ಶ್ಲೋಕ – 04
ಯಜಂತೇ ಸಾತ್ವಿಕಾ ದೇವಾನ್ ಯಕ್ಷರಕ್ಷಾಂಸಿ ರಾಜಸಾಃ ।
ಪ್ರೇತಾನ್ ಭೂತಗಣಾಂಶ್ಚಾನ್ಯೇ ಯಜಂತೇ ತಾಮಸಾ ಜನಾಃ ॥೪॥
ಯಜಂತೇ ಸಾತ್ವಿಕಾ ದೇವಾನ್ ಯಕ್ಷರಕ್ಷಾಂಸಿ ರಾಜಸಾಃ ।
ಪ್ರೇತಾನ್ ಭೂತಗಣಾನ್ ಚ ಅನ್ಯೇ ಯಜಂತೇ ತಾಮಸಾಃ ಜನಾಃ –ಸಾತ್ವಿಕರ ಪೂಜೆ ದೇವತೆಗಳಿಗೆ ಸಲ್ಲುತ್ತದೆ, ರಾಜಸರದು ಯಕ್ಷ-ರಾಕ್ಷಸರಿಗೆ. ತಾಮಸರ ಪೂಜೆಯೋ ಪ್ರೇತಗಳಿಗೆ, ಭೂತಗಣಗಳಿಗೆ ಸಲ್ಲುತ್ತದೆ.
ಈ ಶ್ಲೋಕವನ್ನು ಮೇಲ್ನೋಟದಲ್ಲಿ ನೋಡಿದರೆ ಏನೂ ಅರ್ಥವಾಗುವುದಿಲ್ಲ. ಮೇಲ್ನೋಟಕ್ಕೆ “ಸಾತ್ವಿಕರು ದೇವತೆಗಳನ್ನು ಪೂಜೆ ಮಾಡುತ್ತಾರೆ; ರಾಜಸರು ಯಕ್ಷ-ರಾಕ್ಷಸರನ್ನು ಮತ್ತು ತಾಮಸರು ಭೂತ-ಪ್ರೇತಗಳನ್ನು ಪೂಜಿಸುತ್ತಾರೆ” ಎಂದು ಹೇಳಿದಂತೆ ಕಾಣಿಸುತ್ತದೆ. ಆದರೆ ಇಲ್ಲಿ ಅಡಗಿರುವ ಮೂಲ ಅರ್ಥವೇ ಬೇರೆ. ನಮಗೆ ತಿಳಿದಂತೆ ಸಾತ್ವಿಕರಾಗಲಿ, ರಾಜಸರಾಗಲಿ, ತಾಮಸರಾಗಲಿ-ಅವರು ಪೂಜೆ ಮಾಡುವುದು ಭಗವಂತನನ್ನು ಅಥವಾ ದೇವತೆಗಳನ್ನು. ವಾಮಾಚಾರ(Witchcraft) ಮಾಡುವವರನ್ನು ಬಿಟ್ಟರೆ ಇನ್ಯಾರೂ ಪ್ರೇತ-ಪಿಶಾಚಿ-ರಾಕ್ಷಸರನ್ನು ಪೂಜಿಸುವುದಿಲ್ಲ. ಆದ್ದರಿಂದ ಇಲ್ಲಿ ಹೇಳಿರುವ ಮೂಲ ಸಂದೇಶ ಅರ್ಥವಾಗಬೇಕಾದರೆ ನಾವು ಈ ಶ್ಲೋಕವನ್ನು ಆಳವಾಗಿ ವಿಶ್ಲೇಷಿಸಬೇಕು. ಇಲ್ಲಿ ‘ದೇವಾನ್’ ಎಂದರೆ: ಭಗವಂತನ ಅನೇಕ ರೂಪಗಳು ಮತ್ತು ಭಗವಂತನ ಪರಿವಾರ ದೇವತೆಗಳು’ ಎಂದರ್ಥ. ‘ಯಜಂತೇ ಸಾತ್ವಿಕಾ ದೇವಾನ್’ ಎಂದರೆ-ಸಾತ್ವಿಕರು ಭಗವಂತನ ಅನುಸಂಧಾನದಿಂದ ಮಾಡುವ ಪೂಜೆ ದೇವತೆಗಳನ್ನು ಸೇರುತ್ತದೆ ಎಂದರ್ಥ. ಅದೇ ರೀತಿ “ಯಕ್ಷರಕ್ಷಾಂಸಿ ರಾಜಸಾಃ” ಎಂದರೆ- ರಾಜಸರು ಮಾಡುವ ಪೂಜೆ ಯಕ್ಷ-ರಾಕ್ಷಸರನ್ನು ಸೇರುತ್ತದೆ ಎಂದರ್ಥ. ರಾಜಸರು ಸಾಮಾನ್ಯವಾಗಿ ಭಗವಂತನ ಪಾರಮ್ಯದ ಎಚ್ಚರವಿಲ್ಲದೆ, ಭಯದಿಂದ, ದೇವತೆಗಳು ನಮಗೆ ತೊಂದರೆ ಕೊಡದಿರಲಿ ಎನ್ನುವ ಹರಕೆ ಸಂದಾಯ ಭಾವನೆಯಿಂದ ಪೂಜೆ ಮಾಡುತ್ತಾರೆ. ಈ ರೀತಿ ಪೂಜೆ ಮಾಡಿದಾಗ, ನಾವು ಭಗವಂತನಿಗೆಂದು ಸಲ್ಲಿಸುವ ಪೂಜೆಯನ್ನು ದೇವತೆಗಳ ಹೆಸರಿನ ಯಕ್ಷ-ರಾಕ್ಷಸರು ಬಂದು ಸ್ವೀಕರಿಸುತ್ತಾರೆ. ಇನ್ನು ಮೂರನೆಯ ವರ್ಗ ತಾಮಸ. ಇವರು ಪೂಜೆ ಮಾಡುವುದು ತಮ್ಮ ಅಂತಸ್ತನ್ನು ತೋರಿಸಿಕೊಳ್ಳುವುದಕ್ಕಾಗಿ. ಉದಾಹರಣೆಗೆ ದುರ್ಯೋಧನ ಪಾಂಡವರು ಮಾಡಿದ ಅಶ್ವಮೇಧ ಯಾಗವನ್ನು ಮೀರಿಸುವ ಸಲುವಾಗಿ ಪೌಂಡ್ರಿಕ ಯಾಗ ಮಾಡಿಸಿದಂತೆ. ಹೀಗೆ ದುರುದ್ದೇಶದಿಂದ ತಾಮಸರು ಮಾಡುವ ಪೂಜೆಯನ್ನು ಬಂದು ಸ್ವೀಕರಿಸುವವರು ದೇವತೆಗಳ ಹೆಸರಿನ ಭೂತ-ಪ್ರೇತಗಳು.
ಪೂಜೆಯಲ್ಲಿ ಕೇವಲ ಶ್ರದ್ಧೆ ಮುಖ್ಯವಲ್ಲ ಬದಲಿಗೆ ಅದು ಎಂಥಹ ಶ್ರದ್ಧೆ ಎನ್ನುವುದು ಮುಖ್ಯ. ಶಾಸ್ತ್ರ ಗೊತ್ತಿಲ್ಲದಿದ್ದರೂ ಕೂಡ, ಸಾತ್ವಿಕ ಶ್ರದ್ಧೆಯಿಂದ: “ಭಗವಂತ, ನನಗೆ ಏನೂ ಗೊತ್ತಿಲ್ಲ, ನಾನು ಭಕ್ತಿಯಿಂದ ನಿನ್ನನ್ನು ಆರಾಧನೆ ಮಾಡುತ್ತೇನೆ, ನನ್ನ ತಪ್ಪನ್ನು ಕ್ಷಮಿಸು” ಎಂದು ಶರಣಾಗತಿಯಿಂದ ಬೇಡಿದರೆ ಆ ಪೂಜೆಯನ್ನು ಸ್ವತಃ ಭಗವಂತನೇ ಬಂದು ಸ್ವೀಕಾರ ಮಾಡುತ್ತಾನೆ. ಆದರೆ ಸ್ವಾರ್ಥ, ಅಹಂಕಾರ, ಡಂಭದಿಂದ ಮಾಡುವ ರಾಜಸ ಅಥವಾ ತಾಮಸ ಪೂಜೆಯನ್ನು ಭಗವಂತನಾಗಲಿ, ಅವನ ಪರಿವಾರ ದೇವತೆಗಳಾಗಲಿ ಸ್ವೀಕರಿಸುವುದಿಲ್ಲ.
ನಮ್ಮ ಕರ್ಮ ಕಾಮರಹಿತ(ನಿಷ್ಕಾಮ)ವಾಗಿರಬೇಕು. ಇಲ್ಲಿ ಕಾಮ ಅಂದರೆ ಕೆಟ್ಟಬಯಕೆ. ಬಯಕೆಯಲ್ಲಿ ಎಂದೂ ಸ್ವಾರ್ಥವಿರಕೂಡದು. ನಾವು ನನಗೆ ಮಾತ್ರ ಒಳ್ಳೆಯದಾಗಲಿ ಎನ್ನುವ ಸಂಕುಚಿತ ಭಾವವನ್ನು ಬಿಟ್ಟುಬಿಡಬೇಕು. ಪೂಜೆ ಪುನಸ್ಕಾರ ಮಾಡುವಾಗ ಯಾವುದೋ ಸಂಕುಚಿತ ಉದ್ದೇಶವಿಟ್ಟು ನಾವು ಪೂಜೆ ಮಾಡಬಾರದು. ಉದಾಹರಣೆಗೆ: “ನನ್ನ ವ್ಯವಹಾರದಲ್ಲಿ ಏಳಿಗೆ ಆಗಲಿ ಎಂದು ಯಜ್ಞ ಮಾಡುವುದು; ಮಗಳಿಗೆ ಉತ್ತಮ ವರ ಸಿಗಲಿ ಎನ್ನುವ ಫಲಾಪೇಕ್ಷೆಯಿಂದ ಪೂಜೆ ಮಾಡುವುದು ಇತ್ಯಾದಿ. ನಾವು ದೇವರಲ್ಲಿ ಈ ರೀತಿ ನಮ್ಮ ಕಾಮನೆಗಳ ಪಟ್ಟಿ ಕೊಡಬಾರದು. ಯಾವುದು ಆಗಬೇಕು ಎನ್ನುವುದು ದೇವರಿಗೆ ಗೊತ್ತಿದೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎನ್ನುವುದು ಅವನಿಗೆ ಮಾತ್ರ ಗೊತ್ತಿರುವುದು. ಅದನ್ನು ಅವನು ಕೊಟ್ಟೇ ಕೊಡುತ್ತಾನೆ. ಹೀಗಿರುವಾಗ ನಾವು ನಮ್ಮ ಇಂಥಹ ಸಂಕುಚಿತ ಕಾಮದ ಪಟ್ಟಿಯನ್ನು ಹಿಡಿದುಕೊಂಡು ಕರ್ಮ ಮಾಡಿದಾಗ ಆಗುವ ದುರಂತ ಘೋರ. ನಾವು ದೇವರಲ್ಲಿ ಯಾವುದೋ ಬಯಕೆಯನ್ನಿಟ್ಟು ಪೂಜೆ ಮಾಡಿಸುತ್ತೇವೆ. ಆ ಪೂಜೆಗಾಗಿ ಹಣ ವೆಚ್ಚ ಮಾಡಿರುತ್ತೇವೆ. ಆದರೆ ಆ ಬಯಕೆ ಈಡೇರುವುದಿಲ್ಲ. ಆಗ ನಮಗೆ ದೇವರ ಮೇಲೆ ದ್ವೇಷ, ಹಣ ವ್ಯರ್ಥವಾಯಿತು ಎನ್ನುವ ಅಸಮಾಧಾನ. ಹೀಗಾದಾಗ ನಮ್ಮ ಪೂಜೆ ವ್ಯಾಪಾರವಾಗುತ್ತದೆ ಮತ್ತು ಅದು ಭೂತ-ಪ್ರೇತಗಳನ್ನು ಸೇರುತ್ತದೆ. ದೇವರ ಪೂಜೆ ವ್ಯಾಪಾರವಲ್ಲ.
