ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಬರಗೂರು ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯ ಕಾರೇಕೆರೆ, ಹಾಸನದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ (RAWE P)ದ ಅಂಗವಾಗಿ ಹಸುಗಳಿಗೆ ಶುದ್ಧ ಹಾಗೂ ಆರೋಗ್ಯಕರ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಸೆ.2ರಂದು ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಗ್ರಾಮದಲ್ಲಿ ಜಾನುವಾರುಗಳು ಪ್ರತಿನಿತ್ಯ ನೀರು ಕುಡಿಯಲು ಬಳಸುತ್ತಿದ್ದ ಏಕೈಕ ನೀರಿನ ತೊಟ್ಟಿ ಹಸಿರು ಪಾಚಿ, ಕೊಳಕು ಹಾಗೂ ತ್ಯಾಜ್ಯದಿಂದ ಸಂಪೂರ್ಣವಾಗಿ ಆವೃತವಾಗಿತ್ತು. ಇದರಿಂದ ನೀರು ಕಲುಷಿತಗೊಂಡು ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇತ್ತು.

ಇದನ್ನು ಗಮನಿಸಿದ ಕೃಷಿ ವಿದ್ಯಾರ್ಥಿಗಳು ಒಗ್ಗೂಡಿ ತೊಟ್ಟಿಯಲ್ಲಿದ್ದ ಪಾಚಿ, ಕೊಳಕು ಹಾಗೂ ಇತರೆ ತ್ಯಾಜ್ಯಗಳನ್ನು ತೆರವುಗೊಳಿಸಿ, ತೊಟ್ಟಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು. ಆ ಮೂಲಕ ಹಸುಗಳಿಗೆ ಸುರಕ್ಷಿತವಾಗಿ ಕುಡಿಯುವ ನೀರು ದೊರೆಯುವಂತೆ ಮಾಡಿದರು.
ಕಾರ್ಯಕ್ರಮದ ಮೂಲಕ ಗ್ರಾಮಸ್ಥರಲ್ಲಿ ಸ್ವಚ್ಛತೆ ಹಾಗೂ ಜಾನುವಾರುಗಳ ಆರೋಗ್ಯದ ಕುರಿತು ಅರಿವು ಮೂಡಿಸಲಾಯಿತು. ಜಾನುವಾರುಗಳ ಆರೋಗ್ಯ ಕಾಪಾಡುವಲ್ಲಿ ಶುದ್ಧ ಕುಡಿಯುವ ನೀರಿನ ಮಹತ್ವವನ್ನು ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ತಿಳಿಸಿದರು.
“ಶುದ್ಧ ನೀರು – ಆರೋಗ್ಯಕರ ಜಾನುವಾರು – ಸಮೃದ್ಧ ರೈತ” ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
– ಮಂಜುನಾಥ್ ಐ.ಕೆ
