್ರಿ ಮದ್ಯ ಸೇವಿಸಿ ಗಲಾಟೆ ಮಾಡಿದ್ದರು ಎನ್ನಲಾಗಿದ್ದು, ಈ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ವೇಳೆ ಅನಿಲ್ ಅವರು ತಮ್ಮ ತಪ್ಪನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದರು.
ಪ್ರಕರಣವನ್ನು ವಿಚಾರಣೆ ನಡೆಸಿದ ಚಿಕ್ಕೋಡಿಯ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಜಹೀರ ಅತನೂರ ಅವರು ಆರೋಪಿಗೆ ₹1,000 ದಂಡ ಹಾಗೂ 30 ದಿನಗಳ ಸಾದಾ ಜೈಲು ಶಿಕ್ಷೆ ವಿಧಿಸಿದರು. ಇದರೊಂದಿಗೆ, ಪರಿಸರ ಸಂರಕ್ಷಣೆಯ ಸಂದೇಶ ಸಾರುವ ರೀತಿಯಲ್ಲಿ ನ್ಯಾಯಾಲಯದ ಆವರಣದಲ್ಲಿ 25 ಹಾಗೂ ಸದಲಗಾ ಪೊಲೀಸ್ ಠಾಣೆ ಆವರಣದಲ್ಲಿ 25 ಸಸಿಗಳನ್ನು ನೆಡುವಂತೆ ಆದೇಶಿಸಿದರು.
ನ್ಯಾಯಾಲಯದ ಆದೇಶದಂತೆ ಅನಿಲ್ ಪೂಜಾರಿ ಅವರು ಆಗಸ್ಟ್ 31ರಂದು ಪತ್ನಿಯೊಂದಿಗೆ ಚಿಕ್ಕೋಡಿ ನ್ಯಾಯಾಲಯದ ಆವರಣದಲ್ಲಿ 25 ಸಸಿಗಳನ್ನು ನೆಟ್ಟರು. ಬಳಿಕ ಸದಲಗಾ ಪೊಲೀಸ್ ಠಾಣೆ ಆವರಣದಲ್ಲೂ 25 ಸಸಿಗಳನ್ನು ನೆಡುವ ಮೂಲಕ ಆದೇಶವನ್ನು ಪಾಲಿಸಿದರು.
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಬಸವರಾಜ ಓಸಿ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ಆರೋಪಿಗೆ ವಿಧಿಸಲಾದ ಪರಿಸರ ಸ್ನೇಹಿ ಶಿಕ್ಷೆ ಸಾರ್ವಜನಿಕರ ಗಮನ ಸೆಳೆದಿದೆ.
