ಕೊರಟಗೆರೆ:- ತಾಲೂಕಿನಲ್ಲಿ ಮಳೆ ಕೊರತೆಯಿಂದ ಬರದ ಛಾಯೆ ಆವರಿಸಿದ್ದು, ಮಳೆಗಾಗಿ ದಕ್ಷಿಣಕಾಶಿ ಖ್ಯಾತಿಯ ಶ್ರೀ ಗಂಗಾಧರೇಶ್ವರ ಸ್ವಾಮಿಗೆ ಸೆ.28 ರಂದು ಮಹಾ ಕುಂಭಾಭಿಷೇಕ ಆಯೋಜಿಸಲಾಗಿದೆ ಎಂದು ಕುಂಭಾಭಿಷೇಕ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ್ ತಿಳಿಸಿದರು.
ಪಟ್ಟಣದ ಹೊರ ಹೊಲಯದ ಕಾಮಧೇನು ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರ್ವ ಕಾಲದಿಂದಲೂ ಬರಗಾಲ ಬಂದಾಗ ಗಂಗಾಧರೇಶ್ವರ ಸ್ವಾಮಿಗೆ ಕುಂಭಾಭಿಷೇಕ ಮಾಡುವ ಸಂಪ್ರದಾಯವಿದೆ. ರಾಜ್ಯ ಸರ್ಕಾರ ಈಗಾಗಲೇ ತಾಲೂಕನ್ನು ಬರಪೀಡಿತ ಎಂದು ಘೋಷಿಸಿದ್ದು, ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಆದ್ದರಿಂದ ಭಕ್ತರ ಬೇಡಿಕೆಯಂತೆ ಈ ಧಾರ್ಮಿಕ ಕಾರ್ಯ ಆಯೋಜಿಸಲಾಗಿದೆ ಎಂದರು.
ಸಮಿತಿ ಸದಸ್ಯ ಅಶ್ವತ್ಥ ನಾರಾಯಣರಾಜು ಮಾತನಾಡಿ, ದೇವಾಲಯಕ್ಕೆ ಐತಿಹಾಸಿಕ ಮಹತ್ವವಿದ್ದು, ಭಕ್ತರ ಇಷ್ಟಾರ್ಥ ಈಡೇರಿಸುವ ಕ್ಷೇತ್ರವಾಗಿದೆ. ಸೆ.28 ರಂದು ಬೆಳಿಗ್ಗೆ ರುದ್ರಾಭಿಷೇಕ, ಹೋಮ, ಕುಂಭಾಭಿಷೇಕ, ವಿಶೇಷ ಅಲಂಕಾರ ಹಾಗೂ 2000 ಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದರು.
ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಸುರೇಶ್ ಮಾತನಾಡಿ, ಈ ಹಿಂದೆ ಬರಗಾಲ ಎದುರಾದ ವೇಳೆ ಕುಂಭಾಭಿಷೇಕ ನೆರವೇರಿಸಿದ ಬಳಿಕ ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು ತುಂಬಿದ್ದವು
ಎಂದು ಹೇಳಿದರು.
ಸಮಿತಿಯ ಕೆ.ವಿ.ಪುರುಷೋತ್ತಮ್ ಮಾತನಾಡಿ, “ಇದು ಕೇವಲ ಒಂದು ಪೂಜಾ ಕಾರ್ಯಕ್ರಮವಲ್ಲ, ರೈತರ ಬದುಕಿನ ಪ್ರಶ್ನೆ. ನಮ್ಮ ತಾಲೂಕಿನ ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಗಂಗಾಧರೇಶ್ವರ ಸ್ವಾಮಿಯ ಕೃಪೆಯಿಂದ ಮಳೆ ಬಂದು ಬೆಳೆ ಸಮೃದ್ಧಿಯಾಗಲಿ ಎಂಬ ಉದ್ದೇಶದಿಂದ ಎಲ್ಲ ಸಮುದಾಯದವರನ್ನು ಒಗ್ಗೂಡಿಸಿ ಈ ಕುಂಭಾಭಿಷೇಕವನ್ನು ಆಯೋಜಿಸಲಾಗಿದೆ. ಎಲ್ಲ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಮನವಿ ಮಾಡಿದರು.
ಕಾರ್ಯಕ್ರಮಕ್ಕೆ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಎಲೆರಾಂಪುರ ಡಾ.ಹನುಮಂತನಾಥ ಸ್ವಾಮೀಜಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮಾಜಿ ಶಾಸಕರು, ಪಿ.ಎನ್. ಕೃಷ್ಣಮೂರ್ತಿ ಸೇರಿದಂತೆ ಗಣ್ಯರು ಆಗಮಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಚಂದ್ರಶೇಖರ್ ಅರಸ್, ಆಟೋ ಕುಮಾರ್, ರಾಘವೇಂದ್ರ, ರವಿಕುಮಾರ್, ತಿಮ್ಮರಾಜು, ವಿನಯ್ ಕುಮಾರ್ ಇದ್ದರು.
– ಶ್ರೀನಿವಾಸ್ ಕೊರಟಗೆರೆ.
