ಚನ್ನರಾಯಪಟ್ಟಣ: ತಾಲೂಕು ಆಟೋ ಚಾಲಕರ ಮತ್ತು ಮಾಲೀಕರ ಸ್ವಸಹಾಯ ಸೇವಾ ಟ್ರಸ್ಟ್ ವತಿಯಿಂದ ನಾಗಸಮುದ್ರ ಗ್ರಾಮದ ಶ್ರೀ ಸತ್ಯಕಾಳಮ್ಮ ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಗುರುಪ್ರಸಾದ್ (ಪ್ರಶಿ) ಅವರ ನೇತೃತ್ವದಲ್ಲಿ ತಾಲೂಕಿನ ಆಟೋ ಚಾಲಕರಿಗೆ ಖಾಕಿ ಸಮವಸ್ತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಗುರುಪ್ರಸಾದ್, ಮುಂದಿನ ದಿನಗಳಲ್ಲಿ ತಾಲೂಕಿನ ಸರ್ಕಾರಿ ಶಾಲೆಗಳ ಆವರಣಗಳು ಹಾಗೂ ದೇವಸ್ಥಾನಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಲ್ಲದೆ, ತಾಲೂಕು ಆಟೋ ಚಾಲಕರು ಹಾಗೂ ಮಾಲೀಕರಿಗಾಗಿ ಉಚಿತ ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುವುದು. ಚಾಲಕರ ಆರೋಗ್ಯದ ದೃಷ್ಟಿಯಿಂದ ಶುಗರ್, ಬಿಪಿ ಸೇರಿದಂತೆ ಅಗತ್ಯ ಆರೋಗ್ಯ ತಪಾಸಣೆಗಳನ್ನು ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನಿರ್ಗತಿಕರು ಹಾಗೂ ಬಡವರಿಗೆ ನೆರವಾಗುವ ಉದ್ದೇಶದಿಂದ ಟ್ರಸ್ಟ್ ವತಿಯಿಂದ ಆರ್ಥಿಕ ಸಹಾಯವನ್ನೂ ನೀಡಲಾಗುವುದು ಎಂದು ಗುರುಪ್ರಸಾದ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಉಪಾಧ್ಯಕ್ಷ ಪರಮೇಶ್, ಖಜಾಂಚಿ ವೆಂಕಟೇಶ್, ಕಾರ್ಯದರ್ಶಿ ಕೋಟೆ ಚಂದ್ರು, ನಿರ್ದೇಶಕರಾದ ಉಮೇಶ್, ಲೋಕೇಶ್, ಮಂಜಶೆಟ್ಟಿ, ಪಾಂಡು, ದೇವರಾಜು, ಅವಿನಾಶ್ ಸೇರಿದಂತೆ ಟ್ರಸ್ಟ್ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ
