ಕೊರಟಗೆರೆ: ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಯಾದವ ಸಂಘದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.
ತಹಶೀಲ್ದಾರ್ ಮಂಜುನಾಥ್ ಅವರು ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಆಧ್ಯಾತ್ಮಿಕತೆಯಲ್ಲಿ ಶ್ರೀಕೃಷ್ಣನಿಗೆ ವಿಶಿಷ್ಟ ಸ್ಥಾನವಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ದೇಶಾದ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುತ್ತಿದೆ ಎಂದರು.

ದುಷ್ಟಶಕ್ತಿಗಳ ಸಂಹಾರ, ಧರ್ಮದ ರಕ್ಷಣೆ ಹಾಗೂ ಮಾನವಕುಲಕ್ಕೆ ಸತ್ಯದ ಮಾರ್ಗವನ್ನು ತೋರಿಸುವ ಉದ್ದೇಶದಿಂದ ಶ್ರೀಕೃಷ್ಣ ಅವತರಿಸಿದನೆಂಬ ನಂಬಿಕೆಯಿದೆ. ಜನ್ಮಾಷ್ಟಮಿ ಕೇವಲ ಧಾರ್ಮಿಕ ಆಚರಣೆಯಲ್ಲ. ಅದು ಪ್ರೀತಿ, ಸ್ನೇಹ, ಕರ್ತವ್ಯ, ಧರ್ಮ ಹಾಗೂ ಮಾನವೀಯತೆಯಂತಹ ಭಾರತೀಯ ಜೀವನ ಮೌಲ್ಯಗಳನ್ನು ನೆನಪಿಸುವ ಮಹತ್ವದ ಹಬ್ಬವಾಗಿದೆ ಎಂದು ಹೇಳಿದರು.
ಅನ್ಯಾಯ ಮತ್ತು ಅಧರ್ಮದ ವಿರುದ್ಧ ಸತ್ಯ ಹಾಗೂ ಧರ್ಮದ ಹಾದಿಯನ್ನು ತೋರಿದ ಶ್ರೀಕೃಷ್ಣನ ಆದರ್ಶ ಮತ್ತು ಸಂದೇಶಗಳು ಪ್ರತಿಯೊಬ್ಬರ ಬದುಕಿನಲ್ಲಿ ಅಳವಡಿಕೆಯಾಗಬೇಕು. ಇದರಿಂದ ಸಮಾಜದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ನೆಲೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ತಾಲ್ಲೂಕು ಯಾದವ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಕೆ. ಮಹಾಲಿಂಗಪ್ಪ ಮಾತನಾಡಿ, ಶ್ರೀಕೃಷ್ಣನ ಜೀವನವು ಧರ್ಮದ ಹಾದಿ ಯಾವಾಗಲೂ ಸುಲಭವಲ್ಲ, ಆದರೆ ಅದು ಶಾಶ್ವತವಾದದ್ದು ಎಂಬ ಸತ್ಯವನ್ನು ಸಾರುತ್ತದೆ. ಅನ್ಯಾಯ, ಅಧರ್ಮ ಮತ್ತು ದೌರ್ಜನ್ಯ ಎಷ್ಟೇ ಬಲಿಷ್ಠವಾಗಿದ್ದರೂ ಸತ್ಯದ ಶಕ್ತಿ ಅಂತಿಮವಾಗಿ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ಜನ್ಮಾಷ್ಟಮಿ ಮೂಡಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬೆಸ್ಕಾಂನ ಪುಟ್ಟಣ್ಣ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಈರಣ್ಣ, ದೇವರಾಜು ಸೇರಿದಂತೆ ಹಲವರು ಮಾತನಾಡಿದರು.
ಈ ಸಂದರ್ಭದಲ್ಲಿ ಆನಂದ್, ನವೀನ್, ಪತ್ರಕರ್ತ ಮುತ್ತರಾಜು, ಕಾಂತರಾಜು, ನರಸಿಂಹಮೂರ್ತಿ, ನಾಗರಾಜು, ತಾಲೂಕು ವೈದ್ಯಾಧಿಕಾರಿ ಡಾ. ಜ್ಯೋತ್ಸ್ನಾ ರೆಡ್ಡಿ, ಸಮಾಜ ಕಲ್ಯಾಣಾಧಿಕಾರಿ ಯಮುನಾ, ಕಂದಾಯ ಇಲಾಖೆಯ ಬಸವರಾಜು, ನಕುಲ್ ಸೇರಿದಂತೆ ತಾಲೂಕು ಆಡಳಿತದ ಅಧಿಕಾರಿಗಳು, ಯಾದವ ಸಂಘದ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ವರದಿ: ನರಸಿಂಹಯ್ಯ ಹೊಸಕೋಟೆ
