ಕೊರಟಗೆರೆ:- ತಾಲೂಕಿನ ಹೊಳವನಹಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ದುಷ್ಕರ್ಮಿಗಳು ಕಿಟಕಿ ಗಾಜುಗಳಿಗೆ ಕಲ್ಲು ತೂರಿ ಹಾನಿಗೊಳಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಶಾಲೆಯ ಎಂಟಕ್ಕೂ ಹೆಚ್ಚು ಕೊಠಡಿಗಳ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಗಾಜಿನ ಚೂರುಗಳು ತರಗತಿ ಕೊಠಡಿಗಳ ಒಳಭಾಗದಲ್ಲೇ ಬಿದ್ದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಕೊಠಡಿಗಳಲ್ಲಿ ಕೂರಿಸದೆ ಶಾಲಾ ಆವರಣದ ಹೊರಭಾಗದಲ್ಲಿ ಕೂರಿಸಿ ಪಾಠ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾನುವಾರ ರಾತ್ರಿ ಅಥವಾ ಮುಂಜಾನೆ ಕಿಡಿಗೇಡಿಗಳು ಶಾಲೆಯ ನೂತನ ಕಟ್ಟಡದ ಕಿಟಕಿ ಗಾಜುಗಳಿಗೆ ಕಲ್ಲು ತೂರಿದ್ದಾರೆ ಎನ್ನಲಾಗಿದ್ದು, ಘಟನೆಯ ಪರಿಣಾಮವಾಗಿ ಹಲವು ಕೊಠಡಿಗಳ ಕಿಟಕಿ ಗಾಜುಗಳು ಸಂಪೂರ್ಣವಾಗಿ ಒಡೆದು ಹೋಗಿವೆ. ಗಾಜಿನ ಚೂರುಗಳು ತರಗತಿ ಕೊಠಡಿಗಳ ನೆಲ ಹಾಗೂ ಪ್ರವೇಶ ದ್ವಾರಗಳ ಬಳಿ ಬಿದ್ದಿರುವುದರಿಂದ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕೊಠಡಿಗಳನ್ನು ಬಳಸದೆ ಶಿಕ್ಷಕರು ಹೊರಭಾಗದಲ್ಲಿಯೇ ತರಗತಿಗಳನ್ನು ನಡೆಸುತ್ತಿದ್ದಾರೆ.
ಘಟನೆಯಿಂದ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಕ್ಕಳಿಗೆ ಯಾವುದೇ ಅಪಾಯ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ 3, 4 ಮತ್ತು 5ನೇ ತರಗತಿಯ ವಿದ್ಯಾರ್ಥಿಗಳನ್ನು ತರಗತಿ ಕೊಠಡಿಗಳ ಒಳಗೆ ಬಿಡದೆ ಹೊರಭಾಗದಲ್ಲಿ ಕೂರಿಸಿ ಪಾಠ ಮಾಡಲಾಗುತ್ತಿದೆ.

*8ಕ್ಕೂ ಹೆಚ್ಚು ಕೊಠಡಿಗಳ ಗಾಜು ಪುಡಿಪುಡಿ..*
ಶಾಲೆಯ ಎಂಟಕ್ಕೂ ಹೆಚ್ಚು ಕೊಠಡಿಗಳ ಕಿಟಕಿ ಗಾಜುಗಳಿಗೆ ಕಲ್ಲು ತೂರಿರುವುದಾಗಿ ಶಾಲಾ ಸಿಬ್ಬಂದಿ ತಿಳಿಸಿದ್ದಾರೆ. ಕಿಟಕಿಗಳ ಗಾಜು ಒಡೆದು ಚೂರುಚೂರಾಗಿ ಕೊಠಡಿಗಳ ಒಳಗೆ ಬಿದ್ದಿರುವುದರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತರಗತಿ ಕೊಠಡಿಗಳಿಗೆ ತೆರಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಗಾಜಿನ ಚೂರುಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಕೊಠಡಿಗಳನ್ನು ಸುರಕ್ಷಿತಗೊಳಿಸಿದ ಬಳಿಕವಷ್ಟೇ ವಿದ್ಯಾರ್ಥಿಗಳನ್ನು ಒಳಗೆ ಕೂರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಸಿಬ್ಬಂದಿ ತಿಳಿಸಿದ್ದಾರೆ.
ಇದರೊಂದಿಗೆ ಶಾಲಾ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಿಗೂ ಕಲ್ಲು ತೂರಿ ಹಾನಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಶಾಲೆಯ ಭದ್ರತೆಗಾಗಿ ಸಿಸಿಟಿವಿ ಅಳವಡಿಸಲಾಗಿದ್ದರೂ ಅವು ಕಾರ್ಯನಿರ್ವಹಿಸದಿರುವುದು ಘಟನೆಯ ತನಿಖೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

*ಆರು ತಿಂಗಳಿಂದ ಸಿಸಿಟಿವಿ ಬಂದ್?*
ಶಾಲೆಯ ಸಿಸಿಟಿವಿ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದಲೂ ಆಕ್ಷೇಪ ವ್ಯಕ್ತವಾಗಿದೆ. ಶಾಲಾ ಆವರಣದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಸುಮಾರು ಆರು ತಿಂಗಳಿನಿಂದ ಸಕ್ರಿಯಗೊಳಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿದ್ದರೆ ಕಲ್ಲುತೂರಾಟ ನಡೆಸಿದವರನ್ನು ಪತ್ತೆಹಚ್ಚಲು ಮಹತ್ವದ ಸುಳಿವು ದೊರೆಯುತ್ತಿತ್ತು. ಆದರೆ ಸಿಸಿಟಿವಿ ವ್ಯವಸ್ಥೆ ಸಕ್ರಿಯವಾಗಿರದ ಕಾರಣ ತನಿಖೆಗೆ ಅಡ್ಡಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯಶಿಕ್ಷಕ ರಾಜಣ್ಣ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಫಯಾಜ್ ಬೇಗಂ ತಿಳಿಸಿದ್ದಾರೆ.

*ಬಿಇಒ ವಿರುದ್ಧ ಸಾರ್ವಜನಿಕರ ಅಸಮಾಧಾನ*
ಘಟನೆಯ ಮಾಹಿತಿ ತಿಳಿದಿದ್ದರೂ ಶಿಕ್ಷಣ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂಬ ಆರೋಪವೂ ಸಾರ್ವಜನಿಕರಿಂದ ಕೇಳಿಬಂದಿದೆ.
ಶಾಲೆಯ ಮಕ್ಕಳ ಸುರಕ್ಷತೆ ಹಾಗೂ ಶಾಲಾ ಕಟ್ಟಡದ ಭದ್ರತೆ ವಿಚಾರದಲ್ಲಿ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕಿತ್ತು ಎಂದು ಎಸ್ಡಿಎಂಸಿ ಸದಸ್ಯರು ಹಾಗೂ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಲೆಯಲ್ಲಿ ಕಿಟಕಿ ಗಾಜುಗಳು ಒಡೆದು ಬಿದ್ದಿರುವ ಪರಿಸ್ಥಿತಿಯಲ್ಲಿಯೇ ಮಕ್ಕಳ ಶೈಕ್ಷಣಿಕ ಚಟುವಟಿಕೆ ಮುಂದುವರಿಯುತ್ತಿರುವುದು ಆತಂಕಕಾರಿ ಬೆಳವಣಿಗೆ.
ಮೊದಲು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಿ, ಹಾನಿಗೊಳಗಾದ ಗಾಜುಗಳನ್ನು ತೆರವುಗೊಳಿಸಿ, ಶಾಲಾ ಕೊಠಡಿಗಳನ್ನು ಸುರಕ್ಷಿತಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
*ಮುಖ್ಯಶಿಕ್ಷಕರ ಕಚೇರಿಯಲ್ಲಿ ವಾಮಾಚಾರ ವಸ್ತು ಪತ್ತೆ*
ಕಲ್ಲುತೂರಾಟದ ಘಟನೆ ಬೆನ್ನಲ್ಲೇ ಶಾಲೆಯ ಮುಖ್ಯಶಿಕ್ಷಕರ ಕಚೇರಿಯಲ್ಲಿ ಕೋಳಿ ಮೊಟ್ಟೆ, ಅರಿಶಿನ-ಕುಂಕುಮ ಹಾಗೂ ಅಕ್ಷತೆ ಕಾಳುಗಳಂತಹ ಕೆಲವು ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿರುವುದು ಮತ್ತೊಂದು ಚರ್ಚೆಗೆ ಕಾರಣವಾಗಿದೆ.
ಮುಖ್ಯಶಿಕ್ಷಕರ ಕಚೇರಿಯಲ್ಲಿರುವ ದೇವರ ಫೋಟೋಗಳು ಹಾಗೂ ಗಣಪತಿ ಪ್ರತಿಷ್ಠಾಪನೆಯ ಮುಂಭಾಗದಲ್ಲಿ ಕೋಳಿ ಮೊಟ್ಟೆ ಹೊಡೆದು ಅರಿಶಿನ ಕುಂಕುಮ ಸೇರಿದಂತೆ ಅಕ್ಷತೆ ಕಾಳುಗಳನ್ನು ಇಡುವ ಮೂಲಕ ವಾಮಾಚಾರ ಮಾಡಿರುವ ದೃಶ್ಯ ಕಂಡುಬಂದಿದೆ.ಆದರೆ ಈ ವಸ್ತುಗಳನ್ನು ಯಾರು ಅಲ್ಲಿ ಇರಿಸಿದ್ದಾರೆ, ಯಾವ ಉದ್ದೇಶದಿಂದ ಇರಿಸಲಾಗಿದೆ ಅಥವಾ ಅವು ವಾಮಾಚಾರಕ್ಕೆ ಸಂಬಂಧಿಸಿವೆಯೇ ಎಂಬುದನ್ನು ದೃಢಪಡಿಸುವ ಯಾವುದೇ ಅಧಿಕೃತ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಹೀಗಾಗಿ ವದಂತಿಗಳಿಗೆ ಅವಕಾಶ ನೀಡದೆ, ಈ ಕುರಿತು ಪೊಲೀಸ್ ತನಿಖೆ ನಡೆಸಿ ವಾಸ್ತವಾಂಶವನ್ನು ಬಹಿರಂಗಪಡಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

*ಪೊಲೀಸರಿಗೆ ದೂರು ನೀಡಲು ಸಿದ್ಧತೆ*
ಶಾಲೆಯ ಕಿಟಕಿ ಗಾಜುಗಳಿಗೆ ಕಲ್ಲು ತೂರಿ ಹಾನಿಗೊಳಿಸಿರುವುದು, ಸಿಸಿಟಿವಿ ಕ್ಯಾಮೆರಾಗಳಿಗೆ ಹಾನಿಯಾಗಿರುವುದು ಹಾಗೂ ಶಾಲೆಯೊಳಗೆ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಘಟನೆಯ ಕುರಿತು ಪೊಲೀಸರಿಗೆ ದೂರು ನೀಡಲು ಶಾಲಾ ಆಡಳಿತ ಹಾಗೂ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ.
*ಕಲ್ಲುತೂರಾಟ ನಡೆಸಿದವರು ಯಾರು* ?
ಶಾಲೆಯ ಆವರಣಕ್ಕೆ ಯಾವ ಮಾರ್ಗದಿಂದ ಪ್ರವೇಶಿಸಿದ್ದಾರೆ? ಘಟನೆ ನಡೆದ ಸಮಯದಲ್ಲಿ ಶಾಲೆಯ ಭದ್ರತಾ ವ್ಯವಸ್ಥೆ ಹೇಗಿತ್ತು? ಸಿಸಿಟಿವಿ ಕ್ಯಾಮೆರಾಗಳು ಏಕೆ ಕಾರ್ಯನಿರ್ವಹಿಸುತ್ತಿರಲಿಲ್ಲ? ಹಾಗೂ ಮುಖ್ಯಶಿಕ್ಷಕರ ಕಚೇರಿಯಲ್ಲಿ ಅನುಮಾನಾಸ್ಪದ ವಸ್ತುಗಳನ್ನು ಇರಿಸಿದವರು ಯಾರು? ಎಂಬ ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ದೊರೆಯಬೇಕಿದೆ.
ಶಿಕ್ಷಕರ ಅಸಮಾಧಾನ ಶಾಲಾ ಕೊಠಡಿಗಳ ಕಿಟಕಿ ಗಾಜುಗಳು ಒಡೆದು ಗಾಜಿನ ಚೂರುಗಳು ಒಳಗೆ ಬಿದ್ದಿರುವುದರಿಂದ ಮಕ್ಕಳನ್ನು ತರಗತಿ ಕೊಠಡಿಗಳ ಒಳಗೆ ಕೂರಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಹೊರಭಾಗದಲ್ಲಿಯೇ ತರಗತಿ ನಡೆಸುವಂತಾಗಿದೆ ಎಂದು ಶಿಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲು ಆಗ್ರಹ
ಒಂದೇ ಶಾಲೆಯಲ್ಲಿ ಕಿಟಕಿ ಗಾಜುಗಳಿಗೆ ಕಲ್ಲುತೂರಾಟ, ಸಿಸಿಟಿವಿ ಕ್ಯಾಮೆರಾಗಳಿಗೆ ಹಾನಿ ಹಾಗೂ ನಂತರ ಮುಖ್ಯಶಿಕ್ಷಕರ ಕಚೇರಿಯಲ್ಲಿ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ ಘಟನೆಯ ಸಮಗ್ರ ತನಿಖೆ ನಡೆಸಬೇಕು. ಶಾಲಾ ಕಟ್ಟಡದ ಭದ್ರತೆ, ಸಿಸಿಟಿವಿ ವ್ಯವಸ್ಥೆ, ಶಾಲಾ ಆವರಣಕ್ಕೆ ಹೊರಗಿನವರ ಪ್ರವೇಶ ಹಾಗೂ ಅನುಮಾನಾಸ್ಪದ ವಸ್ತುಗಳ ಪತ್ತೆ ಸೇರಿದಂತೆ ಎಲ್ಲ ಅಂಶಗಳನ್ನೂ ಪರಿಶೀಲಿಸಬೇಕು ಎಂದು ಎಸ್ಡಿಎಂಸಿ ಸದಸ್ಯರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಲ್ಲದೆ ಒಡೆದ ಕಿಟಕಿ ಗಾಜುಗಳನ್ನು ತಕ್ಷಣ ತೆರವುಗೊಳಿಸಿ, ಅಗತ್ಯ ದುರಸ್ತಿ ಕಾಮಗಾರಿ ಕೈಗೊಂಡು, ಸಿಸಿಟಿವಿ ವ್ಯವಸ್ಥೆಯನ್ನು ಸಮರ್ಪಕವಾಗಿ ಸಕ್ರಿಯಗೊಳಿಸಬೇಕು. ವಿದ್ಯಾರ್ಥಿಗಳು ಭಯಮುಕ್ತ ವಾತಾವರಣದಲ್ಲಿ ವಿದ್ಯಾಭ್ಯಾಸ ಮುಂದುವರಿಸುವಂತೆ ಶಾಲೆಯ ಭದ್ರತೆಯನ್ನು ಬಿಗಿಗೊಳಿಸಬೇಕು ಎಂಬ ಆಗ್ರಹವೂ ವ್ಯಕ್ತವಾಗಿದೆ.
ಮುಖ್ಯಶಿಕ್ಷಕರ ಹೇಳಿಕೆ*
ಗಾಜಿನ ಚೂರುಗಳಿಂದ ಮಕ್ಕಳಿಗೆ ಅಪಾಯವಾಗದಂತೆ ಹೊರಗಡೆ ತರಗತಿ ನಡೆಸುತ್ತಿದ್ದೇವೆ
ಭಾನುವಾರ ಯಾರೋ ದುಷ್ಕರ್ಮಿಗಳು ಶಾಲೆಯ ಕಿಟಕಿ ಗಾಜುಗಳಿಗೆ ಕಲ್ಲು ತೂರಿದ್ದು, ಎಂಟರಿಂದ ಹತ್ತು ಕೊಠಡಿಗಳ ಕಿಟಕಿ ಗಾಜುಗಳು ಹಾನಿಗೊಳಗಾಗಿವೆ. ಗಾಜಿನ ಚೂರುಗಳು ಕೊಠಡಿಗಳ ಒಳಭಾಗದಲ್ಲಿ ಬಿದ್ದಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಶಾಲಾ ಆವರಣದಲ್ಲಿಯೇ ವಿದ್ಯಾರ್ಥಿಗಳಿಗೆ ಪಾಠ ನಡೆಸಲಾಗುತ್ತಿದೆ.
ಮೇಲಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಕೊಠಡಿಗಳಲ್ಲಿರುವ ಗಾಜಿನ ಚೂರುಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಕೊಠಡಿಗಳನ್ನು ಸುರಕ್ಷಿತಗೊಳಿಸಿದ ಬಳಿಕ ವಿದ್ಯಾರ್ಥಿಗಳನ್ನು ಒಳಗೆ ಕೂರಿಸಲಾಗುವುದು. ಘಟನೆಯಿಂದ ನಮಗೂ ಬೇಸರವಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು.
– ರಾಜಣ್ಣ, ಮುಖ್ಯಶಿಕ್ಷಕರು, ಕರ್ನಾಟಕ ಪಬ್ಲಿಕ್ ಸ್ಕೂಲ್, ಹೊಳವನಹಳ್ಳಿ
ಶಿಕ್ಷಕರ ಹೇಳಿಕೆ
ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿದೆ; ಕೊಠಡಿಗಳ ಹೊರಗಡೆಯೇ ತರಗತಿ..
ಶಾಲೆಯ ಎಂಟಕ್ಕೂ ಹೆಚ್ಚು ಕೊಠಡಿಗಳ ಕಿಟಕಿ ಗಾಜುಗಳು ಒಡೆದು ಗಾಜಿನ ಚೂರುಗಳು ಒಳಗೆ ಬಿದ್ದಿವೆ. ಈ ಕಾರಣದಿಂದ ವಿದ್ಯಾರ್ಥಿಗಳನ್ನು ತರಗತಿ ಕೊಠಡಿಗಳ ಒಳಗೆ ಕೂರಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕೊಠಡಿಗಳ ಹೊರಭಾಗದಲ್ಲಿಯೇ ತರಗತಿಗಳನ್ನು ನಡೆಸಲಾಗುತ್ತಿದೆ.
ಸಿಸಿಟಿವಿ ಕ್ಯಾಮೆರಾಗಳಿಗೂ ಹಾನಿಯಾಗಿರುವುದು ಆತಂಕ ಮೂಡಿಸಿದೆ. ಈ ಬೆಳವಣಿಗೆಯಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಬೇಸರ ಮತ್ತು ಆತಂಕ ಉಂಟಾಗಿದೆ. ಶಾಲಾ ಆವರಣವನ್ನು ಸುರಕ್ಷಿತಗೊಳಿಸಿ, ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು.
– ಮಂಜುಳಾ, ಆಂಗ್ಲ ಶಿಕ್ಷಕಿ, ಸರ್ಕಾರಿ ಪಬ್ಲಿಕ್ ಸ್ಕೂಲ್, ಹೊಳವನಹಳ್ಳಿ
ಕ್ಷೇತ್ರ ಶಿಕ್ಷಣಾಧಿಕಾರಿಗಳ ಸ್ಪಷ್ಟನೆ..ಸಿಸಿಟಿವಿ ಆರು ತಿಂಗಳಿಂದ ಸಕ್ರಿಯವಾಗಿರದ ಬಗ್ಗೆ ಮುಖ್ಯಶಿಕ್ಷಕರಿಗೆ ನೋಟಿಸ್
ಹೊಳವನಹಳ್ಳಿ ಪಬ್ಲಿಕ್ ಶಾಲೆಯಲ್ಲಿ ಹತ್ತಕ್ಕೂ ಹೆಚ್ಚು ಕೊಠಡಿಗಳ ಕಿಟಕಿ ಗಾಜುಗಳಿಗೆ ಕಲ್ಲು ತೂರಿ ಹಾನಿಗೊಳಿಸಿರುವ ಮಾಹಿತಿ ಲಭ್ಯವಾಗಿದೆ. ಸಿಸಿಟಿವಿ ಕ್ಯಾಮೆರಾಗಳಿಗೂ ಹಾನಿಯಾಗಿರುವುದಾಗಿ ತಿಳಿದುಬಂದಿದೆ. ಗಾಜಿನ ಚೂರುಗಳು ಕೊಠಡಿಗಳ ಒಳಗೆ ಬಿದ್ದಿರುವುದರಿಂದ ವಿದ್ಯಾರ್ಥಿಗಳನ್ನು ತರಗತಿ ಕೊಠಡಿಗಳ ಒಳಗೆ ಕೂರಿಸದೆ ಹೊರಭಾಗದಲ್ಲಿ ಪಾಠ ನಡೆಸಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು. ತನಿಖೆಯ ನಂತರ ಸತ್ಯಾಸತ್ಯತೆ ಹೊರಬರಲಿದೆ.
ಶಾಲಾ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದರೂ, ಮುಖ್ಯಶಿಕ್ಷಕ ರಾಜಣ್ಣ ಅವರು ಸುಮಾರು ಆರು ತಿಂಗಳಿಂದ ಅವುಗಳನ್ನು ಸಕ್ರಿಯಗೊಳಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಗಮನಕ್ಕೆ ಬಂದಿದೆ. ಸಿಸಿಟಿವಿ ಕಾರ್ಯನಿರ್ವಹಿಸುತ್ತಿದ್ದರೆ ಆರೋಪಿಗಳನ್ನು ಪತ್ತೆಹಚ್ಚಲು ಅನುಕೂಲವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ.
– ಫಯಾಜ್ ಬೇಗಂ, ಕ್ಷೇತ್ರ ಶಿಕ್ಷಣಾಧಿಕಾರಿ, ಕೊರಟಗೆರೆ
– ಶ್ರೀನಿವಾಸ್ ಕೊರಟಗೆರೆ.
