ಬೆಂಗಳೂರು, ಸೆ.3: ಏರ್ಟೆಲ್ ತನ್ನ 37.6 ಕೋಟಿ ಗ್ರಾಹಕರಿಗೆ ಹೊಸ ಪ್ರಯೋಜನ ಘೋಷಿಸಿದ್ದು, ವಿಶ್ವದ ಪ್ರಮುಖ ಭಾಷಾ ಕಲಿಕಾ ವೇದಿಕೆಯಾದ ಡ್ಯುಯೊಲಿಂಗೊ ಸಹಭಾಗಿತ್ವದಲ್ಲಿ 12 ತಿಂಗಳ ಕಾಲ ‘ಸೂಪರ್ ಡ್ಯುಯೊಲಿಂಗೊ’ ಚಂದಾದಾರಿಕೆಯನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನೀಡುತ್ತಿದೆ.
ಏರ್ಟೆಲ್ ಮೊಬೈಲ್, ವೈ-ಫೈ ಹಾಗೂ ಡಿಟಿಎಚ್ ಗ್ರಾಹಕರು ಈ ಕೊಡುಗೆಯನ್ನು ಪಡೆಯಬಹುದಾಗಿದೆ. ಬಳಕೆದಾರರು ಯಾವುದೇ ಕ್ರೆಡಿಟ್ ಕಾರ್ಡ್ ವಿವರಗಳನ್ನು ನೀಡುವ ಅಗತ್ಯವಿಲ್ಲದೆ ಏರ್ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕ ಆಫರ್ ಸಕ್ರಿಯಗೊಳಿಸಬಹುದು.
ಸೂಪರ್ ಡ್ಯುಯೊಲಿಂಗೊದಲ್ಲಿ ಜಾಹೀರಾತು ರಹಿತ ಕಲಿಕೆ, ಅನ್ಲಿಮಿಟೆಡ್ ಎನರ್ಜಿ, ವೈಯಕ್ತೀಕರಿಸಿದ ಅಭ್ಯಾಸ, ತಪ್ಪುಗಳ ಪರಾಮರ್ಶೆ ಸೇರಿದಂತೆ ಹಲವು ಸೌಲಭ್ಯಗಳಿವೆ. ಇದರ ಪ್ರಮುಖ ಆಕರ್ಷಣೆ ಎಐ ಆಧಾರಿತ ನೈಜ-ಸಮಯದ ಸಂಭಾಷಣಾ ಅಭ್ಯಾಸವಾಗಿದ್ದು, ಬಳಕೆದಾರರಿಗೆ ಭಾಷೆಯನ್ನು ಮಾತನಾಡುವ ಆತ್ಮವಿಶ್ವಾಸ ಬೆಳೆಸಿಕೊಳ್ಳಲು ನೆರವಾಗಲಿದೆ.
ಡ್ಯುಯೊಲಿಂಗೊ 40ಕ್ಕೂ ಅಧಿಕ ಭಾಷೆಗಳಲ್ಲಿ ಕೋರ್ಸ್ಗಳನ್ನು ಒದಗಿಸುತ್ತಿದ್ದು, ಆಟದ ಮಾದರಿಯ ಪಾಠಗಳು ಹಾಗೂ ಎಐ ಆಧಾರಿತ ವೈಶಿಷ್ಟ್ಯಗಳ ಮೂಲಕ ಭಾಷಾ ಕಲಿಕೆಯನ್ನು ಸುಲಭಗೊಳಿಸಿದೆ. ಭಾಷೆಗಳ ಜೊತೆಗೆ ಚೆಸ್, ಗಣಿತ ಹಾಗೂ ಸಂಗೀತ ಕಲಿಕೆಯ ಅವಕಾಶವೂ ವೇದಿಕೆಯಲ್ಲಿ ಲಭ್ಯವಿದೆ.
ಈ ಕುರಿತು ಮಾತನಾಡಿದ ಡ್ಯುಯೊಲಿಂಗೊ ಇಂಡಿಯಾದ ಬಿಸಿನೆಸ್ ಡೆವಲಪ್ಮೆಂಟ್ ಮುಖ್ಯಸ್ಥೆ ರಾಶಿ ಧನಾನಿ, ಭಾರತವು ಸಂಸ್ಥೆಗೆ ಅತ್ಯಂತ ಮಹತ್ವದ ಮಾರುಕಟ್ಟೆಯಾಗಿದ್ದು, ಏರ್ಟೆಲ್ ಜೊತೆಗಿನ ಸಹಭಾಗಿತ್ವದ ಮೂಲಕ ದೇಶದ ಹೆಚ್ಚಿನ ಸಂಖ್ಯೆಯ ಕಲಿಯುವವರಿಗೆ ಸುಧಾರಿತ ಭಾಷಾ ಕಲಿಕಾ ಅನುಭವ ತಲುಪಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಭಾರತೀಯ ಭಾಷಿಕರ ಅಗತ್ಯಕ್ಕೆ ಅನುಗುಣವಾಗಿ ಡ್ಯುಯೊಲಿಂಗೊ ತನ್ನ ಕೋರ್ಸ್ಗಳನ್ನು ವಿಸ್ತರಿಸುತ್ತಿದ್ದು, ಇತ್ತೀಚೆಗೆ ಪಂಜಾಬಿಯಿಂದ ಇಂಗ್ಲಿಷ್ ಕಲಿಯುವ ಕೋರ್ಸ್ನ್ನೂ ಪರಿಚಯಿಸಿದೆ. ಈಗಾಗಲೇ ಹಿಂದಿ, ಬೆಂಗಾಲಿ, ತೆಲುಗು, ತಮಿಳು ಹಾಗೂ ಉರ್ದು ಭಾಷಿಕರಿಗಾಗಿ ಕೋರ್ಸ್ಗಳು ಲಭ್ಯವಿವೆ.
ಈ ಕೊಡುಗೆ ಒಂದು ವರ್ಷದ ಅವಧಿಗೆ ಮಾತ್ರ ಮಾನ್ಯವಾಗಿದ್ದು, ಅನ್ವಯವಾಗುವ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.
