ಶ್ಲೋಕ – 13, 14 & 15
ಇದಮದ್ಯ ಮಯಾ ಲಬ್ಧಮಿಮಂ ಪ್ರಾಪ್ಸ್ಯೇ ಮನೋರಥಮ್ ।
ಇದಮಸ್ತೀದಮಪಿ ಮೇ ಭವಿಷ್ಯತಿ ಪುನರ್ಧನಮ್ ॥೧೩॥
ಅಸೌ ಮಯಾ ಹತಃ ಶತ್ರುರ್ಹನಿಷ್ಯೇ ಚಾಪರಾನಪಿ ।
ಈಶ್ವರೋSಹಮಹಂ ಭೋಗೀ ಸಿದ್ಧೋSಹಂ ಬಲವಾನ್ ಸುಖೀ ॥೧೪॥
ಆಢ್ಯೋSಭಿಜನವಾನಸ್ಮಿ ಕೋSನ್ಯೋSಸ್ತಿ ಸದೃಶೋಮಯಾ ।
ಯಕ್ಷ್ಯೇ ದಾಸ್ಯಾಮಿ ಮೋದಿಷ್ಯ ಇತ್ಯಜ್ಞಾನವಿಮೋಹಿತಾಃ ॥೧೫॥
ಯಕ್ಷ್ಯೇ ದಾಸ್ಯಾಮಿ ಮೋದಿಷ್ಯೇ ಇತಿ ಅಜ್ಞಾನ ವಿಮೋಹಿತಾಃ –ಅವರು ತಿಳಿಗೇಡಿತನದಿಂದ ಹೀಗೆ ಬಡಬಡಿಸುತ್ತಾರೆ: ಇದನ್ನೀಗ ನಾನು ಪಡೆದೆ; ಈ ಬಯಕೆಯನ್ನು ಮುಂದೆ ಈಡೇರಿಸಿಕೊಳ್ಳುತ್ತೇನೆ; ಇದಂತು ಇದೆ; ಮತ್ತೆ ಈ ಹೊನ್ನೂ ನನ್ನದಾಗಲಿದೆ; ಈ ಹಗೆಯನ್ನು ಕೊಂದೆ; ಉಳಿದವರನ್ನೂ ಮುಗಿಸಲಿದ್ದೇನೆ; ನಾನು ಸರ್ವಶಕ್ತ; ನಾನೆ ಭೋಗಿಸುವವನು; ನಾನೆ ಬಯಸಿದ್ದನ್ನೆಲ್ಲ ಪಡೆದವನು; ಶಕ್ತಿಶಾಲಿ ಮತ್ತು ಸುಖಿ; ಸಿರಿವಂತನಿದ್ದೇನೆ; ಕುಲವಂತನಿದ್ದೇನೆ; ಯಾರಿದ್ದಾರೆ ನನಗೆ ಸಾಟಿ? ನಾನು ಯಾಗ ಮಾಡಿಸುತ್ತೇನೆ. ದಾನ ನೀಡುತ್ತೇನೆ. ಖುಶಿಪಡುತ್ತೇನೆ.
ಆಸುರೀ ಸ್ವಭಾವದವರ ಯೋಚನೆಗಳು ಹೇಗಿರುತ್ತವೆ ಎನ್ನುವುದನ್ನು ಕೃಷ್ಣ ಈ ಮೂರು ಶ್ಲೋಕದಲ್ಲಿ ವಿವರಿಸಿದ್ದಾನೆ. ಇವರಿಗೆ ಸದಾ ಧನ ಸಂಗ್ರಹ ಮಾಡಬೇಕು ಎನ್ನುವ ಯೋಚನೆ. ಸಿಕ್ಕಿದಾಗ ‘ಇಂದು ಇಷ್ಟು ಸಿಕ್ಕಿತು, ನಾಳೆ ಇಷ್ಟು ಗಳಿಸುತ್ತೇನೆ’ ಎನ್ನುವ ಚಪಲ. ದುಡ್ಡು ಸಂಗ್ರಹ ಮಾಡುವುದು ಇವರಿಗೊಂದು ಚಟ. ತನಗೆ ಆಗದವನನ್ನು ಮುಗಿಸಿದೆ, ಇನ್ನು ಆಗದವರನ್ನು ಮುಗಿಸುವೆ ಎನ್ನುವ ಯೋಚನೆ. ನಾನೇ ಸರ್ವ ಸಮರ್ಥ, ನನ್ನಿಂದಾಗದ್ದು ಈ ಜಗತ್ತಿನಲ್ಲೇನಿದೆ? ನಾನು ಸುಖ ಪಡಲು ಹುಟ್ಟಿದವನು-ದುಃಖಪಡಲಿಕ್ಕಲ್ಲ; ನನ್ನ ಸುಖಕ್ಕಾಗಿ ಏನು ಬೇಕಾದರೂ ನಾನು ಮಾಡುತ್ತೇನೆ; ಅದಕ್ಕೆ ಅಡ್ಡ ಬರುವವರನ್ನು ಮುಗಿಸುತ್ತೇನೆ; ನಾನೇ ಸಿದ್ಧ ಪುರುಷ; ನನ್ನ ಸಿದ್ಧಿಗೆ ನಾನೇ ಹೊಣೆಗಾರ; ನಾನು ಸುಖಪಡಲು ಹುಟ್ಟಿದವ ಅದಕ್ಕೆ ಬೇಕಾದ ಜನ-ಧನ-ಅಧಿಕಾರ ನನ್ನಲ್ಲಿದೆ; ನನ್ನಿಚ್ಛೆಯಂತೆ ನಾನು ನಡೆದುಕೊಳ್ಳುತ್ತೇನೆ; ದುಡ್ಡಿನಿಂದ ಏನನ್ನಾದರೂ ಖರೀದಿಸಬಲ್ಲೆ; ನನಗೆ ಸರಿಸಾಟಿ ಈ ಜಗತ್ತಿನಲ್ಲಿ ಯಾರಿದ್ದಾರೆ? – ಇತ್ಯಾದಿ ಇವರ ಯೋಚನೆಗಳು. ತೋರಿಕೆಗಾಗಿ ಯಜ್ಞ ಯಾಗಾದಿಗಳನ್ನು ಮಾಡುವುದು, ದಾನ ನೀಡುವುದು ಇವರ ನಿರಂತರ ಚಟುವಟಿಕೆ. ಇದು ಅಜ್ಞಾನದ ನಾಟ್ಯ. ಇದು ಅವರ ಸರ್ವನಾಶದ ಹೆಬ್ಬಾಗಿಲು ಎನ್ನುವ ಪರಿವೆ ಅವರಿಗಿರುವುದಿಲ್ಲ. ಅದೇ ದೊಡ್ಡಸ್ತಿಕೆ, ಅದೇ ಸುಭಗತನ ಎನ್ನುವ ಭ್ರಮೆಯಲ್ಲಿ ಇವರು ಬದುಕುತ್ತಿರುತ್ತಾರೆ.
