ಕೊರಟಗೆರೆ:- ನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಕಲೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ರಂಗೋಲಿ ಸೇರಿದಂತೆ ಇಂತಹ ಸಾಂಸ್ಕೃತಿಕ ಸ್ಪರ್ಧೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕೋಳಾಲ ಶ್ರೀ ಬಸವೇಶ್ವರ ಕೇಂದ್ರೀಯ ಸಂಯುಕ್ತ ಪದವಿಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಚಿಂಪುಗಾನಹಳ್ಳಿ ನಟರಾಜ್ ಸಿ ವಿ ಅಭಿಪ್ರಾಯಪಟ್ಟರು.
ಅವರು ತಾಲ್ಲೂಕಿನ ಶಕುನಿ ತಿಮ್ಮನಹಳ್ಳಿ ಗ್ರಾಮದಲ್ಲಿ ಗಣಪತಿ ಪ್ರತಿಷ್ಠಾಪನೆ ಅಂಗವಾಗಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯ ತೀರ್ಪುಗಾರರಾಗಿ ಭಾಗವಹಿಸಿ ಮಾತನಾಡಿದ ಅವರು, ರಂಗೋಲಿ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರದ ಪ್ರತೀಕವಾಗಿದೆ. ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಇಂತಹ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುವುದರಿಂದ ಗ್ರಾಮೀಣ ಭಾಗದ ಪ್ರತಿಭೆಗಳಿಗೆ ವೇದಿಕೆ ದೊರೆಯುವುದರ ಜತೆಗೆ, ಯುವಜನತೆ ಹಾಗೂ ಮಕ್ಕಳಲ್ಲಿ ನಮ್ಮ ಸಾಂಪ್ರದಾಯಿಕ ಕಲೆಯ ಬಗ್ಗೆ ಆಸಕ್ತಿ ಮೂಡುತ್ತದೆ ಎಂದರು.
ರಂಗೋಲಿ ಸ್ಪರ್ಧೆ ಆಯೋಜಿಸುವ ಮೂಲಕ ಸಾಂಪ್ರದಾಯಿಕ ಕಲೆಗೆ ಪ್ರೋತ್ಸಾಹ ನೀಡಲಾಗಿದೆ. ಇಂತಹ ಕಾರ್ಯಕ್ರಮಗಳು ಕೇವಲ ಮನರಂಜನೆಗೆ ಸೀಮಿತವಾಗದೆ ಗ್ರಾಮದ ಜನರನ್ನು ಒಂದೆಡೆ ಸೇರಿಸಿ ಪರಸ್ಪರ ಬಾಂಧವ್ಯ ಬೆಸೆಯಲು ಸಹಕಾರಿಯಾಗುತ್ತವೆ. ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವುದರಿಂದ ಗ್ರಾಮಸ್ಥರ ಒಗ್ಗಟ್ಟು ಮತ್ತಷ್ಟು ಗಟ್ಟಿಯಾಗಲಿದೆ ಎಂದು ಹೇಳಿದರು.
ಮೂಢನಂಬಿಕೆ ಹಾಗೂ ಕಂದಾಚಾರಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನವೂ ಸ್ಪರ್ಧೆಯಲ್ಲಿ ಕಂಡುಬಂದಿತು. ಯುವ ಸಮೂಹವು ವಾಮಾಚಾರ ಹಾಗೂ ಕಂದಾಚಾರಗಳ ದುಷ್ಪರಿಣಾಮಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ರಂಗೋಲಿ ಬಿಡಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆಯಿತು. ಇಂತಹ ಸೃಜನಶೀಲ ಪ್ರಯತ್ನಗಳು ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ಸಹಕಾರಿಯಾಗಲಿವೆ. ಇದು ಉತ್ತಮ ಬೆಳವಣಿಗೆ ಎಂದು ನಟರಾಜ್ ಹೇಳಿದರು.
ಎಲ್ಲ ವಯೋಮಾನದವರ ಉತ್ಸಾಹ
ಗಣಪತಿ ಪ್ರತಿಷ್ಠಾಪನೆ ಅಂಗವಾಗಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಗೆ ಗ್ರಾಮಸ್ಥರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ವಿವಿಧ ತಂಡಗಳಲ್ಲಿ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು.
10 ವರ್ಷದ ಮಕ್ಕಳಿಂದ ಹಿಡಿದು 70 ವರ್ಷದ ಹಿರಿಯರವರೆಗೂ ಯಾವುದೇ ವಯೋಭೇದವಿಲ್ಲದೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮಹಿಳೆಯರು ಮತ್ತು ಪುರುಷರು ಎಂಬ ಭೇದವಿಲ್ಲದೆ ಎಲ್ಲರೂ ರಂಗೋಲಿ ಬಿಡಿಸುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು. ಸ್ಪರ್ಧಿಗಳು ರಂಗೋಲಿ ಬಿಡಿಸಲು ಅಗತ್ಯವಾದ ಬಣ್ಣಗಳು, ಪರಿಕರಗಳು ಸೇರಿದಂತೆ ವಿವಿಧ ಸಾಮಗ್ರಿಗಳೊಂದಿಗೆ ರಾತ್ರಿ 8 ಗಂಟೆಗೇ ಸ್ಥಳಕ್ಕೆ ಆಗಮಿಸಿ ಹೆಸರು ನೋಂದಾಯಿಸಿಕೊಂಡರು. ಬಳಿಕ ರಾತ್ರಿ 9 ಗಂಟೆಗೆ ಸ್ಪರ್ಧೆಗೆ ಚಾಲನೆ ನೀಡಲಾಯಿತು.
ಸ್ಪರ್ಧಿಗಳಿಗೆ ರಂಗೋಲಿ ಪೂರ್ಣಗೊಳಿಸಲು ಒಂದು ಗಂಟೆ ಕಾಲಾವಕಾಶ ನೀಡಲಾಗಿತ್ತು. ಕಲೆಗಳ ಮೂಲಕ ಅರಿವು ಸ್ಪರ್ಧೆಯಲ್ಲಿ ಭಾಗವಹಿಸಿದ್ದವರು ತಮ್ಮ ಕಲ್ಪನೆ ಹಾಗೂ ಸೃಜನಶೀಲತೆಗೆ ತಕ್ಕಂತೆ ವಿವಿಧ ವಿಷಯಗಳನ್ನು ರಂಗೋಲಿಯಲ್ಲಿ ಮೂಡಿಸಿದರು. ಕೆಲವರು ಪ್ರಕೃತಿ ಸೌಂದರ್ಯವನ್ನು ಬಣ್ಣಗಳ ಮೂಲಕ ಕಟ್ಟಿಕೊಟ್ಟರೆ, ಇನ್ನು ಕೆಲವರು ಗ್ರಾಮೀಣ ಬದುಕಿನ ಚಿತ್ರಣ, ಕೃಷಿ ಚಟುವಟಿಕೆಗಳು, ಧವಸ–ಧಾನ್ಯಗಳ ಸುಗ್ಗಿ ಹಾಗೂ ವಿವಿಧ ಸಾಂಪ್ರದಾಯಿಕ ವಿನ್ಯಾಸಗಳನ್ನು ರಂಗೋಲಿಯಲ್ಲಿ ಅರಳಿಸಿದರು.
ಕೆಲವು ರಂಗೋಲಿಗಳು ಸಾಮಾಜಿಕ ಸಂದೇಶಗಳನ್ನು ಸಾರುವಂತಿದ್ದರೆ, ಇನ್ನು ಕೆಲವು ಸಾಂಪ್ರದಾಯಿಕ ವಿನ್ಯಾಸ ಹಾಗೂ ಬಣ್ಣಗಳ ಸಂಯೋಜನೆಯಿಂದ ಗಮನ ಸೆಳೆದವು. ಸ್ಪರ್ಧಿಗಳು ತಾವು ಬಿಡಿಸಿದ ರಂಗೋಲಿಗಳನ್ನು ಪೂರ್ಣಗೊಳಿಸಿದ ಬಳಿಕ ಅದರ ಸೌಂದರ್ಯವನ್ನು ಕಣ್ತುಂಬಿಕೊಂಡು ಸಂತಸಪಟ್ಟರು. ಹಲವರು ರಂಗೋಲಿಯೊಂದಿಗೆ ಛಾಯಾಚಿತ್ರ ಹಾಗೂ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಒಟ್ಟಾರೆ ಗಣಪತಿ ಪ್ರತಿಷ್ಠಾಪನೆಯ ಧಾರ್ಮಿಕ ವಾತಾವರಣದ ನಡುವೆ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ಗ್ರಾಮಸ್ಥರಲ್ಲಿ ಉತ್ಸಾಹ ಮೂಡಿಸುವ ಜತೆಗೆ, ಸಾಂಸ್ಕೃತಿಕ ಕಲೆಗೆ ಪ್ರೋತ್ಸಾಹ ನೀಡಿತು. ವಿವಿಧ ವಯೋಮಾನದವರು ಒಗ್ಗಟ್ಟಿನಿಂದ ಪಾಲ್ಗೊಂಡಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ಸ್ಪರ್ಧೆಯ ತೀರ್ಪುಗಾರರಾಗಿ ನಟರಾಜ್ ಅವರು ಪಾರದರ್ಶಕವಾಗಿ ತೀರ್ಪು ನೀಡಿದ್ದಕ್ಕೆ ಸ್ಪರ್ಧಿಗಳು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು.
