ಗಾಂಧಿನಗರ: ಭಾರತದ ಪ್ರಮುಖ ಆರ್ಥಿಕ ಕೇಂದ್ರವಾದ ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ (GIFT City), ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಮೈಲಿಗಲ್ಲು ತಲುಪಿದೆ. ಪ್ರಕಟಗೊಂಡಿರುವ ಪ್ರತಿಷ್ಠಿತ ‘ಗ್ಲೋಬಲ್ ಫೈನಾನ್ಷಿಯಲ್ ಸೆಂಟರ್ಸ್ ಇಂಡೆಕ್ಸ್ 40’ (GFCI 40) ಪಟ್ಟಿಯಲ್ಲಿ ಗಿಫ್ಟ್ ಸಿಟಿ 9 ಸ್ಥಾನಗಳನ್ನು ಮೇಲಕ್ಕೇರಿಸಿ 37ನೇ ಜಾಗತಿಕ ಸ್ಥಾನವನ್ನು ಅಲಂಕರಿಸಿದೆ.
ಅಷ್ಟೇ ಅಲ್ಲದೆ, ಹಣಕಾಸು ತಂತ್ರಜ್ಞಾನ (FinTech) ವಿಭಾಗದಲ್ಲೂ ಮುನ್ನಡೆ ಸಾಧಿಸಿರುವ ಈ ಕೇಂದ್ರವು 26ನೇ ಸ್ಥಾನ ಪಡೆದುಕೊಂಡಿದೆ. ವಿಶ್ವದ ಒಟ್ಟು 139 ಹಣಕಾಸು ಕೇಂದ್ರಗಳನ್ನು 144 ಮಾನದಂಡಗಳು ಹಾಗೂ ಸಾವಿರಾರು ತಜ್ಞರ ಮೌಲ್ಯಮಾಪನದ ಆಧಾರದ ಮೇಲೆ ಪರಿಶೀಲಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಏಷ್ಯಾ-ಪೆಸಿಫಿಕ್ ವಲಯದ ಪ್ರಮುಖ ಟಾಪ್ 15 ಹಣಕಾಸು ಕೇಂದ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಕೇಂದ್ರ ಎಂಬ ಹೆಗ್ಗಳಿಕೆಗೆ ಗಿಫ್ಟ್ ಸಿಟಿ ಪಾತ್ರವಾಗಿದೆ. ಇದೇ ಪಟ್ಟಿಯಲ್ಲಿ ದೇಶದ ಆರ್ಥಿಕ ರಾಜಧಾನಿ ಮುಂಬೈ ಮೂರು ಸ್ಥಾನ ಮೇಲೇರಿ 49ನೇ ಶ್ರೇಯಾಂಕದಲ್ಲಿದೆ. ಮುಂಬರುವ 2-3 ವರ್ಷಗಳಲ್ಲಿ ಜಾಗತಿಕ ಆರ್ಥಿಕತೆಯಲ್ಲಿ ಮಹತ್ವ ಪಡೆಯಲಿರುವ ಪ್ರಮುಖ 15 ಕೇಂದ್ರಗಳಲ್ಲಿ ಗಿಫ್ಟ್ ಸಿಟಿಯೂ ಒಂದಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
