ಶಿವಮೊಗ್ಗ, ಸೆ.22: ರಾಜ್ಯದಲ್ಲಿ ಸೆ.24ರಿಂದ 26ರವರೆಗೆ ನಡೆಯಲಿರುವ ಗಣೇಶೋತ್ಸವದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಿದೆ. ರಾಜ್ಯದ ವಿವಿಧ ಪೊಲೀಸ್ ಘಟಕಗಳಿಂದ ಒಟ್ಟು 1,653 ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದ ಸೆ.16ರಂದು ಆದೇಶ ಹೊರಡಿಸಲಾಗಿದ್ದು, ಸೆ.23ರ ರಾತ್ರಿ 8 ಗಂಟೆಯೊಳಗೆ ನಿಯೋಜಿತ ಅಧಿಕಾರಿ ಹಾಗೂ ಸಿಬ್ಬಂದಿ ತಮ್ಮ ಕರ್ತವ್ಯ ಸ್ಥಳದಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಬಂದೋಬಸ್ತ್ಗಾಗಿ 2 ಎಸ್ಪಿ/ಹೆಚ್ಚುವರಿ ಎಸ್ಪಿ, 8 ಡಿವೈಎಸ್ಪಿ, 21 ಪಿಐ/ಆರ್ಪಿಐ, 222 ಪಿಎಸ್ಐ/ಆರ್ಎಸ್ಐ/ಎಎಸ್ಐ ಹಾಗೂ 1,400 ಹೆಡ್ ಕಾನ್ಸ್ಟೆಬಲ್, ಪೊಲೀಸ್ ಕಾನ್ಸ್ಟೆಬಲ್, ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 1,653 ಮಂದಿಯನ್ನು ನಿಯೋಜಿಸಲಾಗಿದೆ.
ಡಿಜಿಪಿ ತರಬೇತಿ, ಕೆಪಿಎ ಮೈಸೂರು, ಐಜಿಪಿ ಬಳ್ಳಾರಿ, ಐಜಿಪಿ ಈಶಾನ್ಯ ವಲಯ ಹಾಗೂ ಐಜಿಪಿ ದಕ್ಷಿಣ ವಲಯ ಸೇರಿದಂತೆ ವಿವಿಧ ಘಟಕಗಳಿಂದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ.
ಅಲ್ಲದೆ, ಹಿಂದಿನ ಗಣೇಶೋತ್ಸವ ಸಂದರ್ಭಗಳಲ್ಲಿ ಗಲಭೆ ಅಥವಾ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಘಟನೆಗಳಲ್ಲಿ ಭಾಗಿಯಾಗಿದ್ದವರ ಮೇಲೂ ನಿಗಾ ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
