ತುಮಕೂರು: ದೇಶದಲ್ಲಿ ಸುಮಾರು ಶೇಕಡ 56ರಷ್ಟು ಹಿಂದುಳಿದ ವರ್ಗಗಳ ಜನಸಂಖ್ಯೆ ಇದೆ.ಜನಸಂಖ್ಯೆ ಆಧಾರದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು.ಕೇಂದ್ರದಲ್ಲಿ ಹಿಂದುಳಿದ ವರ್ಗಗಳಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು, ಕೇಂದ್ರೀಯ ಶಾಶ್ವತ ಆಯೋಗ ರೂಪಿಸಿ ಅದರಡಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಓಬಿಸಿ ಫೆಡರೇಷನ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಜೆ.ಎಂಜೇರಪ್ಪ ಸರ್ಕಾರವನ್ನು ಒತ್ತಾಯಿಸಿದರು.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು, ಹಿಂದುಳಿದ ವರ್ಗಗಳ ಬೇಡಿಕೆ ಬಗ್ಗೆ ದೇಶಾದ್ಯಂತ ಸಮುದಾಯಗಳಲ್ಲಿ ಆಂದೋಲನದ ರೀತಿಯಲ್ಲಿ ಜಾಗೃತಿ ಮೂಡಿಸಲಾಗುವುದು.ಎಲ್ಲಾ ಪಕ್ಷಗಳ ರಾಜಕೀಯ ನಾಯಕರು ನಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಅನುಷ್ಠಾನಗೊಳಿಸಲು ಸಹಕರಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಪ್ರತ್ಯೇಕ ಇಲಾಖೆ ಸಚಿವಾಲಯವನ್ನು ತಕ್ಷಣ ರಚಿಸಬೇಕು.ಒಬಿಸಿ ಜನಸಂಖ್ಯೆಗನುಗುಣವಾಗಿ ಬಜೆಟ್ನಲ್ಲಿ ಹಣವನ್ನು ಮೀಸಲಿಡಬೇಕು.ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೀಸಲಾತಿ ಪ್ರಮಾಣ ಜಾಸ್ತಿ ಮಾಡಬೇಕು.ಲೋಕಸಭೆ ಮತ್ತು ವಿಧಾನಸಭಾ ಸ್ಥಾನಗಳಲ್ಲಿ ಒಬಿಸಿ ವರ್ಗಗಳಿಗೆ ಸ್ಥಾನ ಮೀಸಲಾತಿ ನೀಡಿ ತಕ್ಷಣಜಾರಿ ಮಾಡಬೇಕು.
ಚಿತ್ರದುರ್ಗದ ಬಂಜಾರ ಗುರುಪೀಠದ ಬಸವ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ಒಬಿಸಿ ಸಮುದಾಯದಲ್ಲಿ ಜಾಗೃತಿ ಮೂಡಿಸಲು ತಾವು ದೇಶಾದ್ಯಂತ ಸಂಚಾರ ಮಾಡುವುದಾಗಿ ತಿಳಿಸಿ, ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ, ಶಿಕ್ಷಣ, ಉದ್ಯೋಗದಲ್ಲಿ ಹೆಚ್ಚಿವ ಅವಕಾಶ ಸಿಕ್ಕಾಗ ಮಾತ್ರ ಸಮುದಾಯದವರಿಗೆ ಶಕ್ತಿ ಬರುತ್ತದೆ. ದೇವರಾಜಅರಸು ಅವರ ಆದರ್ಶ ಇಟ್ಟುಕೊಂಡು ಅವರ ಸ್ವಕ್ಷೇತ್ರವಾದ ಹುಣಸೂರಿನಿಂದ ಆರಂಭಿಸಿ ರಾಜ್ಯಾದ್ಯಂತ ಒಬಿಸಿ ಸಮುದಾಯಗಳಲ್ಲಿ ಜಾಗೃತಿ ಮೂಡಿಸಲುವ ಆಂದೋಲನ ಆರಂಭಿಸಲಾಗುವುದು ಎಂದು ಹೇಳಿದರು.
ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ,ರಾಜಕೀಯ ಪಕ್ಷಗಳು ಹಿಂದುಳಿದ ವರ್ಗಗಳಿಗೆ ರಾಜಕೀಯ ಅಧಿಕಾರದ ಅವಕಾಶ ನೀಡದೆ, ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿವೆ. ಇನ್ನು ಮುಂದೆ ಜನಸಂಖ್ಯೆ ಆಧಾರದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಮೀಸಲಾತಿ ಕಲ್ಪಿಸಬೇಕು.ನ್ಯಾಯಮೂರ್ತಿ ಭಕ್ತವತ್ಸಲ ಆಯೋಗ ಕೊಟ್ಟಿರುವ ವರದಿಯನ್ನು ಜಾರಿ ಮಾಡಬೇಕು.ಸ್ಥಳೀಯ ಸಂಸ್ಥೆಗಳಲ್ಲಿ ಇರುವ ಒಬಿಸಿ ಮೀಸಲಾತಿ ಎಲ್ಲರಿಗೂ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಶಿವಪ್ಪ ಲಮಾಣಿ, ಮುಖಂಡರಾದ ಎಂ.ಕೆ.ವೆಂಕಟಸ್ವಾಮಿ, ಎಂ.ನಾಗರಾಜು, ಮಡಿವಾಳ ಸಮಾಜದ ಮುಖಂಡ ಶಾಂತಕುಮಾರ್,ಲಕ್ಷ್ಮಣ್, ವೆಂಕಟಾಚಲ, ಎಸ್.ಎಲ್.ರಂಗನಾಥ್, ಸುಕನ್ಯಾಕುಮಾರ್, ರಾಜೇಶ್ದೊಡ್ಮನೆ, ಸಂಜಯ್, ಆರ್.ಜೆ.ರಾವತ್, ಯತೀಶ್ ಮೂರ್ತಿನಾಯಕ್, ಕುಮಾರ್ ನಾಯಕ್, ಮಧುಗೋಲ್ಡ್, ರಂಗರಾಜು, ಆನಂದ್, ಶಿರಾ ರವಿ, ರವೀಂದ್ರ, ಆನಂದ್, ಆದಿಲ್ ಪಾಷಾ, ಪ್ರಿಯಾರಾಜ್ ಮತ್ತಿತರರು ಭಾಗವಹಿಸಿದ್ದರು.
– ಚಂದ್ರಚೂಡ ಕೆ.ಬಿ.
