ಹಾಸನ: ಅನುದಾನರಹಿತ ಹಾಗೂ ಅನುದಾನಿತ ಖಾಸಗಿ ಶಾಲೆಗಳು ಹಲವು ವರ್ಷಗಳಿಂದ ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ಸದನ ಸಮಿತಿ ಸಲ್ಲಿಸಿರುವ ಮಧ್ಯಂತರ ವರದಿಯ ಆಧಾರದ ಮೇಲೆ ಶಿಕ್ಷಣ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹಾಸನ ಜಿಲ್ಲಾ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (HUSMA) ಒತ್ತಾಯಿಸಿದೆ.
ಖಾಸಗಿ ಶಾಲೆಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಶಿಕ್ಷಣ ಸಚಿವರ ಸೂಚನೆಯ ಮೇರೆಗೆ ವಿಧಾನ ಪರಿಷತ್ ಸದಸ್ಯರು ಹಾಗೂ KAMS ಗೌರವಾಧ್ಯಕ್ಷ ಪುಟ್ಟಣ್ಣ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸದನ ಸಮಿತಿ ರಚಿಸಲಾಗಿತ್ತು. ಸಮಿತಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ, ನಿರಾಣಿ ಹಣಮಂತ ರುದ್ರಪ್ಪ, ಎಸ್.ಎಲ್. ಭೋಜೇಗೌಡ, ಬಲ್ಮೀಸ್ ಬಾನು, ರಾಮೋಜಿಗೌಡ, ಡಿ.ಟಿ. ಶ್ರೀನಿವಾಸ್ ಹಾಗೂ ಕೆ. ವಿವೇಕಾನಂದ ಸೇರಿದಂತೆ ಸದಸ್ಯರು ಇದ್ದು, ವಿವಿಧ ವಿಚಾರಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದಾರೆ ಎಂದು HUSMA ತಿಳಿಸಿದೆ.
ಮಾನ್ಯತೆ ನವೀಕರಣ ಸರಳೀಕರಣಕ್ಕೆ ಒತ್ತಾಯ
2017–18ನೇ ಸಾಲಿನ ಮೊದಲು ಸ್ಥಾಪನೆಯಾದ ಶಾಲೆಗಳು ಹಾಗೂ ಹೊಸ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಅಗ್ನಿ ಮತ್ತು ಕಟ್ಟಡ ಸುರಕ್ಷತೆ, ಭೂ ಪರಿವರ್ತನೆ, ಕಟ್ಟಡ ನಕ್ಷೆ ಅನುಮೋದನೆ, 30 ವರ್ಷಗಳ ನೋಂದಣಿ ಪತ್ರ, ಹಳೆಯ ಶಾಲೆಗಳಿಗೆ ವಿಧಿಸಲಾಗುತ್ತಿರುವ ₹3 ಲಕ್ಷ ಠೇವಣಿ ಹಾಗೂ ಮೂಲಸೌಕರ್ಯ ಮಾನದಂಡ ಸೇರಿದಂತೆ ಹಲವು ವಿಚಾರಗಳನ್ನು ವಿಶೇಷ ಸದನ ಸಮಿತಿ ಪರಿಶೀಲಿಸಿದೆ ಎಂದು ತಿಳಿಸಲಾಗಿದೆ.
ಒಂದೇ ಆವರಣದಲ್ಲಿ ಕಾರ್ಯನಿರ್ವಹಿಸುವ ಶಿಕ್ಷಣ ಸಂಸ್ಥೆಗಳು, ಖಾಸಗಿ ಅನುದಾನಿತ ಶಿಕ್ಷಕರ ವೇತನ, ಆರ್ಟಿಇ ಮರುಪಾವತಿ, ಶಾಲೆಗಳ ಸ್ಥಳಾಂತರ ಮತ್ತು ಹಸ್ತಾಂತರ, ಕೇಂದ್ರ ಪಠ್ಯಕ್ರಮದ ಶಾಲಾ ಆವರಣದಲ್ಲಿ ರಾಜ್ಯ ಪಠ್ಯಕ್ರಮದ ಶಾಲೆ ಹಾಗೂ ಪದವಿಪೂರ್ವ ಶಿಕ್ಷಣಕ್ಕೆ ಅವಕಾಶ ನೀಡುವ ವಿಚಾರಗಳನ್ನೂ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಒಕ್ಕೂಟ ಹೇಳಿದೆ.
ಇದರೊಂದಿಗೆ ಖಾಸಗಿ ಶಾಲೆಗಳಿಗೆ ಆಸ್ತಿ ತೆರಿಗೆ, BESCOM, BWSSB ಹಾಗೂ ಕಸ ವಿಲೇವಾರಿ ಶುಲ್ಕವನ್ನು ವಾಣಿಜ್ಯ ದರದಲ್ಲಿ ವಿಧಿಸಲಾಗುತ್ತಿರುವ ವಿಚಾರಗಳ ಬಗ್ಗೆಯೂ ಸಮಿತಿ ಗಮನ ಹರಿಸಿದೆ ಎಂದು ತಿಳಿಸಿದರು.
ಹಳೆಯ ಶಾಲೆಗಳಿಗೆ ಹೊಸ ನಿಯಮ ಅನ್ವಯಿಸದಂತೆ ಕ್ರಮ
KAMS ಸಂಘವು ನ್ಯಾಯಾಲಯದಲ್ಲಿ ಪ್ರಸ್ತಾಪಿಸಿದ್ದ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ WP No.5380/2022 ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ 2017–18ನೇ ಸಾಲಿನ ಮೊದಲು ಸ್ಥಾಪಿತವಾದ ಶಾಲೆಗಳ ಮೇಲೆ ನಂತರ ಜಾರಿಗೆ ಬಂದ ಹೊಸ ನಿಯಮಗಳನ್ನು ಹೇರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು HUSMA ತಿಳಿಸಿದೆ.
ನ್ಯಾಯಾಲಯದ ನಿರ್ದೇಶನದ ಹಿನ್ನೆಲೆಯಲ್ಲಿ ನಿಯಮಗಳನ್ನು ಸರಳೀಕರಿಸುವ ಕುರಿತು ವಿಶೇಷ ಸದನ ಸಮಿತಿ ಪರಿಶೀಲನೆ ನಡೆಸಿ ಮಧ್ಯಂತರ ವರದಿ ಸಲ್ಲಿಸಿದೆ. ಶಿಕ್ಷಣ ಸಚಿವರು ವರದಿಯನ್ನು ಅಂಗೀಕರಿಸಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳು ಅಗತ್ಯ ಆದೇಶಗಳನ್ನು ಹೊರಡಿಸಿ ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ಪ್ರಕ್ರಿಯೆಯನ್ನು ಸರಳಗೊಳಿಸಲು ಶಿಕ್ಷಣ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟ ಆಗ್ರಹಿಸಿದೆ.
ಶೇ.15ರ ಗ್ರಾಮೀಣ ಮೀಸಲಾತಿ ಮುಂದುವರಿಸಲು ಒತ್ತಾಯ
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರ ಅವಧಿಯಲ್ಲಿ ಜಾರಿಗೆ ಬಂದಿದ್ದ ಶೇ.15ರ ಮೀಸಲಾತಿಯನ್ನು ವಿಭಜಿಸಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ತಲಾ ಶೇ.7.5ರಂತೆ ಹಂಚಿಕೆ ಮಾಡಿರುವ ಕ್ರಮವನ್ನು ಪುನರ್ಪರಿಶೀಲಿಸಬೇಕು ಎಂದು HUSMA ಒತ್ತಾಯಿಸಿದೆ.
ಹಿಂದಿನಂತೆ ಗ್ರಾಮೀಣ ಪ್ರದೇಶದ ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ಶೇ.15ರ ಮೀಸಲಾತಿಯನ್ನು ಮುಂದುವರಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ.
‘TR’ ಬಳಕೆಗೆ ಸ್ವಾಗತ
ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯದ ಎಲ್ಲ ಶಿಕ್ಷಕರ ಹೆಸರಿನ ಮುಂದೆ ಗೌರವಪೂರ್ವಕವಾಗಿ ‘TR’ ಎಂದು ಬಳಸಲು ಅವಕಾಶ ಕಲ್ಪಿಸಿರುವ ಕರ್ನಾಟಕ ಸರ್ಕಾರದ ಕ್ರಮವನ್ನು HUSMA ಸ್ವಾಗತಿಸಿದೆ. ಈ ಕ್ರಮಕ್ಕಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ KAMS ಸಂಘಟನೆಯ ಮೂಲಕ ಅಭಿನಂದನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಅದೇ ವೇಳೆ ಭಾರತೀಯ ಶಿಕ್ಷಣ ಮಂಡಳಿ ಸೊಸೈಟಿಗೆ ವಿಶಿಷ್ಟ ಸದಸ್ಯರಾಗಿ ನೇಮಕಗೊಂಡಿರುವ KAMS ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಅವರನ್ನು ಕೂಡ ಒಕ್ಕೂಟದ ವತಿಯಿಂದ ಅಭಿನಂದಿಸಲಾಗಿದೆ.
ಸೆ.19ರಂದು ಶಿಕ್ಷಕರ ದಿನಾಚರಣೆ
ಪ್ರತಿವರ್ಷದಂತೆ ಈ ವರ್ಷವೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಜಿಲ್ಲಾಡಳಿತ ನೀಡುವ ‘ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಸೇವೆಯನ್ನು ಗುರುತಿಸಿ HUSMA ವತಿಯಿಂದ ನೀಡಲಾಗುವ ‘ವಿದ್ಯಾಪ್ರೇರಣ ಪುರಸ್ಕಾರ’ ಪ್ರದಾನ ಮಾಡಲಾಗುವುದು.
ಇದರೊಂದಿಗೆ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಜಿಲ್ಲೆಯ CBSE, ICSE ಹಾಗೂ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳನ್ನು ಗೌರವಿಸುವ ಪ್ರಶಸ್ತಿ ಪ್ರದಾನ ಸಮಾರಂಭವನ್ನೂ ಆಯೋಜಿಸಲಾಗಿದೆ.
ಸೆಪ್ಟೆಂಬರ್ 19ರಂದು ಬೆಳಿಗ್ಗೆ 10 ಗಂಟೆಗೆ ಹಾಸನ ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಗಂಗಾಧರ್ ತಿಳಿಸಿದ್ದಾರೆ.
