ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಶೀಘ್ರದಲ್ಲೇ ಭಾರಿ ಸಂಪುಟ ಪುನರಚನೆ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ. ಬಲ್ಲ ಮೂಲಗಳ ಮಾಹಿತಿಯಂತೆ, ಮುಂದಿನ ವಾರದಲ್ಲೇ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಮುಖ ಬದಲಾವಣೆಗಳು ನಡೆಯುವ ಸಾಧ್ಯತೆಯಿದ್ದು, ಹಲವು ಪ್ರಮುಖ ಇಲಾಖೆಗಳ ಜವಾಬ್ದಾರಿ ವಹಿಸಿಕೊಂಡಿರುವ ಸಚಿವರ ಖಾತೆಗಳಲ್ಲೂ ಬದಲಾವಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಮುಖ್ಯವಾಗಿ ಕೇಂದ್ರ ಶಿಕ್ಷಣ ಇಲಾಖೆಗೆ ನೂತನ ಹಾಗೂ ಯುವ ನಾಯಕತ್ವ ನೀಡುವ ಕುರಿತು ಚರ್ಚೆಗಳು ನಡೆಯುತ್ತಿದ್ದು, ಹೊಸ ಮುಖಕ್ಕೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇದರೊಂದಿಗೆ 70 ವರ್ಷ ದಾಟಿರುವ ಸುಮಾರು 14 ಪ್ರಭಾವಿ ಕೇಂದ್ರ ಸಚಿವರನ್ನು ಸಂಪುಟದಿಂದ ಕೈಬಿಟ್ಟು, ಪಕ್ಷದ ಸಂಘಟನೆ ಬಲಪಡಿಸುವ ಜವಾಬ್ದಾರಿ ನೀಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಹಿರಿಯ ನಾಯಕರನ್ನು ರಾಜ್ಯ ರಾಜಕೀಯಕ್ಕೆ ನಿಯೋಜಿಸುವ ಬಗ್ಗೆಯೂ ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ, ಮಿತ್ರಪಕ್ಷಗಳಿಗೂ ಸಂಪುಟ ಪುನರಚನೆಯಲ್ಲಿ ಹೆಚ್ಚಿನ ಪ್ರಾತಿನಿಧ್ಯ ಸಿಗುವ ಸಾಧ್ಯತೆಯಿದೆ. ತೃಣಮೂಲ ಕಾಂಗ್ರೆಸ್ನ ಬಂಡಾಯ ಬಣ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಹಾಗೂ ಅಜಿತ್ ಪವಾರ್ ಬಣದ ಎನ್ಸಿಪಿಗೆ ಹೊಸದಾಗಿ ಅವಕಾಶ ಕಲ್ಪಿಸುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.
ಉತ್ತರ ಪ್ರದೇಶದ ಜನಪ್ರಿಯ ಸಂಸದ ಹಾಗೂ ನಟ ರವಿ ಕಿಶನ್ ಅವರಿಗೂ ಕೇಂದ್ರ ಸಚಿವ ಸ್ಥಾನ ದೊರೆಯುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮುಂಬರುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಎದುರಿಸಲು ಹಾಗೂ ಮಿತ್ರಪಕ್ಷಗಳೊಂದಿಗೆ ರಾಜಕೀಯ ಸಮತೋಲನ ಕಾಯ್ದುಕೊಳ್ಳುವ ಉದ್ದೇಶದಿಂದ ಬಿಜೆಪಿ ವರಿಷ್ಠರು ಸಂಪುಟ ಪುನರಚನೆಯ ಮೂಲಕ ಹಲವು ಮಹತ್ವದ ಬದಲಾವಣೆಗಳಿಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಕೇಂದ್ರ ಸರ್ಕಾರ ಅಥವಾ ಬಿಜೆಪಿ ಅಧಿಕೃತವಾಗಿ ಯಾವುದೇ ಮಾಹಿತಿ ಪ್ರಕಟಿಸಿಲ್ಲ.
