ಶ್ಲೋಕ – 16
ಅನೇಕಚಿತ್ತವಿಭ್ರಾಂತಾ ಮೋಹಜಾಲಸಮಾವೃತಾಃ ।
ಪ್ರಸಕ್ತಾಃ ಕಾಮಭೋಗೇಷು ಪತಂತಿ ನರಕೇSಶುಚೌ ॥೧೬॥
ಅನೇಕ ಚಿತ್ತ ವಿಭ್ರಾಂತಾಃ ಮೋಹಜಾಲ ಸಮಾವೃತಾಃ ।
ಪ್ರಸಕ್ತಾಃ ಕಾಮಭೋಗೇಷು ಪತನ್ತಿ ನರಕೇ ಅಶುಚೌ –ಹಲವು ಬಗೆಯ ಯೋಚನೆಗಳಿಂದ ಗೊಂದಲಗೊಂಡವರು; ಮೋಹದ ಬಲೆಯಲ್ಲಿ ಸಿಕ್ಕಿಕೊಂಡವರು; ಕಾಮದ ತೀಟೆಗಳಲ್ಲಿ ಮೈಮರೆತವರು. ಅವರು ಕೊಳಕು ನರಕದಲ್ಲಿ ಬಿದ್ದು ನರಳುತ್ತಾರೆ.
ಇವರು ತಮ್ಮ ಜೀವನದಲ್ಲಿ ಹಿಂದೆ ಆಗಿಹೋದ ಘಟನೆಗಳನ್ನು ಸದಾ ನೆನಪಿಸಿಕೊಂಡು ಗೊಂದಲಗೊಳ್ಳುತ್ತಾರೆ. ಇವರು ಎಂದೂ ತಮ್ಮ ತಪ್ಪಿಗೆ ಪಶ್ಚಾತ್ತಾಪ ಪಡುವುದಿಲ್ಲ. ಸಾತ್ವಿಕರು ಪಶ್ಚಾತ್ತಾಪ ಪಟ್ಟು ತಪ್ಪನ್ನು ಸರಿಪಡಿಸಿಕೊಳ್ಳುತ್ತಾರೆ, ಆದರೆ ಇವರು ಸದಾ ಭಯಂಕರವಾದ ಅಜ್ಞಾನ-ಮಮಕಾರವೆಂಬ ಮೋಹದ ಬಲೆಯಲ್ಲಿ ಸಿಕ್ಕಿಹಾಕಿಕೊಂಡು ಮತ್ತಷ್ಟು ಗೊಂದಲಕ್ಕೊಳಗಾಗುತ್ತಾರೆ-ತಿದ್ದಿಕೊಳ್ಳುವುದಿಲ್ಲ. ತಾವು ಬಯಸಿದ ವಸ್ತುವನ್ನು ಭೋಗಿಸುವುದು ಮತ್ತು ಅದರಲ್ಲಿ ತೃಪ್ತಿಪಡದೆ ಮತ್ತಷ್ಟು ಸಂಗ್ರಹಮಾಡಿ ಜೋಪಾನ ಮಾಡುವುದರಲ್ಲಿ ಪ್ರವೃತ್ತರಾಗುತ್ತಾರೆ. ಇವರು ಮುಂದೆ ಕೊಳಕು ನರಕದಲ್ಲಿ ಬಿದ್ದು ಒದ್ದಾಡಬೇಕಾಗುತ್ತದೆ.
