ಕೊರಟಗೆರೆ: ತಾಲ್ಲೂಕಿನ ಮಾವತ್ತೂರು ವ್ಯವಸಾಯ ಸೇವಾ ಸಹಕಾರ ಸಂಘದ (ವಿಎಸ್ಎಸ್ಎನ್) ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಕಾರ್ಯದರ್ಶಿ ತಿಮ್ಮಯ್ಯ ಅವರ ವಿರುದ್ಧ ಕೇಳಿಬಂದ ಆರೋಪ–ಪ್ರತ್ಯಾರೋಪಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಗದ್ದಲ ಉಂಟಾಗಿ, ಸಭೆಯನ್ನು ಮಧ್ಯದಲ್ಲೇ ಮುಂದೂಡಲಾಯಿತು.
ಮಾವತ್ತೂರು ವಿ.ಎಸ್.ಎಸ್.ಎನ್ ಆವರಣದಲ್ಲಿ ಗುರುವಾರ ಬೆಳಿಗ್ಗೆ 10 ಗಂಟೆಗೆ ಸಾಮಾನ್ಯ ಸಭೆ ನಿಗದಿಯಾಗಿತ್ತು. ಸಭೆ ಆರಂಭವಾಗುತ್ತಿದ್ದಂತೆ ಸಂಘದ ಮಾಜಿ ಅಧ್ಯಕ್ಷ ಧನಂಜಯ ಸೇರಿದಂತೆ ಕೆಲ ಸದಸ್ಯರು, ಕಾರ್ಯದರ್ಶಿ ತಿಮ್ಮಯ್ಯ ಅವರು ಸುಮಾರು ಎರಡು ತಿಂಗಳಿಂದ ಕಚೇರಿಗೆ ಹಾಜರಾಗಿಲ್ಲ. ಹಾಜರಾತಿ ಪುಸ್ತಕಕ್ಕೆ ಸಹಿ ಮಾಡದಿದ್ದರೂ ವೇತನ ಪಡೆದಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ, ಕಾರ್ಯದರ್ಶಿ ತಿಮ್ಮಯ್ಯ ಅವರ ಪುತ್ರ ಯಶವಂತ್ ಅವರನ್ನು ಸಂಘದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ನೇಮಕ ಮಾಡಲಾಗಿದ್ದು, ತಂದೆ–ಮಗ ಇಬ್ಬರೂ ನಿಯಮಬಾಹಿರವಾಗಿ ವೇತನ ಪಡೆದಿದ್ದಾರೆ ಎಂಬ ಆರೋಪದ ಕುರಿತು ಸಹಕಾರ ಇಲಾಖೆಯ ಡಿಆರ್ ಹಾಗೂ ಎಆರ್ ಅವರಿಗೆ ದೂರು ನೀಡಲಾಗಿದೆ. ಈ ಬಗ್ಗೆ ತನಿಖೆ ಪೂರ್ಣಗೊಂಡ ಬಳಿಕವೇ ಸಾಮಾನ್ಯ ಸಭೆ ನಡೆಸಬೇಕು ಎಂದು ಕೆಲ ಸದಸ್ಯರು ಒತ್ತಾಯಿಸಿದರು.

ಇದಕ್ಕೆ ಪ್ರತಿಯಾಗಿ ಕಾರ್ಯದರ್ಶಿ ಪರದ ಸದಸ್ಯರು, ಕಾರ್ಯದರ್ಶಿ ತಪ್ಪು ಮಾಡಿದ್ದರೆ ತನಿಖೆ ನಡೆಸಲಿ. ಆದರೆ ತನಿಖೆಯ ನೆಪದಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಮುಂದೂಡುವುದು ಸರಿಯಲ್ಲ ಎಂದು ವಾದಿಸಿದರು. ಸಂಘದ ಮೇಲ್ವಿಚಾರಕ ತಿಮ್ಮರಾಜು ಅವರಿಗೆ ಸಭೆ ನಡೆಸಲು ಅವಕಾಶ ನೀಡಬೇಕು. ಸಭೆ ನಡೆಯದಿದ್ದರೆ ಷೇರುದಾರರಿಗೆ ನಷ್ಟವಾಗಲಿದೆ ಎಂದು ಹೇಳಿದರು.
ಸಭೆಯ ನಡವಳಿ ಪುಸ್ತಕದಲ್ಲಿ ಸಹಿ ಹಾಕಿ ತೆರಳುವುದಾಗಿ ಕೆಲವರು ತಿಳಿಸಿದಾಗ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯರು, ಸಭೆಯೇ ನಡೆದಿಲ್ಲ. ಆಯವ್ಯಯ ಸೇರಿದಂತೆ ಇತರ ವಿಷಯಗಳನ್ನು ಮಂಡಿಸದೆ ನಡವಳಿ ಪುಸ್ತಕಕ್ಕೆ ಹೇಗೆ ಸಹಿ ಮಾಡಬೇಕು ಎಂದು ಪ್ರಶ್ನಿಸಿದರು. ಈ ವಿಚಾರವಾಗಿ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಗದ್ದಲದ ವಾತಾವರಣ ನಿರ್ಮಾಣವಾಯಿತು.
ಬೆಳಿಗ್ಗೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಕೋಳಾಲ ಠಾಣೆಯ ಪಿಎಸ್ಐ ಅಭಿಷೇಕ್ ಹಾಗೂ ಸಿಬ್ಬಂದಿ ಸ್ಥಳದಲ್ಲಿದ್ದು, ಎರಡೂ ಗುಂಪುಗಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.
ಆರೋಪಕ್ಕೆ ಮಾಜಿ ಅಧ್ಯಕ್ಷರ ಹೇಳಿಕೆ
ಮಾಜಿ ಅಧ್ಯಕ್ಷ ಧನಂಜಯ ಮಾತನಾಡಿ, ಕಾರ್ಯದರ್ಶಿ ಎರಡು ತಿಂಗಳು ಕೆಲಸಕ್ಕೆ ಹಾಜರಾಗದಿದ್ದರೂ ಅವರಿಗೆ ವೇತನ ನೀಡಲಾಗಿದೆ ಎಂದು ಆರೋಪಿಸಿದರು. ಅವರ ಪುತ್ರನನ್ನು ಕಂಪ್ಯೂಟರ್ ಆಪರೇಟರ್ ಆಗಿ ನೇಮಕ ಮಾಡಿರುವ ಬಗ್ಗೆಯೂ ಸಹಕಾರ ಇಲಾಖೆಯ ಎಆರ್ ಮತ್ತು ಡಿಆರ್ ಅವರಿಗೆ ದೂರು ನೀಡಿರುವುದಾಗಿ ತಿಳಿಸಿದರು.
“ಈ ಸಂಬಂಧ ಎಆರ್ ಅವರಿಗೆ ದೂರು ನೀಡಿದ್ದೇನೆ. ಆದರೆ ಎಆರ್ ಅವರು ದೂರವಾಣಿಯಲ್ಲಿ ನನಗೆ ಬೆದರಿಕೆ ಹಾಕಿದ್ದಾರೆ” ಎಂದು ಅವರು ಆರೋಪಿಸಿದರು.

ಮೇಲ್ವಿಚಾರಕರ ಸ್ಪಷ್ಟನೆ
ಸಂಘದ ಮೇಲ್ವಿಚಾರಕ ತಿಮ್ಮರಾಜು ಮಾತನಾಡಿ, ಸಭೆ ನಡೆಸಬೇಕು ಎಂದು ಕೆಲ ಸದಸ್ಯರು ಒತ್ತಾಯಿಸುತ್ತಿದ್ದರೆ, ಇನ್ನೂ ಕೆಲವರು ಸಭೆ ನಡೆಸಬಾರದು ಎಂದು ಹೇಳುತ್ತಿದ್ದಾರೆ. ಕಾರ್ಯದರ್ಶಿ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿಲ್ಲ ಎಂಬುದು ನಿಜ. ಆದರೆ ಅವರು ಕೆಲಸ ಮಾಡಿರುವುದಾಗಿ ತಿಳಿಸಿದ್ದು, ಆ ತಿಂಗಳ ವೇತನ ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಆರೋಪ ನಿರಾಕರಿಸಿದ ಕಾರ್ಯದರ್ಶಿ
ಕಾರ್ಯದರ್ಶಿ ತಿಮ್ಮಯ್ಯ ಅವರು ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದರು.
“ವೈಯಕ್ತಿಕ ಕಾರಣಗಳಿಂದ ನನ್ನ ವಿರುದ್ಧ ದೂರು ನೀಡಲಾಗುತ್ತಿದೆ. ಕಳೆದ 35 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಯಾವುದೇ ಕಾನೂನುಬಾಹಿರ ಕೆಲಸ ಮಾಡಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಗ್ರಾಮದ ವೆಂಕಟಪ್ಪ, ಮಂಜುನಾಥ್, ತರುಣ್, ಗಣೇಶ್, ಪ್ರಕಾಶ್ ಸೇರಿದಂತೆ ಹಲವು ಷೇರುದಾರರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ವರದಿ: ನರಸಿಂಹಯ್ಯ ಹೊಸಕೋಟೆ
