ಹಾಸನ: ಹಾಸನದ ಅಧಿದೇವತೆ ಶ್ರೀ ಹಾಸನಾಂಬ ದೇವಿಯ ದರ್ಶನ ಮಹೋತ್ಸವ–2026ಕ್ಕೆ ಸಂಬಂಧಿಸಿದಂತೆ ದೇವಾಲಯದ ದರ್ಶನ ವೇಳಾಪಟ್ಟಿ ಪ್ರಕಟಿಸಲಾಗಿದೆ. ಅ.29ರಿಂದ ನ.11ರವರೆಗೆ ವಿವಿಧ ದಿನಗಳಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ವಿಶೇಷ ಪೂಜೆ ಹಾಗೂ ನೈವೇದ್ಯದ ಸಮಯದಲ್ಲಿ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ.
ವೇಳಾಪಟ್ಟಿಯ ಪ್ರಕಾರ ಅ.29ರಂದು ಗುರುವಾರ ಮಧ್ಯಾಹ್ನ 12 ಗಂಟೆಯಿಂದ ಬಾಗಿಲು ತೆರೆಯಲಾಗುವುದು. ಅಂದು ಸಾರ್ವಜನಿಕರಿಗೆ ದರ್ಶನ ಇರುವುದಿಲ್ಲ. ಅ.30ರಂದು ಶುಕ್ರವಾರ ಬೆಳಗ್ಗೆ 6ರಿಂದ ಸಂಜೆ 7ರವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶವಿದೆ.
ಅ.31ರಿಂದ ನ.9ರವರೆಗೆ ಪ್ರತಿದಿನ ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ದರ್ಶನಕ್ಕೆ ಅವಕಾಶವಿದ್ದು, ಮಧ್ಯಾಹ್ನದ ಬಳಿಕ ವಿಶೇಷ ಪೂಜೆ, ನೈವೇದ್ಯ ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮಗಳ ಸಮಯಕ್ಕೆ ಅನುಗುಣವಾಗಿ ದರ್ಶನದ ಅವಧಿಯಲ್ಲಿ ಬದಲಾವಣೆ ಮಾಡಲಾಗಿದೆ.
ನ.10ರಂದು ಮಂಗಳವಾರ ಬೆಳಗ್ಗೆ 6ರಿಂದ ಮಧ್ಯಾಹ್ನ 7ರವರೆಗೆ ದರ್ಶನಕ್ಕೆ ಅವಕಾಶವಿದ್ದು, ಮಧ್ಯಾಹ್ನ 1ರಿಂದ ಸಂಜೆ 7ರವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 7ರಿಂದ ರಾತ್ರಿ 1ರವರೆಗೆ ರಥೋತ್ಸವ ನಡೆಯಲಿದೆ.
ನ.11ರಂದು ಬುಧವಾರ ಮಧ್ಯಾಹ್ನ 12 ಗಂಟೆಗೆ ಬಾಗಿಲು ಮುಚ್ಚಲಾಗುವುದು. ಅಂದು ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ.
ಭಕ್ತರು ನಿಗದಿತ ಸಮಯಕ್ಕೆ ಅನುಗುಣವಾಗಿ ಆಗಮಿಸಿ ಶ್ರೀ ಹಾಸನಾಂಬ ದೇವಿಯ ದರ್ಶನ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಮುಖ ದಿನಾಂಕಗಳು
- ಅ.29: ಮಧ್ಯಾಹ್ನ 12ಕ್ಕೆ ಬಾಗಿಲು ತೆರೆಯುವುದು
- ಅ.30: ಬೆಳಗ್ಗೆ 6ರಿಂದ ಸಂಜೆ 7ರವರೆಗೆ ದರ್ಶನ
- ಅ.31–ನ.9: ನಿಗದಿತ ಸಮಯಾನುಸಾರ ದರ್ಶನ
- ನ.10: ದರ್ಶನದ ಬಳಿಕ ರಥೋತ್ಸವ
- ನ.11: ಮಧ್ಯಾಹ್ನ 12ಕ್ಕೆ ಬಾಗಿಲು ಮುಚ್ಚುವುದು
