ಕೊರಟಗೆರೆ:- ಆಧ್ಯಾತ್ಮಿಕತೆ, ವೈಚಾರಿಕತೆ, ಸಾಮಾಜಿಕ ಹೊಣೆಗಾರಿಕೆ ಹಾಗೂ ಕುಟುಂಬ ಮೌಲ್ಯಗಳು ಗ್ರಾಮೀಣ ಭಾಗದಲ್ಲಿ ಇನ್ನೂ ಜೀವಂತವಾಗಿ ಉಳಿದಿವೆ. ಎಂದು ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರು ಪೀಠದ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಬೊಮ್ಮಲದೇವಿಪುರ ಗ್ರಾಪಂ ವ್ಯಾಪ್ತಿಯ ಚುಂಚನಹಳ್ಳಿಯ ದೊಡ್ಡಮನೆ’ ಕುಟುಂಬದ ವತಿಯಿಂದ ಆಯೋಜಿಸಲಾಗಿದ್ದ ಗುರುವಂದನಾ ಹಾಗೂ ಕುಟುಂಬದ ಹಿರಿಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದ ದಿವ್ಯ ಸಾನಿದ್ಯವಹಿಸಿ ಮಾತನಾಡಿದರು.
ಆಧ್ಯಾತ್ಮಿಕತೆ ಎಂದರೆ ಕೇವಲ ಬಾಹ್ಯ ಆಚರಣೆಗಳಲ್ಲ ಅದು ಮನಸ್ಸನ್ನು ಪರಿಶುದ್ಧಗೊಳಿಸುವ ಮತ್ತು ಆತ್ಮಾವಲೋಕನ ಮಾಡಿಕೊಳ್ಳುವ ಪ್ರಕ್ರಿಯೆ. ಧರ್ಮ ಮತ್ತು ಆಧ್ಯಾತ್ಮಿಕತೆಯ ಜೊತೆಗೆ ಪ್ರತಿಯೊಬ್ಬರೂ ವೈಚಾರಿಕ ಹಾಗೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ವಿಚಾರಶಕ್ತಿ ಮತ್ತು ವಿವೇಕದಿಂದ ಆಲೋಚಿಸಿದಾಗ ಮಾತ್ರ ನಿಜವಾದ ಜ್ಞಾನ ಲಭಿಸಲು ಸಾಧ್ಯ ಎಂದು ಪ್ರತಿಪಾದಿಸಿದರು.
ಮೂಢನಂಬಿಕೆಗಳು ಮಾನವನ ಸರ್ವತೋಮುಖ ಪ್ರಗತಿಗೆ ಬಹುದೊಡ್ಡ ಅಡ್ಡಿಯಾಗಿವೆ. ಸತ್ಯ ಮತ್ತು ವೈಚಾರಿಕ ದೃಷ್ಟಿಕೋನವನ್ನು ಒಪ್ಪಿಕೊಳ್ಳುವುದು ಇಂದಿನ ಕಾಲಘಟ್ಟದ ತುರ್ತು ಅಗತ್ಯ. ಮೂಢನಂಬಿಕೆಗಳನ್ನು ಸಂಪೂರ್ಣವಾಗಿ ತೊರೆದು, ಸದ್ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಕರೆ ನೀಡಿದರು.
ಮನೆ ಕಟ್ಟುವ ಉದ್ದೇಶ: ಮನೆ ಎನ್ನುವುದು ಕೇವಲ ಒಂದು ಕುಟುಂಬದ ಸ್ವಂತ ಹಿತಾಸಕ್ತಿ, ವೈಯಕ್ತಿಕ ರಕ್ಷಣೆ ಮತ್ತು ಸಾಂಸಾರಿಕ ಅಗತ್ಯಗಳಿಗಾಗಿ ನಿರ್ಮಾಣವಾಗುತ್ತದೆ. ಅದರಲ್ಲಿ ವ್ಯಕ್ತಿಗತ ಜವಾಬ್ದಾರಿ ಹಾಗೂ ನನ್ನದು ಎಂಬ ಭಾವನೆ ಪ್ರಮುಖವಾಗಿರುತ್ತದೆ.
ಮಠ ಕಟ್ಟುವ ಉದ್ದೇಶ: ಮಠ ಎನ್ನುವುದು ಯಾವುದೇ ಒಬ್ಬ ವ್ಯಕ್ತಿಗೆ ಅಥವಾ ಸ್ವಾರ್ಥಕ್ಕಾಗಿಯಲ್ಲ ಬದಲಾಗಿ ಇಡೀ ಸಮಾಜದ ಕಲ್ಯಾಣಕ್ಕಾಗಿ ನಿರ್ಮಾಣವಾಗುವ ಪವಿತ್ರ ಕೇಂದ್ರ. ಮಠವು ಜ್ಞಾನ ದಾಸೋಹ, ಅನ್ನ ದಾಸೋಹ, ಉತ್ತಮ ಸಂಸ್ಕಾರ ಹಾಗೂ ವೈಚಾರಿಕ ಚಿಂತನೆಗಳನ್ನು ನೀಡಿ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುವ ನಿಸ್ವಾರ್ಥ ಸೇವೆಯ ತಾಣವಾಗಿದೆ. ಮನೆಯು ಒಂದು ಕುಟುಂಬವನ್ನು ಬೆಸೆಯುವ ಕಾರ್ಯ ಮಾಡಿದರೆ, ಮಠವು ಇಡೀ ಸಮಾಜವನ್ನು ಒಗ್ಗೂಡಿಸಿ, ಮಾನವೀಯ ಮೌಲ್ಯಗಳನ್ನು ಮತ್ತು ಸಂಸ್ಕೃತಿಯನ್ನು ಎತ್ತಿಹಿಡಿಯುವ ಕಾರ್ಯ ಮಾಡುತ್ತದೆ” ಎಂದು ಅವರು ತಿಳಿಸಿದರು.
ಕುಟುಂಬದ ಹಿರಿಯರಿಗೆ ಗೌರವ ಸಮರ್ಪಣೆ ಹಾಗೂ ಸಂಸ್ಕಾರ
ಕಾರ್ಯಕ್ರಮದ ವಿಶೇಷ ಅಂಗವಾಗಿ ನಡೆದ ಕುಟುಂಬದ ಹಿರಿಯರಿಗೆ ಗೌರವ ಸಮರ್ಪಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳು, ತಂದೆ-ತಾಯಿ, ಶಿಕ್ಷಕರು ಹಾಗೂ ಮನೆಯ ಹಿರಿಯರನ್ನು ಆದರದಿಂದ ಕಾಣುವುದು ಮತ್ತು ಅವರ ಮಾರ್ಗದರ್ಶನದಲ್ಲಿ ನಡೆಯುವುದು ನಮ್ಮ ಸಂಸ್ಕೃತಿಯ ಶಕ್ತಿ. ಇಂದಿನ ಯುವ ಪೀಳಿಗೆಯಲ್ಲಿ ಸಂಸ್ಕಾರ, ವಿನಯ ಹಾಗೂ ಹಿರಿಯರೆಡೆಗೆ ಗೌರವ ಭಾವನೆಯನ್ನು ಮೂಡಿಸುವುದು ಅತ್ಯಗತ್ಯ. ಇಂದು ದೊಡ್ಡಮನೆ ಕುಟುಂಬದವರು ತಮ್ಮ ಹಿರಿಯರನ್ನು ಗೌರವಿಸಿ ಆಶೀರ್ವಾದ ಪಡೆಯುತ್ತಿರುವುದು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆ ಎಂದರು.
ಇದೆ ಸಂದರ್ಭದಲ್ಲಿ ವಕೀಲ ಸಿದ್ದಗಂಗಯ್ಯ, ಶಿಕ್ಷಕ ರವಿಕುಮಾರ್, ನರಸಿಂಹಮೂರ್ತಿ, ರಾಜು, ಹಾಗೂ ವೀರಕ್ಯಾತಪ್ಪ ಧಾರ್ಮಿಕ ಮುಖಂಡರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿದರು.
-ಶ್ರೀನಿವಾಸ್ ಕೊರಟಗೆರೆ.
