ಶ್ಲೋಕ – 03
ಸತ್ವಾನುರೂಪಾ ಸರ್ವಸ್ಯ ಶ್ರದ್ಧಾ ಭವತಿ ಭಾರತ ।
ಶ್ರದ್ಧಾಮಯೋSಯಂ ಪುರುಷೋ ಯೋ ಯಚ್ಛ್ರದ್ಧಃ ಸ ಏವ ಸಃ ॥೩॥
ಸತ್ವ ಅನುರೂಪಾ ಸರ್ವಸ್ಯ ಶ್ರದ್ಧಾ ಭವತಿ ಭಾರತ ।
ಶ್ರದ್ಧಾ ಮಯಃ ಅಯಮ್ ಪುರುಷಃ ಯಃ ಯತ್ ಶ್ರದ್ಧ ಸಃ ಏವ ಸಃ –ಭಾರತ, ಸ್ವಭಾವಕ್ಕೆ ತಕ್ಕಂತೆ ಎಲ್ಲರ ನಂಬಿಕೆಯೂ ಇರುತ್ತದೆ. ಈ ಜೀವ ನಂಬಿಕೆಯ ಸ್ವರೂಪವೆ. ಅವನ ನಂಬಿಕೆ ಎಂಥದೋ ಅವನು ಅಂಥವನು.
ಜೀವದ ಸ್ವರೂಪಕ್ಕೆ ಅನುಗುಣವಾಗಿಯೇ ಮೂಲ ಶ್ರದ್ಧೆ ಇರುವುದು. ಆದರೆ ಕೆಲವೊಮ್ಮೆ ಅದು ವ್ಯಕ್ತವಾಗದೇ ಇರಬಹುದು. ಇದು ವ್ಯಕ್ತವಾಗದೆ ಇದ್ದಾಗ, ಮನಸ್ಸಿನಲ್ಲಿ ಯಾವ ಬಾಹ್ಯ ಪ್ರಭಾವ ಶ್ರದ್ಧೆ ಇದೆಯೋ ಅದೇ ಅವನ ನಂಬಿಕೆಯಾಗುತ್ತದೆ. ಮನುಷ್ಯ ಶ್ರದ್ಧೆಯ ಕೈಗೊಂಬೆ. ಯಾರ ಸ್ವರೂಪ ಶ್ರದ್ಧೆ ಸಾತ್ವಿಕವೋ ಅವನು ಸಾತ್ವಿಕ; ಯಾರ ಸ್ವರೂಪ ಶ್ರದ್ಧೆ ರಾಜಸವೋ ಅವನು ರಾಜಸ; ಯಾರ ಸ್ವರೂಪ ಶ್ರದ್ಧೆ ತಾಮಸವೋ ಅವನು ತಾಮಸ. ಹಾಗಾಗಿ ಜೀವರಲ್ಲಿ ಮೂರು ವಿಧ: ಸಾತ್ವಿಕ ಶ್ರದ್ಧೆ ಇರುವ ಜೀವ-ಸಾತ್ವಿಕ ಜೀವ; ರಾಜಸ ಶ್ರದ್ಧೆ ಇರುವ ಜೀವ-ರಾಜಸ ಜೀವ; ತಾಮಸ ಶ್ರದ್ಧೆ ಇರುವ ಜೀವ-ತಾಮಸ ಜೀವ. ನಾವು ಧ್ಯಾನದಿಂದ ಮನಸ್ಸನ್ನು ಸ್ಥಗನಗೊಳಿಸಿ, ಉನ್ಮನಿ/ತುರಿಯ ಸ್ಥಿತಿಯನ್ನು ತಲುಪಿದಾಗ ಬಾಹ್ಯ ಶ್ರದ್ಧೆ ಕಣ್ಮರೆಯಾಗಿ ಕೇವಲ ಸ್ವರೂಪ ಶ್ರದ್ಧೆ ವ್ಯಕ್ತವಾಗುತ್ತದೆ.
