ಕೊರಟಗೆರೆ: ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ಭಕ್ತರ ಆರಾಧ್ಯ ದೇವರುಗಳಾದ ಶ್ರೀ ಚಿತ್ರಲಿಂಗೇಶ್ವರ ಹಾಗೂ ಶ್ರೀ ಕ್ಯಾತಲಿಂಗೇಶ್ವರ ಸ್ವಾಮಿಯ ಪುನರ್ ಪ್ರತಿಷ್ಠಾಪನ ಮಹೋತ್ಸವ ಗುರುವಾರ ಸಡಗರ, ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ನೆರವೇರಿತು.
ಗ್ರಾಮಸ್ಥರು ಹಾಗೂ ಶ್ರೀಮತಿ ಪ್ರೇಮ ಮಹಾಲಿಂಗಪ್ಪನವರ ನೇತೃತ್ವದಲ್ಲಿ ನಡೆದ ಮಹೋತ್ಸವದಲ್ಲಿ ಗಂಗಾಪೂಜೆ, ಗಣಪತಿ ಪೂಜೆ, ರಕ್ಷಾಸೂತ್ರ, ಪುಣ್ಯಾಹವಾಚನ, ಕಳಶ ಪ್ರತಿಷ್ಠಾಪನೆ, ಪ್ರಾಣ ಪ್ರತಿಷ್ಠಾಪನೆ, ವಿಶೇಷ ಅಲಂಕಾರ, ಕುಂಕುಮಾರ್ಚನೆ, ಹೋಮ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನೆರವೇರಿದವು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಮತಿ ಪ್ರೇಮ ಮಹಾಲಿಂಗಪ್ಪನವರು ವಿಶೇಷ ಪೂಜೆ ಸಲ್ಲಿಸಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ದೇವಾಲಯಗಳ ಅಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮಸ್ಥರ ಸಹಬಾಳ್ವೆ ಮತ್ತು ಒಗ್ಗಟ್ಟನ್ನು ಪ್ರತಿಬಿಂಬಿಸುತ್ತವೆ. ಮನುಷ್ಯನಿಗೆ ಸಂಪತ್ತು, ಅಧಿಕಾರ ಹಾಗೂ ಸ್ಥಾನಮಾನ ಶಾಶ್ವತವಲ್ಲ. ಆದರೆ ಸಮಾಜಕ್ಕೆ ನೀಡಿದ ಕೊಡುಗೆ, ಉತ್ತಮ ಕಾರ್ಯಗಳು ಹಾಗೂ ಮಾನವೀಯ ಮೌಲ್ಯಗಳು ಸದಾ ನೆನಪಿನಲ್ಲಿ ಉಳಿಯುತ್ತವೆ ಎಂದು ಅವರು ಹೇಳಿದರು.
ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಯಾದವನಂದ ಮಹಾಸ್ವಾಮೀಜಿ, ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶ್ರೀ ಡಾ. ಹನುಮಂತನಾಥ ಸ್ವಾಮೀಜಿ ಹಾಗೂ ಶ್ರೀ ಶ್ರೀ ಬಸವರಮಾನಂದ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.
ಪೂಜೆ–ಪುನಸ್ಕಾರಗಳು ಮನುಷ್ಯನಿಗೆ ಉತ್ತಮ ಜೀವನ ನಡೆಸುವ ಮಾರ್ಗ ಹಾಗೂ ಸಮಾಜದೊಂದಿಗೆ ಸೌಹಾರ್ದದಿಂದ ಬದುಕುವ ಸಂದೇಶ ನೀಡುತ್ತವೆ. ದೇವರ ಅನುಗ್ರಹದಿಂದ ಗ್ರಾಮಸ್ಥರ ಇಷ್ಟಾರ್ಥಗಳು ಈಡೇರಲಿ ಎಂದು ಸ್ವಾಮೀಜಿಗಳು ಆಶಿಸಿದರು.

ಶ್ರೀ ಹನುಮಂತನಾಥ ಸ್ವಾಮೀಜಿ ಮಾತನಾಡಿ, ಗೊಲ್ಲರಹಟ್ಟಿ ಗ್ರಾಮಗಳು ಮುಂದಿನ ದಿನಗಳಲ್ಲಿ ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾಗಬೇಕು. ಕಾಲಕ್ಕೆ ತಕ್ಕಂತೆ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ನಾಗರಿಕ ಸಮಾಜಕ್ಕೆ ಅನುಗುಣವಾಗಿ ಬದಲಿಸಿಕೊಂಡು ಅಭಿವೃದ್ಧಿಯತ್ತ ಸಾಗಬೇಕು ಎಂದು ಹೇಳಿದರು.
ಮೂರು ದಿನಗಳ ಕಾಲ ನಡೆದ ದೇವಾಲಯಗಳ ಪುನಶ್ಚೇತನ ಹಾಗೂ ಜಾತ್ರಾ ಮಹೋತ್ಸವದಲ್ಲಿ ಗ್ರಾಮದ ಗೌಡರು, ಯಜಮಾನರು, ಪೂಜಾರಿಗಳು, ಗೊಲ್ಲರ ಸಮುದಾಯದ ಕುಲಬಾಂಧವರು ಹಾಗೂ ಅಕ್ಕಪಕ್ಕದ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದರು.
ವರದಿ- ನರಸಿಂಹಯ್ಯ ಹೊಸಕೋಟೆ
