ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಬರಗೂರು ಗ್ರಾಮದಲ್ಲಿ ಅಣಬೆ ಬೇಸಾಯ ಕುರಿತು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಹೆಚ್ ಗುರುಮೂರ್ತಿ ಅವರು ಆಗಮಿಸಿ ಅಣಬೆ ಬೇಸಾಯದ ಬಗ್ಗೆ ಮಾಹಿತಿ ನೀಡಿದರುದ್ದರು. ವಲ್ಲೀಶ್, ಕೆ ಆದಿತ್ಯ ಹಾಗೂ ಬೆನಕ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಡಾ. ಗುರುಮೂರ್ತಿ ಅವರು ಅಣಬೆ ಬೇಸಾಯ ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ರೈತರಿಗೆ ತಿಳಿಸಿಕೊಟ್ಟರು. ಮೊದಲಿಗೆ ಭತ್ತದ ಹುಲ್ಲನ್ನು ಸೂಕ್ತ ಗಾತ್ರದಲ್ಲಿ ಕತ್ತರಿಸಿ ಬೇಯಿಸಿ, ನಂತರ ಬೆಂದ ಹುಲ್ಲನ್ನು ತಣ್ಣಗಾಗಲು ಬಿಡಬೇಕು. ನಂತರ ತಣ್ಣಗಾದ ಹುಲ್ಲಿಗೆ ಸೂಕ್ತ ಪ್ರಮಾಣದ ಅಣಬೆ ಸ್ಪಾನ್ (ಬೀಜ) ತೆಗೆದುಕೊಂಡು, ಚೀಲದಲ್ಲಿ ಹುಲ್ಲು ಮತ್ತು ಸ್ಪಾನ್ಗಳನ್ನು ಕ್ರಮವಾಗಿ ಪದರಗಳಾಗಿ ತುಂಬಬೇಕು. ಬಳಿಕ ಗಾಳಿಯ ಸಂಚಾರಕ್ಕಾಗಿ ಚೀಲದಲ್ಲಿ ಸಣ್ಣ ಸಣ್ಣ ರಂಧ್ರಗಳನ್ನು ಮಾಡಿದರು. ಸಿದ್ಧಪಡಿಸಿದ ಚೀಲಗಳನ್ನು ಸುಮಾರು 15ರಿಂದ 20 ದಿನಗಳ ಕಾಲ ಕತ್ತಲೆ ಕೋಣೆಯಲ್ಲಿಟ್ಟು 18ನೇ ದಿನದ ನಂತರ ನಿರ್ದಿಷ್ಟ ಪ್ರಮಾಣದಲ್ಲಿ ತೇವಾಂಶ ಹಾಗೂ ತಾಪಮಾನವನ್ನು ಕಾಪಾಡಲು ನೀರನ್ನು ಸಿಂಪಡಿಸಬೇಕು. ಸೂಕ್ತ ನಿರ್ವಹಣೆ ಮಾಡಿದಲ್ಲಿ ಕೆಲವೇ ದಿನಗಳಲ್ಲಿ ಅಣಬೆಗಳು ಬೆಳೆಯಲಿದ್ದು, ಅವುಗಳನ್ನು ಕೊಯ್ಲು ಮಾಡಬಹುದು. ಕಡಿಮೆ ವೆಚ್ಚದಲ್ಲಿ ಹಾಗೂ ಕಡಿಮೆ ಜಾಗದಲ್ಲಿ ಅಣಬೆ ಬೇಸಾಯವನ್ನು ಕೈಗೊಂಡು ಉತ್ತಮ ಆದಾಯ ಗಳಿಸಬಹುದು ಎಂದು ತಿಳಿಸಲಾಯಿತು.

ಅಣಬೆ ಕೃಷಿಯು ಕಡಿಮೆ ವೆಚ್ಚದಲ್ಲಿ ದೊರೆಯುವ ಸಾವಯವ ಕೃಷಿ ತ್ಯಾಜ್ಯವನ್ನು ಪೌಷ್ಟಿಕ ಆಹಾರವಾಗಿ ಪರಿವರ್ತಿಸುವ ಪ್ರಮುಖ ಕೃಷಿ ಪದ್ಧತಿಯಾಗಿದ್ದು, ರೈತರಿಗೆ ಸುಸ್ಥಿರ ಆರ್ಥಿಕ ಅವಕಾಶಗಳನ್ನು ಒದಗಿಸುತ್ತದೆ. ಅಣಬೆಗಳಲ್ಲಿ ಬಿ-ಕಾಂಪ್ಲೆಕ್ಸ್ ವಿಟಮಿನ್ಗಳು ಹಾಗೂ ವಿಟಮಿನ್ ಡಿ ಸೇರಿದಂತೆ ಉತ್ತಮ ಪೌಷ್ಟಿಕಾಂಶಗಳು ಮತ್ತು ಗುಣಮಟ್ಟದ ಸಸ್ಯಾಧಾರಿತ ಪ್ರೋಟೀನ್ ದೊರೆಯುತ್ತದೆ. ಅಲ್ಲದೆ ಕಡಿಮೆ ಕ್ಯಾಲೊರಿ, ಕಡಿಮೆ ಕೊಬ್ಬು ಹಾಗೂ ಕಡಿಮೆ ಸಕ್ಕರೆ ಹೊಂದಿರುವುದರಿಂದ ಅಣಬೆಗಳು ಆರೋಗ್ಯಕರ ಆಹಾರವಾಗಿವೆ ಎಂದು ವಿವರಿಸಲಾಯಿತು.
ಅಣಬೆ ಬೇಸಾಯದ ನಂತರ ಉತ್ಪನ್ನಗಳನ್ನು ಚನ್ನರಾಯಪಟ್ಟಣ ಹಾಗೂ ಹಾಸನದ ಸ್ಥಳೀಯ ಮಾರುಕಟ್ಟೆ ಮತ್ತು ಅಂಗಡಿಗಳಲ್ಲಿ ಮಾರಾಟ ಮಾಡಬಹುದಾದ ಮಾರುಕಟ್ಟೆ ಅವಕಾಶಗಳ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು. ಕಡಿಮೆ ಜಾಗ ಮತ್ತು ಕೃಷಿ ತ್ಯಾಜ್ಯವನ್ನು ಬಳಸಿಕೊಂಡು ಅಣಬೆ ಉತ್ಪಾದನೆ ಮಾಡುವ ಮೂಲಕ ಹೆಚ್ಚು ಆದಾಯ ಗಳಿಸಬಹುದು ಎಂದು ತಿಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ 70ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.
ನಂತರ ರೈತರೊಂದಿಗೆ ಪ್ರಶ್ನೋತ್ತರ ಸಂವಾದ ನಡೆಸಿ, ಅಣಬೆ ಬೇಸಾಯ, ಮಾರುಕಟ್ಟೆ ಹಾಗೂ ಜೈವಿಕ ಗೊಬ್ಬರಗಳ ಬಳಕೆಗೆ ಸಂಬಂಧಿಸಿದ ರೈತರ ವಿವಿಧ ಸಂದೇಹಗಳು ಮತ್ತು ಗೊಂದಲಗಳನ್ನು ನಿವಾರಿಸಲಾಯಿತು. ಕಾರ್ಯಕ್ರಮವು ರೈತರಿಗೆ ಅಣಬೆ ಬೇಸಾಯವನ್ನು ಪರ್ಯಾಯ ಹಾಗೂ ಹೆಚ್ಚುವರಿ ಆದಾಯದ ಮೂಲವಾಗಿ ಅಳವಡಿಸಿಕೊಳ್ಳಲು ಪ್ರೇರಣೆ ನೀಡಿತು. ಹಾಗೂ ರೈತರು ಕೂಡ ಅಣಬೆ ಬೆಳೆಯುವುದರಲ್ಲಿ ಆಸಕ್ತಿ ತೋರಿಸಿದರು. ಸಂಪನ್ಮೂಲ ವ್ಯಕ್ತಿಗಳಾದಂತಹ ಗುರುಮೂರ್ತಿ ರವರು ಮಹಿಳೆಯರ ಸ್ವಅವಲಂಬನೆ ಹಾಗೂ ಮಹಿಳೆಯರ ಸಬಲೀಕರಣಕ್ಕೆ ಸೂಕ್ತವಾದಂತಹ ಉದ್ಯೋಗ ಬಗ್ಗೆ ಮಾಹಿತಿ ತಿಳಿಸಿಕೊಟ್ಟರು.
– ಮಂಜುನಾಥ್ ಐ.ಕೆ.
