ಕೊರಟಗೆರೆ:- ತಾಲ್ಲೂಕಿನ ಸಿ.ಎನ್.ದುರ್ಗ ಹೋಬಳಿಯ ಸಿದ್ಧರಬೆಟ್ಟ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಗಾಂಜಾ ಸೇರಿದಂತೆ ಮಾದಕ ದ್ರವ್ಯಗಳ ಅಕ್ರಮ ಮಾರಾಟ ನಡೆಯುತ್ತಿದೆ ಎಂಬ ಸಾರ್ವಜನಿಕರ ಪ್ರಶ್ನೆಗೆ ಅಬಕಾರಿ ಇಲಾಖೆಯ ಸಿಬ್ಬಂದಿ ಕೊರತೆಯ ಸಮಸ್ಯೆ ಮುನ್ನೆಲೆಗೆ ಬಂದಿತು.
ಸಿದ್ಧರಬೆಟ್ಟ ಭಾಗದಲ್ಲಿ ಶ್ರೀಗಂಧ ಮರಗಳ ಕಳ್ಳತನದ ಆರೋಪಗಳ ಜತೆಗೆ ಗಾಂಜಾ ಸೊಪ್ಪು ಹಾಗೂ ಮಾದಕ ದ್ರವ್ಯಗಳ ಅಕ್ರಮ ಮಾರಾಟ ನಡೆಯುತ್ತಿದೆ ಎಂಬ ವಿಚಾರವನ್ನು ಪ್ರಸ್ತಾಪಿಸಿದ ಸಂದರ್ಭದಲ್ಲಿ, ಕೊರಟಗೆರೆ ಅಬಕಾರಿ ಇಲಾಖೆಯ ಸರ್ಕಲ್ ಇನ್ಸ್ಪೆಕ್ಟರ್ ಟಿ.ಆರ್. ಕೀರ್ತನ ಅವರು ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದು ಕಷ್ಟವಾಗುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು ಎನ್ನಲಾಗಿದೆ.
ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡಲು ಸಿಬ್ಬಂದಿ ಅಗತ್ಯ. ಆದರೆ ನಮ್ಮ ಕಚೇರಿಯಲ್ಲಿ ಅಗತ್ಯ ಪ್ರಮಾಣದ ಸಿಬ್ಬಂದಿ ಇಲ್ಲ. ಹೀಗಿರುವಾಗ ಹೇಗೆ ಕೆಲಸ ಮಾಡುವುದು’ ಎಂಬರ್ಥದಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ.
13 ಹುದ್ದೆಗಳಿಗೆ ಆರು ಮಂದಿ
ಕೊರಟಗೆರೆ ಅಬಕಾರಿ ಇಲಾಖೆಯಲ್ಲಿ ಒಟ್ಟು 13 ಸಿಬ್ಬಂದಿ ಇರಬೇಕಾದ ಸ್ಥಳದಲ್ಲಿ ಪ್ರಸ್ತುತ ಆರು ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ. ಐವರು ಕಾನ್ಸ್ಟೆಬಲ್ಗಳ ಪೈಕಿ ಇಬ್ಬರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, ಅವರೂ ನಿಯೋಜನೆ (ಡ್ಯಾಪ್ಟೇಶನ್) ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೆ, ಎಫ್ ಡಿ ಸಿ ಹಾಗೂ ಎಸ್ ಡಿ ಸಿ ಹುದ್ದೆಗಳು ಖಾಲಿ ಇದ್ದು, ಇಬ್ಬರು ಪಿಸಿ ಹುದ್ದೆಗಳೂ ಭರ್ತಿಯಾಗಿಲ್ಲ. ಹೀಗಾಗಿ ಇಲಾಖೆಯ ಒಟ್ಟು ಮಂಜೂರಾದ ಹುದ್ದೆಗಳ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಹುದ್ದೆಗಳು ಖಾಲಿ ಇರುವುದರಿಂದ ದಿನನಿತ್ಯದ ಕಾರ್ಯನಿರ್ವಹಣೆ, ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಹಾಗೂ ತಪಾಸಣಾ ಕಾರ್ಯಗಳಿಗೆ ತೊಂದರೆಯಾಗುತ್ತಿದೆ ಎಂಬ ಅಸಮಾಧಾನ ಇಲಾಖೆಯಲ್ಲಿ ವ್ಯಕ್ತವಾಗಿದೆ.
ನಿಗಾ ವ್ಯವಸ್ಥೆಗೆ ಸವಾಲು
ತಾಲ್ಲೂಕಿನ ಗ್ರಾಮೀಣ ಹಾಗೂ ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಮದ್ಯ, ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಸಾಗಣೆ ಮತ್ತು ಮಾರಾಟದ ಮೇಲೆ ನಿಗಾ ವಹಿಸುವುದು ಅಬಕಾರಿ ಇಲಾಖೆಯ ಪ್ರಮುಖ ಜವಾಬ್ದಾರಿಯಾಗಿದೆ. ಆದರೆ ಸಿಬ್ಬಂದಿ ಕೊರತೆಯಿಂದಾಗಿ ವ್ಯಾಪಕ ಪ್ರದೇಶವನ್ನು ನಿರಂತರವಾಗಿ ಪರಿಶೀಲಿಸುವುದು ಕಷ್ಟವಾಗುತ್ತಿದೆ ಎನ್ನಲಾಗಿದೆ.
ವಿಶೇಷವಾಗಿ ಸಿದ್ಧರಬೆಟ್ಟದಂತಹ ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಅಥವಾ ಮಾಹಿತಿ ಬಂದಾಗ ತ್ವರಿತವಾಗಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲು ಅಗತ್ಯ ಸಿಬ್ಬಂದಿ ಲಭ್ಯವಿರಬೇಕು. ಸಿಬ್ಬಂದಿ ಕೊರತೆಯ ಕಾರಣದಿಂದ ಇಲಾಖೆಯ ಕಾರ್ಯಾಚರಣೆ ಮೇಲೆ ಪರಿಣಾಮ ಬೀರದಂತೆ ಸರ್ಕಾರ ಅಗತ್ಯ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
- ಶ್ರೀನಿವಾಸ್ ಕೊರಟಗೆರೆ.
