ಕೊರಟಗೆರೆ:– ರಾಜ್ಯ ಹಾಗೂ ತುಮಕೂರು ಜಿಲ್ಲೆಯಲ್ಲಿ ಎದುರಾಗಿರುವ ಬರ ಪರಿಸ್ಥಿತಿ ದೂರವಾಗಿ ಉತ್ತಮ ಮಳೆ ಸುರಿದು ಸಮೃದ್ಧ ಬೆಳೆ ಬೆಳೆಯಲಿ, ಜನರು ಸುಭಿಕ್ಷವಾಗಿ ಜೀವನ ನಡೆಸುವಂತಾಗಲಿ ಎಂದು ಕೊರಟಗೆರೆ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಪಟ್ಟಣದ ಕಟ್ಟೆಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಪಟ್ಟಣದ ಜನರ ಆರಾಧ್ಯ ದೈವ, ಉದ್ಭವ ಮೂರ್ತಿಯಾದ ಕಟ್ಟೆಗಣಪತಿ ದೇವಾಲಯದ ಸಮುದಾಯ ಭವನದಲ್ಲಿ ಪ್ರತಿಷ್ಠಾಪಿಸಿರುವ ಗಣಪತಿ ಪೆಂಡಾಲ್ನಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷ ನರಸಿಂಹಮೂರ್ತಿ ನೇತೃತ್ವದಲ್ಲಿ ಪದಾಧಿಕಾರಿಗಳು ಹಾಗೂ ಸದಸ್ಯರು ಗಣಪತಿಗೆ ಅಭಿಷೇಕ, ವಿಶೇಷ ಪೂಜೆ ಹಾಗೂ ಮಂಗಳಾರತಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನರಸಿಂಹಮೂರ್ತಿ, ತುಮಕೂರು ಜಿಲ್ಲೆ ಸೇರಿದಂತೆ ಕೊರಟಗೆರೆ ತಾಲೂಕಿನಲ್ಲಿ ಜನರು ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಉತ್ತಮ ಮಳೆ ಸುರಿದು ಸಮೃದ್ಧ ಬೆಳೆ ಬೆಳೆಯಬೇಕು, ರೈತರು ಸೇರಿದಂತೆ ಎಲ್ಲ ವರ್ಗದ ಜನರ ಬದುಕು ಹಸನಾಗಬೇಕು ಎಂಬ ಆಶಯದಿಂದ ವಿಘ್ನೇಶ್ವರನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.
ಕಟ್ಟೆಗಣಪತಿ ಪೆಂಡಾಲ್ನಲ್ಲಿ ಕಳೆದ 18 ವರ್ಷಗಳಿಂದ ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷಭೇದವಿಲ್ಲದೆ ಸಾರ್ವಜನಿಕರ ಒಳಿತಿಗಾಗಿ, ಎಲ್ಲರ ಸುಖ, ಶಾಂತಿ ಮತ್ತು ಸಮೃದ್ಧಿಗಾಗಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿಕೊಂಡು ಬರಲಾಗುತ್ತಿದೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಹಿರಿಯ ಪತ್ರಕರ್ತ ಎನ್. ಪದ್ಮನಾಭ್, ರಮೇಶ್, ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ರಂಗಧಾಮಯ್ಯ, ಕೆ.ಪಿ. ಯಶಸ್ಸ್, ತಾಲೂಕು ಸಂಘದ ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ರಾಘವೇಂದ್ರ, ಖಜಾಂಚಿ ನವೀನ್ಕುಮಾರ್, ನಿರ್ದೇಶಕರಾದ ಕೆ.ಬಿ. ಲೋಕೇಶ್, ಹರೀಶ್, ಲಕ್ಷ್ಮೀಶ, ಲಕ್ಷ್ಮೀಕಾಂತ, ಸಂಜಯ್, ಕೆ.ಪಿ. ಅಭಿಲಾಷ್, ಗೋಪಿ ಸೇರಿದಂತೆ ಹಲವರು ಭಾಗವಹಿಸಿದ್ದರು.
– ಶ್ರೀನಿವಾಸ್ ಕೊರಟಗೆರೆ
