ನವದೆಹಲಿ: ಭಾರತದ ಕೃಷಿ ಕ್ಷೇತ್ರದಲ್ಲಿ ನೂತನ ಇತಿಹಾಸ ನಿರ್ಮಾಣವಾಗಿದ್ದು, ಪರಿಸರಸ್ನೇಹಿ ಪುನರುತ್ಪಾದಕ ಕೃಷಿ (Regenerative Agriculture) ಪದ್ಧತಿಗಳನ್ನು ಅಳವಡಿಸಿಕೊಂಡ ರೈತರಿಗೆ ದೇಶದಲ್ಲೇ ಮೊದಲ ಬಾರಿಗೆ ‘ಮಣ್ಣಿನ ಇಂಗಾಲ ಕ್ರೆಡಿಟ್’ (Soil Carbon Credits) ಹಣವನ್ನು ನೇರ ನಗದು ವರ್ಗಾವಣೆ (DBT) ಮೂಲಕ ವಿತರಿಸಲಾಗಿದೆ. ಸೆಪ್ಟೆಂಬರ್ 16 ಮತ್ತು 17ರಂದು ಪಂಜಾಬ್ ಹಾಗೂ ಹರಿಯಾಣದ 2,500ಕ್ಕೂ ಹೆಚ್ಚು ಸಣ್ಣ ಹಿಡುವಳಿ ರೈತರ ಖಾತೆಗಳಿಗೆ ಒಟ್ಟು ₹2.9 ಕೋಟಿಗೂ ಅಧಿಕ ಮೊತ್ತವನ್ನು ಜಮೆ ಮಾಡಲಾಗಿದೆ.
ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ತಾಂತ್ರಿಕ ಮಾರ್ಗದರ್ಶನದಲ್ಲಿ ‘ಗ್ರೋ ಇಂಡಿಗೊ’ ಸಂಸ್ಥೆಯು 2019ರಲ್ಲಿ ಆರಂಭಿಸಿದ ‘ಆದಿ’ (Aadi) ಕೃಷಿ ಕಾರ್ಬನ್ ಕಾರ್ಯಕ್ರಮದಡಿ ಈ ಸಾಧನೆ ಮಾಡಲಾಗಿದೆ. ಜಾಗತಿಕ ಮಾನದಂಡ ಸಂಸ್ಥೆಯಾದ ‘ವೆರ್ರಾ’ದ (Verra VM0042) ನಿಯಮಾವಳಿಗಳ ಪ್ರಕಾರ ಪರಿಶೀಲನೆ ನಡೆಸಿ ಈ ಕ್ರೆಡಿಟ್ಗಳನ್ನು ನೀಡಲಾಗಿದೆ. ಭತ್ತದ ನೇರ ಬಿತ್ತನೆ (DSR), ಕಡಿಮೆ ಉಳುಮೆ ಹಾಗೂ ಕೃಷಿ ತ್ಯಾಜ್ಯ (ಬೆಂಕಿ ಹಾಕದೆ) ನಿರ್ವಹಣೆ ಮೂಲಕ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಗಣನೀಯವಾಗಿ ತಗ್ಗಿಸಿದ ರೈತರಿಗೆ ಅವರ ಜಮೀನಿನ ಕ್ರೆಡಿಟ್ ಆಧಾರದ ಮೇಲೆ ತಲಾ ₹3,000 ದಿಂದ ₹15,000 ವರೆಗೆ ಪ್ರೋತ್ಸಾಹಧನ ದೊರೆತಿದೆ.
2019 ರಿಂದ 2022ರ ಅವಧಿಯಲ್ಲಿ ಈ ಯೋಜನೆಯಿಂದಾಗಿ ಅಂದಾಜು 45 ಶತಕೋಟಿ ಲೀಟರ್ ನೀರು ಉಳಿತಾಯವಾಗಿದ್ದು, 2 ಲಕ್ಷ ಟನ್ಗೂ ಅಧಿಕ ಕೃಷಿ ತ್ಯಾಜ್ಯ ಸುಡುವುದನ್ನು ಯಶಸ್ವಿಯಾಗಿ ತಡೆಯಲಾಗಿದೆ. ಪ್ರಸ್ತುತ ಈ ಕಾರ್ಯಕ್ರಮವು ದೇಶದ 7 ರಾಜ್ಯಗಳ 20 ಲಕ್ಷಕ್ಕೂ ಅಧಿಕ ಎಕರೆ ಪ್ರದೇಶ ಹಾಗೂ 1 ಲಕ್ಷಕ್ಕೂ ಹೆಚ್ಚು ರೈತರನ್ನು ಒಳಗೊಂಡಿದೆ.
