ಹಾಸನ: ಜಿಲ್ಲೆಯ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅಕ್ಷರ ಬುಕ್ ಹೌಸ್ ಹಾಗೂ ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ವತಿಯಿಂದ ‘ಅಕ್ಷರ ಪುರಸ್ಕಾರ–2026’ ಕಾರ್ಯಕ್ರಮವನ್ನು ಅ.4ರಂದು ಆಯೋಜಿಸಲಾಗಿದೆ ಎಂದು ಗಂಗಾಧರ್ ತಿಳಿಸಿದ್ದಾರೆ.
ಹಾಸನದಲ್ಲಿ ಕಳೆದ 10 ವರ್ಷಗಳಿಂದ ಅಕ್ಷರ ಬುಕ್ ಹೌಸ್ ಓದುಗರು, ಸಾಹಿತ್ಯಾಸಕ್ತರು ಹಾಗೂ ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದೇ ಸಂದರ್ಭದಲ್ಲಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಕಳೆದ ಹತ್ತು ವರ್ಷಗಳಿಂದ ‘ಅಕ್ಷರ ಪುರಸ್ಕಾರ’ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.
ಅದರಂತೆ ಈ ವರ್ಷವೂ ಹಾಸನ ಜಿಲ್ಲೆಯಲ್ಲಿ ವ್ಯಾಸಂಗ ಮಾಡಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಪುಸ್ತಕ ರೂಪದಲ್ಲಿ ಬಹುಮಾನ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ. ಅ.4ರ ಭಾನುವಾರ ಹಾಸನದ ಗಾಂಧಿ ಭವನದಲ್ಲಿ ಜಿಲ್ಲೆಯ ವಿವಿಧ ಸಂಪನ್ಮೂಲ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಅರ್ಜಿ ಸಲ್ಲಿಸಲು ಸೆ.30 ಕೊನೆಯ ದಿನ
‘ಅಕ್ಷರ ಪುರಸ್ಕಾರ–2026’ಕ್ಕೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ಅರ್ಜಿಗಳನ್ನು ಹಾಸನದ ಅಕ್ಷರ ಬುಕ್ ಹೌಸ್, ಅಕ್ಷರ ಅಕಾಡೆಮಿ ಹಾಗೂ ಬಟ್ಟೆ ಅಂಗಡಿ–2ರಲ್ಲಿ ಪಡೆಯಬಹುದು ಎಂದು ಆಯೋಜಕರು ತಿಳಿಸಿದ್ದಾರೆ.
ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಹಾಸನ ಜಿಲ್ಲೆಯ ಶಾಲೆ ಅಥವಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿರಬೇಕು. ಖಾಸಗಿ ಶಾಲೆ ಮತ್ತು ಕಾಲೇಜುಗಳಲ್ಲಿ ಶೇ.80ಕ್ಕಿಂತ ಹೆಚ್ಚು ಹಾಗೂ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಶೇ.70ಕ್ಕಿಂತ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಕನ್ನಡ ಅಥವಾ ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೂ ಅವಕಾಶವಿದ್ದು, ಸರ್ಕಾರಿ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದರೂ ಅರ್ಜಿ ಸಲ್ಲಿಸಬಹುದಾಗಿದೆ.
ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಶಾಲೆ ಅಥವಾ ಕಾಲೇಜಿನ ಮುಖ್ಯೋಪಾಧ್ಯಾಯರು ಅಥವಾ ಪ್ರಾಂಶುಪಾಲರ ಸಹಿ ಇರುವ ಅಂಕಪಟ್ಟಿಯ ಪ್ರತಿ, ಆಧಾರ್ ಕಾರ್ಡ್ನ ಜೆರಾಕ್ಸ್ ಪ್ರತಿ ಹಾಗೂ ಒಂದು ಭಾವಚಿತ್ರವನ್ನು ಸಲ್ಲಿಸಬೇಕು.
ಆದ್ಯತೆಯ ಮೇರೆಗೆ ಒಟ್ಟು 500 ವಿದ್ಯಾರ್ಥಿಗಳಿಗೆ ‘ಅಕ್ಷರ ಪುರಸ್ಕಾರ’ ನೀಡಿ ಗೌರವಿಸಲಾಗುವುದು. ಅರ್ಜಿಯನ್ನು ವಿದ್ಯಾರ್ಥಿಯೇ ಖುದ್ದಾಗಿ ಸಲ್ಲಿಸಬೇಕು. ಅಲ್ಲದೆ, ಪುರಸ್ಕಾರ ಸ್ವೀಕರಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳೇ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಆಯೋಜಕರು ತಿಳಿಸಿದ್ದಾರೆ.
ಜಿಲ್ಲೆಯ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಸಾಧನೆಗೆ ಪ್ರೋತ್ಸಾಹ ನೀಡುವ ಮೂಲಕ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡಲು ಉತ್ತೇಜನ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ.
