ಕೊರಟಗೆರೆ, ಜೂನ್ 17: ತಾಲೂಕಿನ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ ಜೂನ್ 21ರಂದು ನಡೆಯಲಿರುವ 20ನೇ ವಾರ್ಷಿಕೋತ್ಸವ, ಜಗದ್ಗುರು ರೇಣುಕಾಚಾರ್ಯ ಹಾಗೂ ಜಗಜ್ಯೋತಿ ಬಸವೇಶ್ವರರ ಜಯಂತಿ ಮಹೋತ್ಸವದ ಅಂಗವಾಗಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ.
ಈ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶ್ರೀಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು, ಉಚಿತ ಸಾಮೂಹಿಕ ವಿವಾಹದಲ್ಲಿ ಭಾಗವಹಿಸಲು ಬಯಸುವ ನೂತನ ವಧು-ವರರು ಮಠದಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.
ಜೂನ್ 21ರಂದು ವೀರಶೈವ ವಟುಗಳಿಗೆ ಉಚಿತ ದೀಕ್ಷಾ ಸಂಸ್ಕಾರ, ಸಾಮೂಹಿಕ ವಿವಾಹ, ಜನಜಾಗೃತಿ ಧರ್ಮ ಸಮಾವೇಶ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಮೂಹಿಕ ವಿವಾಹ ಕಾರ್ಯಕ್ರಮವು ಮಧ್ಯಾಹ್ನ 12.20 ಗಂಟೆಗೆ ಜರುಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕ ಹಾಗೂ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಉದ್ಘಾಟಿಸಲಿದ್ದು, ಅವರ ಅಧ್ಯಕ್ಷತೆಯಲ್ಲಿ ಮಹೋತ್ಸವ ನಡೆಯಲಿದೆ. ಸಾವಿರಾರು ಭಕ್ತರ ಸಮ್ಮುಖದಲ್ಲಿ ಈ ಐತಿಹಾಸಿಕ ಸಮಾರಂಭ ಜರುಗಲಿದ್ದು, ಸಂಜೀವಿನಿ ಪರ್ವತದ ತಪ್ಪಲಿನ ಪುಣ್ಯಕ್ಷೇತ್ರ ಸಿದ್ದರಬೆಟ್ಟದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಧರ್ಮಸ್ಥಳದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಅವರಿಗೆ 20ನೇ ವರ್ಷದ ಪ್ರತಿಷ್ಠಿತ ‘ಸಿದ್ಧಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ, ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ, ಮಾಜಿ ಸಚಿವ ರಘುವೀರ ರೆಡ್ಡಿ ಸೇರಿದಂತೆ ಹಲವು ಗಣ್ಯರು, ರಾಜಕೀಯ ಮುಖಂಡರು ಹಾಗೂ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು, “ಕಳೆದ 20 ವರ್ಷಗಳಿಂದ ಶ್ರೀಮಠದಲ್ಲಿ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು ಮುಂದೆ ಸಿದ್ದರಬೆಟ್ಟದ ಅಧಿದೇವತೆ ಸಿದ್ದಪ್ಪನಿಗೆ ಪ್ರಿಯವಾದ ಹೋಳಿಗೆ-ತುಪ್ಪ ಪ್ರಸಾದವನ್ನು ವರ್ಷಪೂರ್ತಿ ಪ್ರತಿದಿನ ಆಗಮಿಸುವ ಭಕ್ತರಿಗೆ ವಿತರಿಸುವ ಯೋಜನೆ ಆರಂಭಿಸಲಾಗುವುದು” ಎಂದು ತಿಳಿಸಿದರು.
ಈ ಮಹತ್ವಾಕಾಂಕ್ಷಿ ಯೋಜನೆಗೆ ಭಕ್ತರು ಸಂಪೂರ್ಣ ಸಹಕಾರ ನೀಡುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಮಹೋತ್ಸವವನ್ನು ಯಶಸ್ವಿಗೊಳಿಸಲು ಎಲ್ಲ ಸದ್ಭಕ್ತರನ್ನು ಆಹ್ವಾನಿಸಿದರು.
ಕೊರಟಗೆರೆಯ ಬಸವೇಶ್ವರ ದೇವಾಲಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕಾಮರಾಜು, ಬಿಜೆಪಿ ತಾಲ್ಲೂಕು ಅಧ್ಯಕ್ಷ ರುದ್ರೇಶ್, ಎ.ಡಿ. ಬಲರಾಮಯ್ಯ, ಪವನ್ ಕುಮಾರ್, ಮಹಾಲಿಂಗಪ್ಪ, ದರ್ಶನ್, ಮಂಜುಳಾರಾಧ್ಯ, ರಾಜಣ್ಣ, ಸೋಮಣ್ಣ, ಆರ್.ಎಸ್. ರಾಜಣ್ಣ, ಶಿವಕುಮಾರ್, ಪಂಚಾಕ್ಷರಯ್ಯ, ವೀರಭದ್ರಯ್ಯ (ಭದ್ರಣ್ಣ), ರವಿಕುಮಾರ್, ಮಹೇಶ್ ಸೇರಿದಂತೆ ಅನೇಕ ಮುಖಂಡರು ಹಾಗೂ ಸದ್ಭಕ್ತರು ಉಪಸ್ಥಿತರಿದ್ದರು.
– ವರದಿ: ನರಸಿಂಹಯ್ಯ ಹೊಸಕೋಟೆ
