ತುಮಕೂರು: ಆಗ್ನೇಯ ಪದವಿಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಎನ್ಡಿಎ ಮೈತ್ರಿ ಅಭ್ಯರ್ಥಿ ಕೆ.ಎಂ.ಸುರೇಶ್ ಅವರ ಪರವಾಗಿ ಜಿಲ್ಲೆಯ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಒಗ್ಗಟ್ಟು ಪ್ರದರ್ಶನ ಮಾಡಿ,ಅಭ್ಯರ್ಥಿ ಗೆಲುವಿಗೆ ಒಟ್ಟಾಗಿ ಶ್ರಮಿಸುವ ನಿರ್ಧಾರ ಪ್ರಕಟಿಸಿದರು.
ಶುಕ್ರವಾರ ನಗರದಲ್ಲಿ ಜಿಲ್ಲೆಯ ಎರಡೂ ಪಕ್ಷಗಳ ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಒಗ್ಗಟ್ಟು ಪ್ರದರ್ಶಿಸಿ ಬೆಂಬಲ ವ್ಯಕ್ತಪಡಿಸಿದರು.ಜೆಡಿಎಸ್ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಹೆಚ್.ನಿಂಗಪ್ಪ ಮಾತನಾಡಿ, ಎನ್ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್ ಗೆಲುವಿಗೆ ಎರಡೂ ಪಕ್ಷದ ಮುಖಂಡರು ಪ್ರಾಮಾಣಿಕವಾಗಿ ಕೆಲಸ ಮಾಡಿ, ಅತ್ಯಧಿಕ ಮತಗಳ ಅಂತರದಿಂದ ಗೆಲುವು ಪಡೆಯಲು ಶ್ರಮಿಸೋಣ ಎಂದರು.

ಆಗ್ನೇಯ ಪದವಿಧರಕ್ಷೇತ್ರದ ಹಾಲಿ ವಿಧಾನ ಪರಿಷತ್ ಸದಸ್ಯ ಎಂ.ಚಿದಾನಂದಗೌಡರು ಮಾತನಾಡಿ, ತಾವು ಪ್ರತಿನಿಧಿಸುವ ಈ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಗೆ ವ್ಯಾಪಕ ಬೆಂಬಲ ಕಂಡುಬಂದಿದೆ.ಇದೂವರೆಗೂ ನಡೆದ 11 ಚುನಾವಣೆಗಳಲ್ಲಿ 9 ಬಾರಿ ಬಿಜೆಪಿ, ಎರಡು ಬಾರಿ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ.ಎರಡೂ ಪಕ್ಷದವರು ಒಟ್ಟಾಗಿ ಶ್ರಮಿಸಿದರೆ ನಮ್ಮ ಅಭ್ಯರ್ಥಿ ಕೆ.ಎಂ.ಸುರೇಶ್ ದಾಖಲೆಯ ಬಹುಮತದಿಂದ ಗೆಲುವು ಪಡೆಯುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಆಗ್ನೇಯ ಪದವಿಧರಕ್ಷೇತ್ರ ಮೈತ್ರಿ ಅಭ್ಯರ್ಥಿ ಕೆ.ಎಂ.ಸುರೇಶ್ ಮಾತನಾಡುತ್ತಾ ನಾನು 2000ನೇ ಇಸವಿಯಿಂದ ಬಿಜೆಪಿ ಯುವಮೋರ್ಚಾದಲ್ಲಿದ್ದು ನಂತರ ಹರಿಹರ-ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ವಿವಿಧ ಮೋರ್ಚಾಗಳಲ್ಲಿ ಕೆಲಸ ನಿರ್ವಹಿಸಿದ್ದಕ್ಕೆ ಪಕ್ಷ ನನ್ನ ಕೆಲಸವನ್ನು ಗುರುತಿಸಿ ಈಗ ವಿಧಾನಪರಿಷತ್ ಗೆ ಟಿಕೆಟ್ ನೀಡಿದೆ ಜೆಡಿಎಸ್ ಮತ್ತು ಬಿಜೆಪಿಯ ಮುಖಂಡರೆಲ್ಲರೂ ನನ್ನ ಪರವಾಗಿ ಕೆಲಸ ಮಾಡುತ್ತಾರೆ ಖಂಡಿತವಾಗಿಯೂ ನಾನು ಹೆಚ್ಚಿನ ಮತಗಳಿಂದ ಆರಿಸಿ ಮೇಲ್ಮನೆಗೆ ಆಯ್ಕೆಯಾಗುತ್ತೇನೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್, ಜೆಡಿಎಸ್ ನಗರ ಕಾರ್ಯಾಧ್ಯಕ್ಷ ಟಿ.ಎಸ್.ಮೋಹನ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ಅಂಬಿಕಾಹುಲಿನಾಯ್ಕರ್, ಮುಖಂಡರಾದ ಉಗ್ರೇಶ್, ಟಿ.ಆರ್.ನಾಗರಾಜ್ ಬಿ.ಕೆ.ಮಂಜುನಾಥ್, ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.
– ಚಂದ್ರಚೂಡ ಕೆ.ಬಿ.
