ನವದೆಹಲಿ: ದೇಶದಲ್ಲಿ ಪ್ರಿಸ್ಕ್ರಿಪ್ಷನ್ ಆಧಾರಿತ ಔಷಧಿಗಳ ಅಕ್ರಮ ಮಾರಾಟ ಮತ್ತು ದುರ್ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಹತ್ವದ ಹೆಜ್ಜೆ ಇಟ್ಟಿದೆ. ಸಗಟು ವ್ಯಾಪಾರಿಗಳನ್ನು ಹೊರತುಪಡಿಸಿ, ವೈದ್ಯರ ಚೀಟಿಯ ಮೇರೆಗೆ ಔಷಧಿಗಳನ್ನು ಮಾರಾಟ ಮಾಡುವ ಚಿಲ್ಲರೆ ಮೆಡಿಕಲ್ ಶಾಪ್ಗಳು ಹಾಗೂ ವೈದ್ಯಕೀಯ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ (CCTV) ಕ್ಯಾಮೆರಾ ಅಳವಡಿಸಲು ‘ಡ್ರಗ್ಸ್ ರೂಲ್ಸ್, 1945’ರ ನಿಯಮ 65ಕ್ಕೆ ತಿದ್ದುಪಡಿ ತರಲು ಕರಡು ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ.
ಈ ಕರಡು ತಿದ್ದುಪಡಿಯ ಪ್ರಕಾರ, ನೋಂದಾಯಿತ ವೈದ್ಯರ (RMP) ಶಿಫಾರಸಿನ ಮೇರೆಗೆ ಔಷಧಿ ವಿತರಿಸುವ ಅಂಗಡಿಗಳು ಸಿಸಿಟಿವಿ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಬೇಕು ಮತ್ತು ಅದರ ದೃಶ್ಯಾವಳಿಗಳನ್ನು (ಫೂಟೇಜ್) ಕನಿಷ್ಠ ಮೂರು ತಿಂಗಳ ಕಾಲ ಕಡ್ಡಾಯವಾಗಿ ಸಂರಕ್ಷಿಸಿಡಬೇಕಾಗುತ್ತದೆ. ಶೆಡ್ಯೂಲ್ H (ಸಾಮಾನ್ಯ ಪ್ರಿಸ್ಕ್ರಿಪ್ಷನ್ ಔಷಧಿಗಳು), ಶೆಡ್ಯೂಲ್ H1 (ಆಂಟಿಬಯಾಟಿಕ್ಸ್, ಕ್ಷಯ ರೋಗದ ಮಾತ್ರೆಗಳು, ಚಟಕ್ಕೆ ಕಾರಣವಾಗುವ ಔಷಧಗಳು) ಹಾಗೂ ಕಠಿಣ ನಿಯಂತ್ರಣದಲ್ಲಿರುವ ಶೆಡ್ಯೂಲ್ X (ನಾರ್ಕೋಟಿಕ್ ಮತ್ತು ಸೈಕೋಟ್ರೋಪಿಕ್ ಮಾದಕ ಔಷಧಗಳು) ವರ್ಗದ ಔಷಧಗಳ ಮಾರಾಟದ ಮೇಲೆ ನಿಗಾ ವಹಿಸಲು ಇದು ನೆರವಾಗಲಿದೆ.
ಡ್ರಗ್ಸ್ ಕನ್ಸಲ್ಟೇಟಿವ್ ಕಮಿಟಿ (DCC) ಹಾಗೂ ಡ್ರಗ್ಸ್ ಟೆಕ್ನಿಕಲ್ ಅಡ್ವೈಸರಿ ಬೋರ್ಡ್ (DTAB) ಶಿಫಾರಸುಗಳ ಆಧಾರದ ಮೇಲೆ ಈ ಕರಡು ಸಿದ್ಧಪಡಿಸಲಾಗಿದ್ದು, ಸಾರ್ವಜನಿಕರು ಹಾಗೂ ಪಾಲುದಾರರಿಂದ ಸಲಹೆ-ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಇದಕ್ಕೂ ಮುನ್ನ, ಜುಲೈ 2026ರಲ್ಲಿ ಶೇ. 12ಕ್ಕಿಂತ ಹೆಚ್ಚು ಆಲ್ಕೋಹಾಲ್ ಹೊಂದಿರುವ 30 ಮಿ.ಲೀ ಗಿಂತ ಹೆಚ್ಚಿನ ಪ್ರಮಾಣದ ಔಷಧೀಯ ಉತ್ಪನ್ನಗಳನ್ನು ಶೆಡ್ಯೂಲ್ H1ಗೆ ಸೇರಿಸಿ ಕಡ್ಡಾಯ ಪ್ರಿಸ್ಕ್ರಿಪ್ಷನ್ ಅಡಿಯಲ್ಲಿ ತರಲಾಗಿತ್ತು.
