ಕೆ.ಆರ್.ಪೇಟೆ: ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಒಂದೊಂದಾಗಿ ಬಾಗಿಲು ಮುಚ್ಚುತ್ತಿರುವ ಸಂದರ್ಭದಲ್ಲಿ, ಶಿಕ್ಷಕರೊಬ್ಬರು ಮನಸ್ಸು ಮಾಡಿದರೆ ಸರ್ಕಾರಿ ಶಾಲೆಯೊಂದನ್ನು ಹೇಗೆ ಉಳಿಸಬಹುದು ಎಂಬುದಕ್ಕೆ ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬಿಲ್ಲೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾದರಿಯಾಗಿದೆ.

ಗವಿರಂಗನಾಥಸ್ವಾಮಿ ಬೆಟ್ಟದ ಸಮೀಪದಲ್ಲಿರುವ ಈ ಶಾಲೆಯಲ್ಲಿ 2023ರಲ್ಲಿ ಕೇವಲ ಆರು ವಿದ್ಯಾರ್ಥಿಗಳಿದ್ದರು. ಶಾಲೆಗೆ ವಿದ್ಯಾರ್ಥಿಗಳ ದಾಖಲಾತಿ ಆಗದಿದ್ದರೆ ಮುಚ್ಚುವ ಸಾಧ್ಯತೆಯಿದೆ ಎಂಬ ಮೇಲಧಿಕಾರಿಗಳ ಸೂಚನೆಯ ನಡುವೆಯೂ ಶಿಕ್ಷಕಿ ರೂಪಾ ಅವರು ಶಾಲೆಯನ್ನು ಉಳಿಸುವ ಸಂಕಲ್ಪ ಮಾಡಿದರು. ಅವರ ನಿರಂತರ ಪ್ರಯತ್ನದ ಫಲವಾಗಿ 2026ರ ವೇಳೆಗೆ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದ ಶಿಕ್ಷಕಿ ರೂಪಾ ಅವರು 2023ರಲ್ಲಿ ಕೌನ್ಸೆಲಿಂಗ್ ಮೂಲಕ ಸ್ವಯಂಪ್ರೇರಿತರಾಗಿ ಈ ಶಾಲೆಗೆ ಆಯ್ಕೆಯಾಗಿ ಬಂದಿದ್ದರು. ಶಾಲೆಯಲ್ಲಿದ್ದ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳನ್ನು ಕಂಡು ಆರಂಭದಲ್ಲಿ ಆತಂಕಗೊಂಡರೂ, ಶಾಲೆಯನ್ನು ಉಳಿಸಲೇಬೇಕು ಎಂಬ ದೃಢ ನಿರ್ಧಾರ ಕೈಗೊಂಡರು.
ಮನೆ ಮನೆಗೆ ತೆರಳಿ ಜಾಗೃತಿ
ಶಾಲೆಯ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ರೂಪಾ ಅವರು ಬಿಲ್ಲೇನಹಳ್ಳಿ ಗ್ರಾಮದ ಮನೆ ಮನೆಗೆ ತೆರಳಿ ಪೋಷಕರನ್ನು ಭೇಟಿಯಾದರು. ಸರ್ಕಾರಿ ಶಾಲೆಯ ಮಹತ್ವ, ಇಲ್ಲಿ ದೊರೆಯುವ ಶಿಕ್ಷಣದ ಗುಣಮಟ್ಟ ಹಾಗೂ ಸರ್ಕಾರಿ ಶಾಲೆಗಳನ್ನು ಉಳಿಸುವ ಅಗತ್ಯದ ಕುರಿತು ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು.
ಪೋಷಕರಲ್ಲಿ ಇಂಗ್ಲಿಷ್ ಮಾಧ್ಯಮದ ಮೇಲಿನ ಆಸಕ್ತಿ ಹೆಚ್ಚುತ್ತಿರುವುದೇ ಮಕ್ಕಳ ದಾಖಲಾತಿ ಕುಸಿಯಲು ಪ್ರಮುಖ ಕಾರಣವೆಂಬುದನ್ನು ಅರಿತ ಅವರು, “ಇಂಗ್ಲಿಷ್ ಭಾಷೆಯನ್ನು ಮಕ್ಕಳಿಗೆ ಅಚ್ಚುಕಟ್ಟಾಗಿ ಕಲಿಸುತ್ತೇನೆ” ಎಂದು ಪೋಷಕರಿಗೆ ಭರವಸೆ ನೀಡಿದರು.
ಇದೀಗ ಶಾಲೆಯಲ್ಲಿ ಮಕ್ಕಳಷ್ಟೇ ಅಲ್ಲದೆ ಅಡುಗೆ ಸಿಬ್ಬಂದಿಯೂ ಸೇರಿದಂತೆ ಶಾಲಾ ವಾತಾವರಣದಲ್ಲಿ ಇಂಗ್ಲಿಷ್ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಶಾಲೆಗೆ ಭೇಟಿ ನೀಡುವ ಅಧಿಕಾರಿಗಳನ್ನು ಮಕ್ಕಳು ಇಂಗ್ಲಿಷ್ನಲ್ಲಿಯೇ ಆತ್ಮವಿಶ್ವಾಸದಿಂದ ಸ್ವಾಗತಿಸುವ ಮಟ್ಟಕ್ಕೆ ಬೆಳೆದಿದ್ದಾರೆ.
ಹಸಿರಿನಿಂದ ಕಂಗೊಳಿಸುತ್ತಿರುವ ಶಾಲೆ
ಶಿಕ್ಷಣದ ಜೊತೆಗೆ ಶಾಲಾ ಪರಿಸರವನ್ನೂ ಸುಂದರಗೊಳಿಸುವತ್ತ ರೂಪಾ ಅವರು ಗಮನ ಹರಿಸಿದ್ದಾರೆ. ಶಾಲಾ ಆವರಣದಲ್ಲಿ ಹಸಿರೀಕರಣಕ್ಕೆ ಒತ್ತು ನೀಡಿದ್ದು, ಇಂದು ಶಾಲೆಯ ವಾತಾವರಣವೇ ಆಕರ್ಷಕವಾಗಿ ಕಾಣುವಂತಾಗಿದೆ.
ಶಿಕ್ಷಕಿ ರೂಪಾ ಅವರ ಈ ಪ್ರಯತ್ನಕ್ಕೆ ಗ್ರಾಮದ ದಾನಿಗಳು ಕೂಡ ಕೈಜೋಡಿಸಿದ್ದು, ಶಾಲೆಯ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕ ಮಹೇಶ್ ಅವರ ಪ್ರೋತ್ಸಾಹ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಹಕಾರವನ್ನು ಶಿಕ್ಷಕಿ ರೂಪಾ ಕೃತಜ್ಞತೆಯಿಂದ ಸ್ಮರಿಸುತ್ತಾರೆ.
ಕಡಿಮೆ ದಾಖಲಾತಿಯಿಂದ ಮುಚ್ಚುವ ಹಂತದಲ್ಲಿದ್ದ ಸರ್ಕಾರಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿ, ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ವಾತಾವರಣ ನಿರ್ಮಿಸಿರುವ ಶಿಕ್ಷಕಿ ರೂಪಾ ಅವರ ಕಾರ್ಯ ಇತರ ಸರ್ಕಾರಿ ಶಾಲೆಗಳಿಗೂ ಪ್ರೇರಣೆಯಾಗಿದೆ.
-ಶ್ರೀನಿವಾಸ್ ಆರ್.
