ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ʼಏನಯ್ಯಾ ಗರ್ಮಿʼ
ಇನ್ನು ಮಕ್ಕಳಿಗೆ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡದೇ ಬಹುದೊಡ್ಡ ತಪ್ಪು ಮಾಡಿರುವ ನಾವು ಹನ್ನೊಂದು ಎಂದರೆ ಇಲವೆನ್, ಗಡಿಯಾರ ಎಂದರೆ ಕ್ಲಾಕ್, ಹಸು ಎಂದರೆ ಕೌ ಎಂದು ರಿವರ್ಸ್ ಆಡರ್ನಲ್ಲಿ ತಿಳಿಹೇಳಬೇಕಾದ ವಿಪರ್ಯಾಸಕ್ಕೆ ಬಿದ್ದಿದ್ದೇವೆ. ಮಾತೃಭಾಷೆಯಲ್ಲಿ ಗ್ರಹಿಕೆ ಹಾಗೂ ಮನನವಾಗುವಂತೆ ಅನ್ಯ ಭಾಷೆಯಲ್ಲಿ ಆಗಲು ಸಾಧ್ಯವಿಲ್ಲ, ದೃಷ್ಠಿಯಿಲ್ಲದವ ಬೇರೊಬ್ಬರಿಂದ ವಿವರಣೆ ಕೇಳಿ ವಸ್ತುಗಳನ್ನು ಕಲ್ಪಿಸಿಕೊಂಡು ಗ್ರಹಿಸಬೇಕಾದ ವಿಚಿತ್ರ ಕಲಿಕಾಕ್ರಮವನ್ನು ಅಜ್ಞಾನದಿಂದಲೋ, ಅನಿವಾರ್ಯತೆಯಿಂದಲೋ, ವಾಸ್ತವದ ಅರಿವಿಲ್ಲದ ಅಂಧಾನುಕರಣೆಯಿಂದಲೋ ಅಪ್ಪಿಕೊಂಡುಬಿಟ್ಟಿದ್ದೇವೆ.
ಎಲ್ಲಿಂದಲೋ ಎಲ್ಲಿಗೋ ಹೋಯಿತು. ಕಾರ್ಯಕ್ರಮ ಪ್ರಾರಂಭವಾಯಿತು. ನಮ್ಮ ಪುಸ್ತಕ ಪ್ರೇಮೀ ಹುಡುಗ ಸಪ್ಪಗಾಗಿ ಕುಳಿತಿದ್ದನ್ನು ಕಂಡ ಅವನ ತಂದೆ, ಜೇಬಿನಿಂದ ಹಣತೆಗೆದು ಕೊಟ್ಟು, ಇಗೋ ಪುಸ್ತಕ ಕೊಂಡುಕೋ. ಆದರೆ ಕೊನೇ ಪರೀಕ್ಷೆ ಮುಗಿಯುವ ತನಕ ಆ ಪುಸ್ತಕವನ್ನು ಓದಬಾರದು ಎಂದು ತಾಕೀತು ಮಾಡಿದರು. ಹುಡುಗ ಪುಸ್ತಕ ಸಿಕ್ಕದ ಸಂಭ್ರಮದಲ್ಲಿ ಆಯ್ತೆಂದು ತಲೆಯಾಡಿಸಿದ. ಕಾರ್ಯಕ್ರಮ ಮುಗಿಯುವವರೆಗೂ ಹುಡುಗ ಪುಸ್ತಕದ ಪುಟಪುಟವನ್ನು ತಿರುಗಿಸಿ ನೋಡಿ ಸಡಗರಪಡುತಿದ್ದ. ಕಾರ್ಯಕ್ರಮ ಮುಗಿಯಿತು. ರಾತ್ರ್ರಿಯಾಗಿತ್ತು. ಮನೆಗೆ ಹೋಗಿ ಉಂಡು ಮಲಗಿದರು. ರಾತ್ರಿಯಿಡೀ ಹುಡುಗನಿಗೆ ಸರಿಯಾಗಿ ನಿದ್ದೆಯಿಲ್ಲ. ಪುಸ್ತಕದ ಪ್ರತೀ ಹಾಳೆಯೂ ಓದುವಂತೆ ಅವನನ್ನು ಪ್ರಚೋದಿಸುತ್ತಿದೆ.
ಬೆಳಗಿನ ಸುಮಾರು ನಾಲ್ಕರ ಜಾವ. ಯಾರೋ ಕಿಟಾರನೆ ಕಿರುಚುದಂತಾಯ್ತು. ತಂದೆತಾಯಿ ಗಡಬಡಿಸಿ ಮಗನ ಕೋಣೆಗೆ ಬಂದು ನೋಡುತ್ತಾರೆ, ಮಗನಿಲ್ಲ! ಗಾಬರಿಯಿಂದ ಹುಡುಕುತ್ತಿದ್ದಾಗ ಟಾಯ್ಲೆಟ್ಟಿನ ಬಾಗಿಲು ತೆರೆದುಕೊಂಡಿತು. ಹುಡುಗ ತನ್ನೆರಡೂ ಕೈಗಳನ್ನು ಬೆನ್ನ ಹಿಂದೆ ಹಿಡಿದುಕೊಂಡಿದ್ದ. ಹುಡುಗರ ಕೈಯ್ಯಲ್ಲಿರುವ ಬಂದೂಕು, ಹುಡುಗಿಯರ ಬಳಿಯ ಗುಟ್ಟು ಎಷ್ಟು ದಿನಾ ಸುಮ್ಮನಿದ್ದಾವು? ತಾಯಿ ಗಾಬರಿಯಿಂದ ಹುಡುಗನ ಬುಜ ಹಿಡಿದು ಕರೆತಂದು ಹಿಂಬದಿಯ ಕೈಯ್ಯನ್ನು ಮುಂದಕ್ಕೆ ತಂದು ನೋಡುತ್ತಾರೆ! ಕೈಯ್ಯಲ್ಲಿ ಪುಸ್ತಕ! “ಯಾಕಪ್ಪಾ ಕಿರುಚಿದೆ? ಏನಾಯ್ತು?” ಎಂದು ಆತಂಕದಿಂದ ತಂದೆ ಕೇಳಿದರು.
“ಈ ಪುಸ್ತಕದಲ್ಲಿ ಚಿರತೆ ಬೇಟೆಯಾಡಲು ಹೊಂಚುಹಾಕುವ ಸನ್ನಿವೇಶವಿತ್ತು. ಅದನ್ನು ಓದುತಿದ್ದ ಸಮಯಕ್ಕೆ ಸರಿಯಾಗಿ ನಮ್ಮನೆ ಪಕ್ಕದಲ್ಲೆಲ್ಲೋ ನಾಯಿ ಬೊಗಳಿತು. ನನಗೆ ಭಯವಾಗಿ ನನಗರಿವಿಲ್ಲದಂತೆ ಕೂಗಿಬಿಟ್ಟೆ. ಅಷ್ಟೆ.” ಪುಸ್ತಕದ ಟೈಟಲ್ ಬೆಳಂದೂರಿನ ನರಭಕ್ಷಕ.

ಲೇಖಕ ಸೃಷ್ಠಿಸಿದ ಪಾತ್ರಗಳೇ ಲೇಖಕನೊಡನೆ ಜಗಳ ಆಡಿ `ನೀವು ಹೀಗಾ ಬರೆಯೋದು?’ ಎಂದು ತಗಾದೆ ತೆಗೆಯೋದು ಒಂದು ಸ್ಟೇಜ್ ಇನ್ಸಿಡೆಂಟ್. ಇದಕ್ಕೆ ಉದಾಹರಣೆಯೆಂದರೆ, ಕರ್ವಾಲೋದಲ್ಲಿ ಬರುವ ಬಿರಿಯಾನಿ ಕರಿಯಪ್ಪ ಎಂಬ ಪಾತ್ರ.
ತೇಜಸ್ವಿಯವರ ಚಿತ್ರಕೂಟ ತೋಟವಿದ್ದದ್ದು ಜನ್ನಾಪುರ ಬಳಿಯ ಹೊಯ್ಸಳಲು ಗ್ರಾಮದ ಹತ್ತಿರ. ಸಮೀಪದ ಹಳ್ಳಿ ನಿಡಗೋಡಿನ ಅಡುಗೆ ಕೆಲಸದ ಕರಿಯಪ್ಪ ಎಂಬ ವ್ಯಕ್ತಿ ಕರ್ವಾಲೋದಲ್ಲಿ ಪಾತ್ರವಾಗಿ ಕಾಣಿಸಿಕೊಂಡು ಗರ್ಮಿ ಸಾಮಾನಿನ ಎಫೆಕ್ಟನ್ನೆಲ್ಲಾ ತೋರ್ಪಡಿಸುತ್ತಾನೆ. ಆ ಪುಸ್ತಕ ಓದಿದ ಕಾಲೇಜಿನ ಹುಡುಗರು ಕರಿಯಪ್ಪನನ್ನು `ಏನಯ್ಯಾ ಗರ್ಮಿ’ ಎಂದು ಛೇಡಿಸಿದಾಗ ಡಿಸ್ಟರ್ಬ್ ಆದ ಕರಿಯಪ್ಪ ತನ್ನ ಪಾತ್ರದ ಕರ್ತೃ ತೇಜಸ್ವಿಯವರನ್ನು ತರಾಟೆಗೆ ತೆಗೆದುಕೊಂಡಂಥಾ ಸಂದರ್ಭ ಸಾಹಿತ್ಯ ಲೋಕದಲ್ಲಿ ತೀರಾ ದುರ್ಲಭ.
ಸಾಹಿತ್ಯದ ಅನಂತತೆ ಹಾಗೂ ಮಾನವೀಯತೆಯ ಶಕ್ತಿಯನ್ನು ವಿಶ್ಲೇಷಿಸುತ್ತಾ , `ಎಂತೆಂಥಾ ಕಲ್ಲಿನ ಮಾನ್ಯುಮೆಂಟ್ಗಳೆಲ್ಲಾ ನಾಶವಾಗಿರೋದನ್ನು ನೋಡಿದ್ದೀವಿ, ಆದರೆ ಪಂಪನ “ಮಾನವ ಜಾತಿ ತಾನೊಂದೇ ವಲಂ’’ ಎಂಬ ಉದ್ಘಾರವಿದೆ ನೋಡಿ, ಅದು ಒಂದು ಸಾವಿರ ವರ್ಷಗಳನ್ನು ದಾಟಿಕೊಂಡು ಬಂದಿದೆ. This is so extraordinary and it is not so easy to destroy.’ ಎನ್ನುತ್ತಾರೆ ತೇಜಸ್ವಿ.
ಸಂಜೆಯ ಹರಟೆಯಲ್ಲಿ ಇರಾಕ್-ಅಫ್ಘಾನಿಸ್ತಾನದ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದರು. ಅಲ್ಲಿನ ವಿದ್ಯಮಾನಗಳು ಭಾರತದ ಮೇಲೆ ಬೀರುತ್ತಿರುವ ಪರಿಣಾಮಗಳ ಕುರಿತು ದುಗುಡ ವ್ಯಕ್ತಪಡಿಸುತ್ತಿದ್ದರು. ಕಾಶ್ಮೀರ, ಮುಂಬೈ, ದೆಹಲಿಯಲ್ಲಿ ಆಗಾಗ್ಗೆ ನಡೆಯುತ್ತಿದ್ದ ಉಗ್ರರ ದಾಳಿಗೆ ರಾಜಕೀಯ ಪರಿಹಾರವನ್ನು ಚಿಂತಿಸುತ್ತಿದ್ದರು. ಧಾರ್ಮಿಕ ಮೂಲಭೂತವಾದವನ್ನು ಉಲ್ಲೇಖಿಸಿ ತಮಾಷೆಗಾಗಿ “ಪುರುಸೊತ್ತಾದಾಗಲ್ಲಾ, ಪಟಾಕಿ ಹೊಡೀತಾರಲ್ಲೋ ಮಾರಾಯ ಈ ತಾಲಿಬಾನಿಗಳು!” ಎಂದು ಗೇಲಿ ಮಾಡುತ್ತಿದ್ದರು.
ಅಶಿಕ್ಷಿತರ ಅಮಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುವ ಸಮಯಸಾಧಕ ರಾಜಕಾರಣಿಗಳು, ಅನಕ್ಷರತೆ, ಅಜ್ಞಾನ, ಬಡತನವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಶೋಷಣೆ ಮುಂದುರೆಸುವ ಪಟ್ಟಭದ್ರರೂ, ಇವೆಲ್ಲದರ ವಿರುದ್ದ ಹತಾಶರಾಗಿ ಧ್ವನಿ ಎತ್ತುವ ಹಿಂದುಳಿದವರು ಶಸ್ತ್ರ ಕೈಗೆತ್ತಿಕೊಳ್ಳುವುದು, ಹಿಂದುಳಿದವರಿಗೆ ಕಾಡುವ ಅನಾಥ ಪ್ರಜ್ಞೆಯೇ ಈ ರೀತಿಯ ಕೃತ್ಯಗಳಿಗೆ ಪ್ರೇರಣೆ.
ಐಡೆಂಟಿಟಿ ಕ್ರೈಸಿಸ್ ಸಮಾಜ ವಿರೋಧಿ ಕೃತ್ಯಗಳಿಗೆ ಕಾರಣೀಭೂತವಾಗುವ ಪ್ರಕ್ರಿಯೆ. ಅನಿವಾರ್ಯತೆಯಿಂದ ಅಂಗಡಿ, ಹೋಟೆಲ್, ಗ್ಯಾರೇಜ್ಗೆ ಕರ್ನಾಟಕ, ಭಾರತ್, ಬರೀ ಇನಿಷಿಯಲ್ಗಳು ಅಥವಾ ಆಯಾ ಊರಿನ ಹೆಸರಿಡುವಷ್ಟು ಇನ್ಸೆೆಕ್ಯುರಿಟಿ ಕಾಡುತ್ತಾ ಇದೆ ಎಂದು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದರು.
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

