ಕೆ.ಆರ್.ಪೇಟೆ,ಸೆ.01: ಅಂತರಾಳ ಚಾರಿಟೇಬಲ್ ಫೌಂಡೇಶನ್(ರಿ) ವತಿಯಿಂದ ಕೆ.ಆರ್.ಪೇಟೆ ತಾಲ್ಲೂಕಿನ ಅಘಲಯ, ಸಂತೇಬಾಚಹಳ್ಳಿ, ರಂಗನಾಥಪುರ ಕ್ರಾಸ್, ಭಾರತೀಪುರ ಕ್ರಾಸ್ ಸಿ.ಆರ್.ಸಿ. ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಶಾಲೆಗಳು ಹಾಗೂ ಸರ್ಕಾರಿ ಪ್ರೌಢಶಾಲೆಗಳ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಅಂತರಾಳ ಚಾರಿಟೇಬಲ್ ಫೌಂಡೇಶನ್(ರಿ) ಅಧ್ಯಕ್ಷೆ ಅನುರಾಧಾ ರಾಘವನ್ ಅವರು ಮಾತನಾಡಿ ತಮ್ಮ ಫೌಂಡೇಷನ್ ವತಿಯಿಂದ ಪ್ರತಿ ವರ್ಷದಂತೆ ಈ ಭಾರಿಯೂ ಗ್ರಾಮೀಣ ಮಕ್ಕಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಬೇಕೆಂಬ ಆಶಯದೊಂದಿಗೆ ಅಘಲಯ ಸುತ್ತಮುತ್ತಲ ಹತ್ತಾರು ಗ್ರಾಮಗಳ ಸರ್ಕಾರಿ ಪ್ರಾಥಮಿ ಶಾಲೆಗಳು ಹಾಗೂ ಸರ್ಕಾರಿ ಪ್ರೌಢಶಾಲೆಗಳಿಗೆ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಣೆ ಮಾಡುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಂತೆಯೇ ಸಾಧನೆ ಮಾಡಲಿ ಎಂದು ಸುದುದ್ದೇಶವನ್ನು ಇಟ್ಟುಕೊಂಡು ಸೇವಾ ಕಾರ್ಯಕ್ರಮ ರೂಪಿಸಲಾಗಿದೆ.

ವಿದ್ಯಾರ್ಥಿಗಳು ಇದನ್ನು ಸದುಪಡಿಸಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಿ ಸಾಧನೆ ಮಾಡಬೇಕು. ಸರ್ಕಾರಿ ಶಾಲೆಗಳನ್ನು ಉಳಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಅಂತರಾಳ ಚಾರಿಟೇಬಲ್ ಫೌಂಡೇಷನ್ ಟ್ರಸ್ಟಿಗಳಾದ ಎಂ.ಆರ್.ಜಗನ್ನಾಥ್ ಕಾರ್ಯಕ್ರಮ ಕುರಿತು ಮಾತನಾಡಿ ಅಂತರಾಳ ಚಾರಿಟೇಬಲ್ ಫೌಂಡೇಷನ್ ವತಿಯಿಂದ ಕಳೆದ ಹತ್ತಾರು ವರ್ಷಗಳಿಂದ ಅಘಲಯ ಸುತ್ತಮುತ್ತಲ ಸರ್ಕಾರಿ ಶಾಲೆಗಳನ್ನು ಬಲವರ್ಧನೆ ಮಾಡುವ ಸದುದ್ದೇಶದಿಂದ ಕೈಲಾದ ಶೈಕ್ಷಣಿಕ ಸೇವೆಯನ್ನು ಟ್ರಸ್ಟಿನ ಅಧ್ಯಕ್ಷರಾದ ಅನುರಾಧಾ ರಾಘವನ್ ಅವರು ಮಾಡಿಕೊಂಡು ಬರುತ್ತಿದ್ದಾರೆ. ಹಾಗಾಗಿ ಈ ಭಾಗದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡುವ ಮೂಲಕ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದು ಜಗನ್ನಾಥ್ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾದ ಲಕ್ಷ್ಮಿ, ಸುಶ್ಮಿತಾ, ಸಿಂಚನ, ಮಧು, ಉದಯ್ ಅವರುಗಳಿಗೆ ಅಂತರಾಳ ಚಾರಿಟೇಬನ್ ಫೌಂಡೇಷನ್ ವತಿಯಿಂದ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅಂತರಾಳ ಚಾರಿಟೇಬಲ್ ಫೌಂಡೇಷನ್ ಟ್ರಸ್ಟಿಗಳಾದ ಎಂ.ಆರ್.ಜಗನ್ನಾಥ್, ಶ್ರೀಕಾಂತ್, ಸಂಪತ್ ಕುಮಾರ್, ಅಘಲಯ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಯರಂಗೇಗೌಡ, ಶಿಕ್ಷಕರಾದ ಉಮೇಶ್, ಪವಿತ್ರ, ಜಯಲಕ್ಷ್ಮಿ, ಗಾಯಿತ್ರಿ, ಅರ್ಚನಾ, ರೀತಾ, ನಯನ ಮತ್ತಿತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
