ಬೆಂಗಳೂರು, ಸೆಪ್ಟೆಂಬರ್ 22, 2026: ಎಂ5 ಮಹೇಂದ್ರ ಗ್ರೂಪ್ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ವಿಭಾಗವಾದ ಗೌರಮ್ಮ ತಿಮ್ಮಾರೆಡ್ಡಿ ಫೌಂಡೇಶನ್ (ಜಿಟಿಎಫ್) ವತಿಯಿಂದ, ತನ್ನ ಪ್ರಮುಖ ಶೈಕ್ಷಣಿಕ ಯೋಜನೆಯ ಆಗಿರುವ ‘ನಮ್ಮ ಶಾಲೆ, ನಮ್ಮ ಕೊಡುಗೆ’ ಅಡಿಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಬೊಮ್ಮಸಂದ್ರದಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ 982 ಜತೆ ಶಾಲಾ ಸಮವಸ್ತ್ರಗಳನ್ನು ವಿತರಿಸಿತು.
ಬೊಮ್ಮಸಂದ್ರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯೊಂದಿಗೆ ಫೌಂಡೇಶನ್ ಹೊಂದಿರುವ ಸುದೀರ್ಘ ಬಾಂಧವ್ಯದ ಅಂಗವಾಗಿ ಪ್ರತಿವರ್ಷವೂ ಈ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯುತ್ತಾ ಬಂದಿದೆ. ಈ ಶಾಲೆಯನ್ನು ಫೌಂಡೇಶನ್ 2017 ರಿಂದಲೂ ದತ್ತು ತೆಗೆದುಕೊಂಡು ನಿರಂತರವಾಗಿ ಬೆಂಬಲಿಸುತ್ತಾ ಮತ್ತು ನಿರ್ವಹಿಸುತ್ತಾ ಬಂದಿದೆ. ಈ ನಿರಂತರ ಸಹಯೋಗದ ಮೂಲಕ ಶಾಲೆಯ ಶೈಕ್ಷಣಿಕ ವಾತಾವರಣವನ್ನು ಸದೃಢಗೊಳಿಸುವುದು ಹಾಗೂ ವಿದ್ಯಾರ್ಥಿಗಳು ಆತ್ಮಗೌರವ ಮತ್ತು ಆತ್ಮವಿಶ್ವಾಸದಿಂದ ಶಿಕ್ಷಣವನ್ನು ಮುಂದುವರಿಸಲು ಅಗತ್ಯವಿರುವ ಮೂಲಸೌಕರ್ಯ ಸಂಪನ್ಮೂಲಗಳನ್ನು ಒದಗಿಸುವುದು ಫೌಂಡೇಶನ್ನ ಮುಖ್ಯ ಧ್ಯೇಯವಾಗಿದೆ.
ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಸಮವಸ್ತ್ರ ವಿತರಣಾ ಸಮಾರಂಭದಲ್ಲಿ ಆನೇಕಲ್ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಶ್ರೀ ಜಿ. ಗುರುಮೂರ್ತಿ, ನಿವೃತ್ತ ಐಎಎಸ್ ಅಧಿಕಾರಿ ಶ್ರೀ ರಾಮಸ್ವಾಮಿ, ಆನೇಕಲ್ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕರಾದ ಶ್ರೀಮತಿ ವಾಣಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಕೆ. ಚಂದ್ರಶೇಖರ್, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್ಡಿಎಂಸಿ) ಅಧ್ಯಕ್ಷರಾದ ಶ್ರೀ ಎಲ್. ನಾಗಭೂಷಣ್ ಹಾಗೂ ಎಂ5 ಮಹೇಂದ್ರ ಗ್ರೂಪ್ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರೂ, ಗೌರಮ್ಮ ತಿಮ್ಮಾರೆಡ್ಡಿ ಫೌಂಡೇಶನ್ನ ವ್ಯವಸ್ಥಾಪಕ ಟ್ರಸ್ಟಿಯೂ ಆದ ಶ್ರೀ ಬಿ. ಟಿ. ನಾಗರಾಜ್ ರೆಡ್ಡಿ ಉಪಸ್ಥಿತರಿದ್ದರು. ಶಾಲೆಯ ಮುಖ್ಯಶಿಕ್ಷಕಿಯರಾದ ಶ್ರೀಮತಿ ಬಿ. ಎನ್. ಪ್ರೇಮಕುಮಾರಿ, ಶ್ರೀಮತಿ ಮೊಸರತ್ ಮುಬೀನಾ ಹಾಗೂ ಸಹಶಿಕ್ಷಕರಾದ ಶ್ರೀ ಲೋಕೇಶ ಟಿ. ಸೇರಿದಂತೆ ಶಾಲೆಯ ಬೋಧಕ ಸಿಬ್ಬಂದಿ ಪಾಲ್ಗೊಂಡಿದ್ದರು.
ಈ ಯೋಜನೆಯು ಕೇವಲ ಒಂದು ಬಾರಿಯ ನೆರವಿಗೆ ಸೀಮಿತವಾಗದೆ, ಶಾಲೆಗಳು ಮತ್ತು ಸಮಾಜದೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿರಬೇಕೆಂಬ ಫೌಂಡೇಶನ್ನ ವಿಶಾಲ ಶೈಕ್ಷಣಿಕ ದೃಷ್ಟಿಕೋನವನ್ನು ಸಾರುತ್ತದೆ. ಪ್ರತಿವರ್ಷ ಸಮವಸ್ತ್ರ ನೀಡುವುದರಿಂದ ಶಾಲಾ ಶಿಕ್ಷಣಕ್ಕೆ ಎದುರಾಗುವ ದೈನಂದಿನ ತೊಡಕುಗಳು ನಿವಾರಣೆಯಾಗುವುದಲ್ಲದೆ, ಮಕ್ಕಳಲ್ಲಿ ಘನತೆ, ಆತ್ಮವಿಶ್ವಾಸ ಮತ್ತು ಸಮಾನತೆಯ ಬಾಂಧವ್ಯ ಭಾವನೆ ಮೂಡಲಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಎಂ5 ಮಹೇಂದ್ರ ಗ್ರೂಪ್ ನ ಸಿಎಂಡಿ ಹಾಗೂ ಗೌರಮ್ಮ ತಿಮ್ಮಾರೆಡ್ಡಿ ಫೌಂಡೇಶನ್ನ ವ್ಯವಸ್ಥಾಪಕ ಟ್ರಸ್ಟಿ ಶ್ರೀ ಬಿ. ಟಿ. ನಾಗರಾಜ್ ರೆಡ್ಡಿ ಅವರು, “ಶಿಕ್ಷಣವು ಬದುಕಿನಲ್ಲಿ ಅಪಾರ ಅವಕಾಶಗಳನ್ನು ಸೃಷ್ಟಿಸುತ್ತದೆ. ಆದರೆ ಮಕ್ಕಳು ಮೊದಲು ಘನತೆ ಮತ್ತು ಆತ್ಮವಿಶ್ವಾಸದಿಂದ ಕಲಿಯುವಂತಹ ವಾತಾವರಣವನ್ನು ಒದಗಿಸುವುದು ಮುಖ್ಯ. ನಾವು ಬೊಮ್ಮಸಂದ್ರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಬೆಂಬಲ ನೀಡಲು ಮುಂದಾದಾಗ, ಕೇವಲ ಒಂದು ಬಾರಿಯ ನೆರವಿನ ಕಾರ್ಯಕ್ರಮ ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ. ಬದಲಿಗೆ ಶಾಲೆ ಮತ್ತು ವಿದ್ಯಾರ್ಥಿಗಳೊಂದಿಗೆ ದೀರ್ಘಕಾಲೀನ ಬಾಂಧವ್ಯವನ್ನು ಬೆಸೆಯುವುದು ನಮ್ಮ ಗುರಿಯಾಗಿತ್ತು. ‘ನಮ್ಮ ಶಾಲೆ, ನಮ್ಮ ಕೊಡುಗೆ’ ಆ ಬದ್ಧತೆಯ ಸಂಕೇತವಾಗಿದೆ. ಸಮವಸ್ತ್ರ ಎಂಬುದು ಮೇಲ್ನೋಟಕ್ಕೆ ಸಣ್ಣ ಅಗತ್ಯವೆನಿಸಿದರೂ, ಮಗುವಿನ ಮಟ್ಟಿಗೆ ಅದು ಸಮಾನತೆ, ತನ್ನತನ ಮತ್ತು ಶಾಲೆಗೆ ಹೆಮ್ಮೆಯಿಂದ ತೆರಳುವ ಭಾವನೆಯನ್ನು ತಂದುಕೊಡುತ್ತದೆ. ಶಾಲೆಗೆ ಸದಾ ನೆರವಾಗಲು ಮತ್ತು ಪ್ರತಿ ಮಗುವೂ ಕಲಿಯಲು ಹಾಗೂ ಉನ್ನತ ಕನಸು ಕಾಣಲು ಸೂಕ್ತ ಪರಿಸರವನ್ನು ಕಲ್ಪಿಸಲು ನಾವು ಸದಾ ಬದ್ಧರಾಗಿದ್ದೇವೆ” ಎಂದರು.
ಕಳೆದ ಹಲವು ವರ್ಷಗಳಿಂದ ಗೌರಮ್ಮ ತಿಮ್ಮಾರೆಡ್ಡಿ ಫೌಂಡೇಶನ್ ತನ್ನ ಸಾಮಾಜಿಕ ಸೇವೆಗಳನ್ನು ಶಿಕ್ಷಣ ಕ್ಷೇತ್ರವಷ್ಟೇ ಅಲ್ಲದೆ ಆರೋಗ್ಯ ರಕ್ಷಣೆ, ಪ್ರಾಣಿ ಕಲ್ಯಾಣ, ನಾಗರಿಕ ಮೂಲಸೌಕರ್ಯ, ಜೀವನೋಪಾಯ ವೃದ್ಧಿ, ನೀರು ಮತ್ತು ನೈರ್ಮಲ್ಯ ಹಾಗೂ ಪಾರಂಪರಿಕ ಸಂರಕ್ಷಣೆಯಂತಹ ಕ್ಷೇತ್ರಗಳಿಗೂ ವಿಸ್ತರಿಸಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆಯನ್ನು ದತ್ತು ಪಡೆದು ಪೋಷಿಸುವುದು, ಹಿಂದುಳಿದ ವರ್ಗಗಳಿಗೆ ಆರೋಗ್ಯ ತಪಾಸಣಾ ಶಿಬಿರಗಳು ಮತ್ತು ಉಚಿತ ಔಷಧಿ ವಿತರಣೆ, ಚಂದಾಪುರ ಸರ್ಕಲ್ನಲ್ಲಿ ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ಹಾಗೂ ಬೆಂಗಳೂರು ಮತ್ತು ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಸಮುದಾಯ-ಕೇಂದ್ರಿತ ನಾನಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಫೌಂಡೇಶನ್ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.
ಪಶು ಸಂಜೀವಿನಿ (ಪ್ರಾಣಿ ಕಲ್ಯಾಣ), ಜ್ಞಾನ ದೀಪ (ಶಿಕ್ಷಣ), ಸುಜನ ಸಂಸ್ಥಾನ (ನಾಗರಿಕ ಮೂಲಸೌಕರ್ಯ), ಕೌಶಲ್ಯ ಸೇತು (ಜೀವನೋಪಾಯ ವೃದ್ಧಿ), ನಿತ್ಯ ಆರೋಗ್ಯ (ಆರೋಗ್ಯ ಮತ್ತು ರೋಗ ತಡೆಗಟ್ಟುವ ಆರೈಕೆ), ಜಲ ಸಮೃದ್ಧಿ (ನೀರು ಮತ್ತು ನೈರ್ಮಲ್ಯ), ಮತ್ತು ಸ್ಮಾರಕ ಸಂಚಲನೆ (ಪಾರಂಪರಿಕ ಸಂರಕ್ಷಣೆ) ಎಂಬ ಏಳು ಪ್ರಮುಖ ಕಾರ್ಯಕ್ಷೇತ್ರಗಳ ಮೂಲಕ ಸಮಾಜದಲ್ಲಿ ಶಾಶ್ವತ ಮತ್ತು ಅಳೆಯಬಹುದಾದ ಸಕಾರಾತ್ಮಕ ಬದಲಾವಣೆಗಳನ್ನು ತರಲು ಸಂಸ್ಥೆ ಶ್ರಮಿಸುತ್ತಿದೆ.
ಗೌರಮ್ಮ ತಿಮ್ಮಾರೆಡ್ಡಿ ಫೌಂಡೇಶನ್ (ಜಿಟಿಎಫ್) ಪರಿಚಯ:
ಶ್ರೀ ಬಿ. ಟಿ. ನಾಗರಾಜ್ ರೆಡ್ಡಿ ಅವರು ತಮ್ಮ ದಿವಂಗತ ಪೋಷಕರ ಸ್ಮರಣಾರ್ಥ 2017 ರಲ್ಲಿ ಗೌರಮ್ಮ ತಿಮ್ಮಾರೆಡ್ಡಿ ಫೌಂಡೇಶನ್ (ಜಿಟಿಎಫ್) ಅನ್ನು ಸ್ಥಾಪಿಸಿದರು. ಇದು ಎಂ5 ಮಹೇಂದ್ರ ಗ್ರೂಪ್ನ ಸಾಮಾಜಿಕ ಕಾಳಜಿಯ ಸೇವಾ ಅಂಗವಾಗಿದೆ. ಆರಂಭದಿಂದಲೂ ಶಿಕ್ಷಣ, ಆರೋಗ್ಯ, ಪ್ರಾಣಿ ಕಲ್ಯಾಣ, ನಾಗರಿಕ ಮೂಲಸೌಕರ್ಯ, ಜೀವನೋಪಾಯ ವೃದ್ಧಿ, ನೀರು-ನೈರ್ಮಲ್ಯ ಮತ್ತು ಪಾರಂಪರಿಕ ಸಂರಕ್ಷಣಾ ಕಾರ್ಯಕ್ರಮಗಳ ಮೂಲಕ 20,000 ಕ್ಕೂ ಹೆಚ್ಚು ನೇರ ಫಲಾನುಭವಿಗಳಿಗೆ ಫೌಂಡೇಶನ್ ನೆರವಾಗಿದೆ.
ಬೊಮ್ಮಸಂದ್ರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಮಗ್ರ ನಿರ್ವಹಣೆ ಮತ್ತು ಚಂದಾಪುರ ಸರ್ಕಲ್ನ ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು ಸಂಸ್ಥೆಯ ಪ್ರಮುಖ ದೀರ್ಘಕಾಲೀನ ಯೋಜನೆಗಳಾಗಿವೆ. ಇದರೊಂದಿಗೆ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ನಿರ್ಗತಿಕರಿಗೆ ಆರೋಗ್ಯ ಸೇವೆಗಳು, ಪ್ರಾಣಿ ಸಂರಕ್ಷಣೆ ಹಾಗೂ ಕುಡಿಯುವ ನೀರು ಮತ್ತು ನೈರ್ಮಲ್ಯ ಸೌಲಭ್ಯ ಒದಗಿಸುವ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಸರ್ಕಾರಿ ಇಲಾಖೆಗಳು, ಸ್ಥಳೀಯ ಸಂಘ-ಸಂಸ್ಥೆಗಳು ಮತ್ತು ಸಮುದಾಯದ ಮುಖಂಡರ ಜೊತೆಗೂಡಿ ಕಾರ್ಯನಿರ್ವಹಿಸುತ್ತಿರುವ ಜಿಟಿಎಫ್, ಸಮಾಜದ ನೈಜ ಅಗತ್ಯತೆಗಳನ್ನು ಪೂರೈಸುವ ಮತ್ತು ಸುಸ್ಥಿರ ಸಾಮಾಜಿಕ ಅಭಿವೃದ್ಧಿಗೆ ಕೊಡುಗೆ ನೀಡುವ ರಚನಾತ್ಮಕ ಕಾರ್ಯಗಳಲ್ಲಿ ಸಕ್ರಿಯವಾಗಿದೆ.
ಮಾಧ್ಯಮ ಮಾಹಿತಿ ಸಂಪರ್ಕ:
