ಶ್ಲೋಕ – 08
ಆಯುಃಸತ್ವಬಲಾರೋಗ್ಯಸುಖಪ್ರೀತಿವಿವರ್ಧನಾಃ ।
ರಸ್ಯಾಃ ಸ್ನಿಗ್ಧಾಃ ಸ್ಥಿರಾ ಹೃದ್ಯಾ ಆಹಾರಾಃ ಸಾತ್ವಿಕಪ್ರಿಯಾಃ ॥೮॥
ಆಯುಃ ಸತ್ವ ಬಲ ಆರೋಗ್ಯ ಸುಖ ಪ್ರೀತಿ ವಿವರ್ಧನಾಃ ।
ರಸ್ಯಾಃ ಸ್ನಿಗ್ಧಾಃ ಸ್ಥಿರಾ ಹೃದ್ಯಾಃ ಆಹಾರಾಃ ಸಾತ್ವಿಕ ಪ್ರಿಯಾಃ –ಇವು ಸಾತ್ವಿಕರಿಗೆ ಮೆಚ್ಚಿಕೆಯಾದ ತಿನಿಸುಗಳು: ಆಯುಸ್ಸು, ಒಳ್ಳೆಯತನ, ತ್ರಾಣ, ಆರೋಗ್ಯವನ್ನು ಹೆಚ್ಚಿಸುವಂಥವು; ಬಹಳ ಕಾಲ ಮೆಚ್ಚಿಕೆಯಾಗುವಂಥವು; ತಿಂದಾಗ ಖುಷಿಯಾಗುವಂಥವು; ರುಚಿಯಾದಂಥವು; ಕಸುವಿರುವಂಥವು; ಧೀರ್ಘಕಾಲ ಪರಿಣಾಮ ಬೀರುವಂಥವು; ಮತ್ತೆಮತ್ತೆ ಮನ ಸೆಳೆಯುವಂಥವು.
ಈ ಶ್ಲೋಕದಲ್ಲಿ ಕೃಷ್ಣ ಸಾತ್ವಿಕ ಆಹಾರದ ಬಗ್ಗೆ ವಿವರಿಸಿದ್ದಾನೆ. ಯಾವ ಆಹಾರ ನಮ್ಮ ಆಯುಸ್ಸಿನ ವೃದ್ಧಿಗೆ ಪೂರಕವೋ; ಯಾವ ಆಹಾರ ನಮಗೆ ಸೌಮ್ಯ ಸ್ವಭಾವವನ್ನು ಕೊಡುತ್ತದೋ; ಯಾವ ಆಹಾರ ದೇಹಕ್ಕೆ ಪೌಷ್ಟಿಕಾಂಶವನ್ನು ಕೊಡುತ್ತದೋ; ಯಾವ ಆಹಾರ ಆರೋಗ್ಯವನ್ನು ಕೊಡುತ್ತದೋ ಅಂತಹ ಆಹಾರ ಸಾತ್ವಿಕ ಆಹಾರ. ಈ ಆಹಾರವನ್ನು ನೋಡಿದಾಗ ನಮಗೆ ಕೆಟ್ಟ ಭಾವನೆ ಬರುವುದಿಲ್ಲ. ಅದು ರಸವತ್ತಾಗಿರುತ್ತದೆ, ರುಚಿಯಾಗಿರುತ್ತದೆ. ಇದನ್ನು ತಿಂದಾಗ ನಮ್ಮ ಹೊಟ್ಟೆ ತುಂಬುತ್ತದೆ ಮತ್ತು ತಕ್ಷಣ ಹಸಿವೆಯಾಗುವುದಿಲ್ಲ. ನೋಡಲು ಹೃದಯಂಗಮವಾಗಿರುತ್ತದೆ, ತಿಂದ ನೆನಪು ಉಳಿಯುವಂತಿರುತ್ತದೆ.
ನಿಜವಾದ ಸಾತ್ವಿಕರು ಏನು ತಿನ್ನುತ್ತಾರೋ ಅದು ಸಾತ್ವಿಕ ಆಹಾರವಾಗಿರುತ್ತದೆ. ಪ್ರಕೃತಿ ಸಹಜವಾದ, ರಸವತ್ತಾದ, ರುಚಿಯಾದ, ಹಣ್ಣು-ಹಂಪಲು, ಗಡ್ಡೆ-ಗೆಣಸು, ಬೇಳೆ-ಕಾಳು, ಕಂದ-ಮೂಲಗಳು ಸಾಮಾನ್ಯವಾಗಿ ಸಾತ್ವಿಕ ಆಹಾರವಾಗಿರುತ್ತದೆ. ಆಯುಸ್ಸನ್ನು ಹೆಚ್ಚಿಸುವ ಶುದ್ಧ ತುಪ್ಪ(ಮಿತವಾಗಿ ಬಳಸಿದಾಗ) ಸಾತ್ವಿಕ ಆಹಾರ.
