ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಕರೋಟಿ-ಹೆಗ್ಗಡಹಳ್ಳಿ ಜೋಡಿ ಗ್ರಾಮದ ಕೆರೆಗೆ ಗ್ರಾಮಸ್ಥರೇ ಸಡಗರ ಸಂಭ್ರಮದಿಂದ ಬಾಗಿನ ಅರ್ಪಣೆ ಮಾಡಿದರು.
ಗ್ರಾಮದ ಜನರ ಹಲವು ದಿನಗಳ ನಿರಂತರ ಪರಿಶ್ರಮದ ಫಲವಾಗಿ ಕೆರೆ ಸಂಪೂರ್ಣ ಭರ್ತಿಯಾಗಿದೆ. ಈ ಹಿನ್ನಲೆಯಲ್ಲಿ ಮಹಿಳೆಯರು, ಯುವಕರು, ರೈತರು ಸೇರಿದಂತೆ ಗ್ರಾಮಸ್ಥರೆಲ್ಲರೂ ಸೇರಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಯುವಕ ಕರೋಟಿ ಅಜಯ್ ನಮ್ಮ ಕರೋಟಿ ಮತ್ತು ಹೆಗ್ಗಡಹಳ್ಳಿ ಗ್ರಾಮಗಳ ಜನರ ಪರಿಶ್ರಮದಿಂದ ಇಂದು ನಮ್ಮ ಕೆರೆ ತುಂಬಿದೆ.

ಆದರೆ ದುರ್ದೈವ ಏನಂದರೆ ನಮ್ಮ ತೆರಿಗೆ ಹಣದಿಂದ ಸಂಬಳ ಪಡೆಯುವ ಸಂಬಂಧಪಟ್ಟ ಹೇಮಾವತಿ ನೀರಾವರಿ ಇಲಾಖೆಯ ಅಧಿಕಾರಿಗಳು ಮಾಡಬೇಕಿದ್ದ ಕೆಲಸವನ್ನು ನಮ್ಮ ಗ್ರಾಮಸ್ಥರು ಕಳೆದ 10 ದಿನಗಳಿಂದ ಕಾಲುವೆ ಏರಿ ಮೇಲೆ ಮಲಗಿ ಮಾಡಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರೈತರು ಪರದಾಡುವಂತಾಗಿದೆ. ಮುಂದಿನ ದಿನಗಳಾದರೂ ರೈತರ ಹಿತದೃಷ್ಟಿಯಿಂದ ಹೇಮಾವತಿ ನೀರಾವರಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗ್ರಾಮಸ್ಥರ ಈ ಹೋರಾಟಕ್ಕೆ ಹಾಗೂ ಒಗ್ಗಟ್ಟಿಗೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*
