ಅವನ ಹೆಸರು ದೇವಪ್ಪ ಅಂತೆ. ಆ ಈಚಲ ಹರದಲ್ಲಿ ಸಾಕಷ್ಟು ಮೊಲಗಳಿದ್ದು, ಗೂಟಗಳನ್ನು ನೆಲಕ್ಕೆ ಹೊಡೆದು, ತೆಳುವಾದ ತಂತಿಯಿಂದ ಮಾಡಿದ ಬಲೆಗಳನ್ನು ಅಲ್ಲಲ್ಲಿ ಕಟ್ಟಿ, ದಿನಕ್ಕೆ ಒಂದೆರಡಾದರೂ ಮೊಲ ಹಿಡಿಯುವುದು ಅವನ ಹವ್ಯಾಸ. ಮಲೆನಾಡಿರಲಿ ಅಥವಾ ಬಯಲು ಸೀಮೆಯಿರಲಿ, ಈ ರೀತಿಯ ಬಲೆ, ಇಡಚಲು, ಹಕ್ಕಿಬಲೆ, ಉಳ್ಳ ಮುಂತಾದವುಗಳನ್ನು ಉಪಯೋಗಿಸಿ ಕೋವಿಯಿಲ್ಲದೇ ಶಿಕಾರಿ ಮಾಡುವುದು ವಾಡಿಕೆ.
ಬೈಕ್, ಟಿಲ್ಲರ್ ಮುಂತಾದವುಗಳ ಕ್ಲಚ್ ಕೇಬಲ್ಗಳನ್ನು ಆಯಾ ಪ್ರಾಣಿಗಳ ತಾಕತ್ತಿಗೆ ಅನುಗುಣವಾಗಿ, ಪ್ರಾಣಿಗಳು ತಿರುಗುವ ಗಂಡಿಗೆ ಕಟ್ಟಿ, ಹಿಡಿದು ಹಬ್ಬ ಹುಡಿಹಾರಿಸುವುದು ಇಲ್ಲಿನ ಅಭ್ಯಾಸ. ಈ ಹಕ್ಕಿಪಿಕ್ಕರು, ಗೋಸಾಯಿಗಳು ಕಾಡುಕೋಳಿ, ಹುಂಡಗೋಳಿ, ಸುಟ್ಟಗೋಳಿ, ಬರ್ಲಕ್ಕಿಗಳನ್ನು, ಕೆಲವೊಮ್ಮೆ ನವಿಲುಗಳನ್ನು ರಾಶಿರಾಶಿ ಹಿಡಿದು ತಿನ್ನುವುದರ ಜೊತೆಗೆ ಮಾರುವುದೂ ಮಾಡುತ್ತಾರೆ.
ನಮ್ಮೂರಿನಲ್ಲಿ ಆಗ ಕೇಪಿನ ಕೋವಿಯಲ್ಲಿ ಕಾಡುಕೋಳಿ ಹೊಡೆಯುವ ಕೆಲ ಶಿಕಾರಿಗಳು, ಈ ಹಕ್ಕಿಪಿಕ್ಕರ ಆರ್ಭಟವನ್ನು ತಡೆಯಲಾರದೆ ಹೊಟ್ಟೆಯುರಿಯಿಂದ ಫಾರೆಸ್ಟ್ನೋರಿಗೆ ಹಚ್ಚಿಕೊಟ್ಟು, ಪಾಪದ ಅಲೆಮಾರಿಗಳನ್ನು ಹೆಂಗಸರು, ಮಕ್ಕಳೆನ್ನದೇ ಬೆಂಡೆತ್ತಿಸಿ, ಅಡ್ರಸ್ಸಿಲ್ಲದಂತೆ ಮಾಡಿದರು.
ಈ ಲೋಕಲ್ ಕೇಪಿನಕೋವಿ ಶಿಕಾರಿದಾರರು ನೇರಳೆಮರದ ಎಲೆಯನ್ನು ಉಪಯೋಗಿಸಿ ಪೀಪಿ ಮಾಡಿಕೊಂಡು, ಅದನ್ನು ಕಾಡುಕೋಳಿಯ ಕೂಗನ್ನೇ ಅನುಕರಿಸುವಂತೆ ಊದಿ ಕೋಳಿಗಳನ್ನು ಆಕರ್ಷಿಸಿ, ಅವು ಮರುಳಾಗಿ ಬಂದ ಕೂಡಲೇ ಪಠೀರೆನಿಸುತ್ತಿದ್ದರು.
ಕೇಪಿನ ಕೋವಿ ಲೋಡ್ ಮಾಡುವ ವಿಧಾನವೇ ವಿಶಿಷ್ಟವಾದುದು. ಕೋವಿಯ ಜೊತೆಗಿರುವ ಹೊಳವಿನಷ್ಟೇ ಉದ್ದವಾದ ಗಜದಲ್ಲಿ—ಹೊಳವು ಅಂದರೆ ಕೊಳವೆ—ಆ ಕೊಳವೆಯೊಳಗೆ ತೆಂಗಿನ ಜುಂಗನ್ನು ಉಂಡೆಮಾಡಿ ನೂಕಿ, ಹಿಂದೆ ಮುಂದೆ ಆಡಿಸಿ ಸ್ವಚ್ಛಗೊಳಿಸುತ್ತಾರೆ. ಆನಂತರ ಆ ಜುಂಗನ್ನು ಗಜದ ಹಿಂಭಾಗದ ಸ್ಕ್ರೂವಿನಂಥ ತುದಿಯಿಂದ ಸಿಕ್ಕಿಸಿಕೊಂಡು ಹೊರತೆಗೆಯುತ್ತಾರೆ.
ಆನಂತರ ನಿಗದಿತ ಅಳತೆಯಲ್ಲಿ ರಂಜಕ (ಗಂಧಕ)ವನ್ನು ಕೊಳವೆಯೊಳಗೆ ಸುರಿದು, ತೆಂಗಿನ ಜುಂಗಿನ ಉಂಡೆಯನ್ನು ತೂರಿಸಿ ಗಜದಿಂದ ಘಟ್ಟಿಸಬೇಕು. ನಂತರ ಸ್ವಲ್ಪ ರವೆ ಎಂಬ, ಸೀಮೆ ಅಕ್ಕಿಯ ಗಾತ್ರದ ಚಿಕ್ಕಚಿಕ್ಕ ಸೀಸದ ಗುಂಡುಗಳನ್ನು ಹಾಕಿ, ಮತ್ತೊಮ್ಮೆ ತೆಂಗಿನ ಜುಂಗಿನ ಉಂಡೆಯನ್ನು ತೂರಿಸಿ, ಮತ್ತೆ ಘಟ್ಟಿಸಬೇಕು.
ಹೊಡೆದು ಉರುಳಿಸಲಿಕ್ಕಿರುವ ಪ್ರಾಣಿಯೇನಾದರೂ ದೊಡ್ಡದಾಗಿದ್ದಲ್ಲಿ, ಗೋಲಿಗಾತ್ರದ ಸೀಸದ ದೊಡ್ಡ ಗುಂಡುಗಳಾದ ಬಕ್ಸೆಟ್ಗಳನ್ನು ಅವಶ್ಯಕತೆಗೆ ತಕ್ಕಷ್ಟು ಸೇರಿಸಿ, ಜುಂಗಿನ ಉಂಡೆಯನ್ನು ಘಟ್ಟಿಸಿ ಲೋಡ್ ಮಾಡಿಕೊಳ್ಳುತ್ತಾರೆ. ನಂತರ ಕುದುರೆಯ ಜಾಗವಾದ ಇಗ್ನಿಷನ್ ಪಾಯಿಂಟ್ನಲ್ಲಿ ತಾಮ್ರದ ಕೇಪನ್ನು ಟೊಪ್ಪಿಯ ರೀತಿಯಲ್ಲಿ ಸಿಕ್ಕಿಸುತ್ತಾರೆ.
ಗುರಿಯನ್ನು ಸಿದ್ಧಪಡಿಸಿಕೊಂಡು ಕುದುರೆ ಎಳೆದು ಟ್ರಿಗರ್ ಒತ್ತಿದಲ್ಲಿ, ಭಾರೀ ಸದ್ದಿನೊಂದಿಗೆ ಸಿಡಿಯುವ ಕೇಪಿನ ಕೋವಿ ಈಗ ಅಪರೂಪವಾಗುತ್ತಿದೆ. ರೆಡಿಮೇಡ್ ಶೂಟಿಗೆ ಅನುಕೂಲವಾಗುವಂತೆ ತೋಟಾಕೋವಿಯಿರುವುದು ಹಾಗೂ ಅದರ ಪೆಟ್ಟು ಜೋರಾಗಿರುವುದರಿಂದ ಶಿಕಾರಿಯವರು ಹೆಚ್ಚಾಗಿ ಈ ಆಧುನಿಕ ಆಯುಧ ತೋಟಾಕೋವಿಯನ್ನೇ ಖಾಯಂ ಪಡಿಸಿಕೊಳ್ಳುತ್ತಾರೆ.
ಇನ್ನು ಇಡಚಲಿನ ವಿಚಾರ ಅತ್ಯಂತ ಸರಳವಾದದ್ದು. ಮರದ ಅನೇಕ ಪಟ್ಟಿಗಳನ್ನು ಸೇರಿಸಿ ನಾಲ್ಕಡಿ ಚೌಕದ ವಿಸ್ತಾರದಲ್ಲಿ ತಡಿಕೆಯೊಂದನ್ನು ನಿರ್ಮಿಸಿ, ಅವಶ್ಯವಿದ್ದರೆ ಭಾರಕ್ಕೆಂದು ಕಲ್ಲನ್ನು ಹೇರುತ್ತಾರೆ. ಒಂದು ತುದಿಯನ್ನು ಎತ್ತಿ, ಒಂದು ತೆಳುವಾದ ಹಾಗೂ ಸೂಕ್ಷ್ಮವಾದ ಪಟ್ಟಿಯನ್ನು ಆಧಾರಕೊಟ್ಟು ನಿಲ್ಲಿಸಲಾಗುತ್ತದೆ.
ಅದರ ಅಡಿ ಯಾವ ಪ್ರಾಣಿ ಅಥವಾ ಪಕ್ಷಿ ಹಿಡಿಯಬೇಕೋ, ಆ ಮಿಕದ ಇಷ್ಟದ ಆಹಾರವನ್ನು ಚೆಲ್ಲಿ ಆಕರ್ಷಿಸಬೇಕು. ಆಹಾರವನ್ನು ಆಯಲು ಬರುವ ಪ್ರಾಣಿ-ಪಕ್ಷಿಯನ್ನು ತಾಗಿದ ಕೂಡಲೇ ಮರದ ಪಟ್ಟಿಗಳ ಟೆರೇಸ್ ಥಟಾರನೆ ಕುಸಿದುಬಿದ್ದು, ಶಿಕಾರಿ ಯಶಸ್ವಿಯಾಗುತ್ತದೆ.
ಇನ್ನು ಇದಕ್ಕೆ ಸಂಬಂಧಿಸಿದ ಶಿಕಾರಿ ಘಟನೆಯನ್ನು ಇಲ್ಲಿ ಹೇಳಲೇಬೇಕಾಗಿದೆ.
ನಮ್ಮ ಏಲಕ್ಕಿ ತೋಟದಲ್ಲಿ ಏಲಕ್ಕಿ ಹಣ್ಣಾಗುವ ಕಾಲದಲ್ಲಿ ಇಲಿಗಳು, ಅಳಿಲುಗಳು ವಿಪರೀತ ಕಾಟಕೊಟ್ಟು ಹಣ್ಣುಗಳನ್ನು ಒಡೆದು ತಿನ್ನುತ್ತಿದ್ದವು. ಒಂದೊಂದು ಗಿಡದಲ್ಲಿಯೂ ಹತ್ತರಿಂದ ಐವತ್ತು ಕಾಯಿಗಳು ಪ್ರತಿ ಸುತ್ತಿನ ಕೊಯ್ಲಿನಲ್ಲಿಯೂ ಇಲಿ-ಅಳಿಲುಗಳಿಗೆ ಆಹಾರವಾಗುತ್ತಿದ್ದವು.
ಹೇಗಾದರೂ ಇದನ್ನು ತಡೆಯಬೇಕೆಂದು ನಿರ್ಧರಿಸಿ, ತೋಟ ಕಾಯುವ ಜಬ್ಬನಿಗೆ ಇಲಿ ಹಿಡಿಯುವ ಕತ್ತರಿಗಳನ್ನು ತಂದುಕೊಟ್ಟೆವು. ಇಲಿ, ಅಳಿಲುಗಳನ್ನು ಆಕರ್ಷಿಸಲು ಒಣಮೀನಿನ ತುಂಡುಗಳನ್ನು ಸಹ ಒದಗಿಸಿದೆವು.
ಒಂದು ದಿನ ಹೀಗೇ ಎಂದಿನಂತೆ ನಾನೂ ನನ್ನ ತಮ್ಮನೂ ತೋಟಕ್ಕೆ ಹೋದೆವು. ನಾವು ಬಂದ ಸದ್ದಿಗೆ ಜಬ್ಬ ಎಲ್ಲೋ ಕುಳಿತಿದ್ದವನು, ‘ಯಾರೋಯ್’ ಎಂದು ಕತ್ತಿ, ದೊಣ್ಣೆಯೊಂದಿಗೆ ಜಿಗಿದುಬಂದ.
‘ಓ ಅಣ್ಣಯ್ಯರೇ, ನೀವಾ?’ ಎಂದು, “ಈ ಅಳಿಲುಗಳು ಏನು ದಾಂಧಲೆ ಮಾಡ್ತಿದಾವೆ ನೋಡಿ. ಕೇಳಿ, ಕೇಳಿ; ‘ಚಿಪ್ಚಿಪ್’ ಅಂತಾ ಕೂಗ್ತಿದಾವಲ್ಲ. ಏನಿಲ್ಲ ಅಂದ್ರೂ ದಿನಕ್ಕೆ ಎರಡರಿಂದ ಮೂರು ಸೇರು ಹಣ್ಣು ತಿಂದು ಹಾಳುಮಾಡ್ತವೆ. ಕತ್ತರೀನಾ ನಾಲ್ಕು ಕಡೆ ಇಟ್ಟಿದ್ದೀನಿ. ಈ ಕಡೆಯವೆರಡನ್ನು ನೋಡ್ಕಂಡ್ ಬಂದೆ. ಒಂದು ಸಿಡಿದಿದೆ, ಆದ್ರೆ ಏನೂ ಬಿದ್ದಿಲ್ಲ. ಇನ್ನೊಂದು ಸಿಡಿಸಿಲ್ಲ, ಆದರೆ ಮೀನಿನ್ ತುಂಡಿಲ್ಲ. ಆ ಕಡೆ ಹಳ್ಳದಾಚೆದನ್ನು ಇನ್ನೂ ನೋಡಿಲ್ಲ. ನೀವು ಬಂದಿದ್ದು ಸರಿಯಾಯ್ತು. ನಡೀರಿ, ನೋಡ್ಕಂಡ್ ಬರೋಣ” ಎಂದು ನಮ್ಮನ್ನೂ ಕರೆದ.
ಏನ್ ಜಿಗಣೆ ಅಂತೀರಿ! ಒಂದು ಹೆಜ್ಜೆಯಿಟ್ಟರೆ ಕಡೇಪಕ್ಷ ಐದಾರು ಜಿಗಣೆಗಳು ಸೊಂಡಿಲೆತ್ತುತ್ತಿದ್ದವು. ಕೈಯಲ್ಲಿ ಮುಟ್ಟಲು ಹೇಸಿಗೆಯಾಗಿ, ಕತ್ತಿಯ ತುದಿಯಲ್ಲೇ ಹೆರೆದು, ಜಿಗಣೆಯನ್ನು ಕತ್ತಿಗೆ ಹತ್ತಿಸಿಕೊಂಡು ಪಕ್ಕದ ಮರಕ್ಕೆ ಒರೆಸಿ, ಕತ್ತಿಯಿಂದಲೇ ಚಚ್ಚಿಯೋ ಕೊಯ್ದೋ ಕಥೆ ಮುಗಿಸುತ್ತಿದ್ದೆವು.
ನಾವು ನಡೆದಾಡುವಾಗ ನೆಲದಲ್ಲಿ ಆಗುವ ಕಂಪನದಿಂದಲೇ ಜಾಗೃತವಾಗುವ ಈ ಪರತಂತ್ರಿಗಳು, ನಮಗೆ ಅರಿವಾಗದಂತೆ ನಿಧಾನವಾಗಿ ನಮ್ಮ ಕಾಲನ್ನೇರಿ ಅನುಕೂಲಕರ ಜಾಗ ಸೇರಿಕೊಂಡು, ಸೂಕ್ಷ್ಮವಾಗಿ ಚರ್ಮ ಕೊರೆದು ರಕ್ತ ಹೀರಲು ಪ್ರಾರಂಭಿಸುತ್ತವೆ.
ಈ ಸಮಯದಲ್ಲಿ ರಕ್ತ ಹೆಪ್ಪುಗಟ್ಟದಿರುವಂತೆ ನಮ್ಮ ರಕ್ತನಾಳದೊಳಗೆ ಹಿರುಡಿನ್ ಎಂಬ ರಾಸಾಯನಿಕವನ್ನು ಇಂಜೆಕ್ಟ್ ಮಾಡುತ್ತವೆ. ರಕ್ತ ಹೀರಿ, ಇನ್ನು ತನ್ನ ದೇಹದಲ್ಲಿ ರಕ್ತ ತುಂಬಿಸಿಕೊಳ್ಳಲು ಜಾಗವೇ ಇಲ್ಲವೆಂದಾಗ, ಕಚ್ಚಿಕೊಂಡಿದ್ದ ಭಾಗವನ್ನು ಬಿಟ್ಟು ಉಂಡುಂಡಾದ ಜಿಗಣೆ ಉರುಳಿಹೋಗುತ್ತದೆ.
ಆದರೆ ನಮ್ಮ ದೇಹದ ಮೇಲೆ ಕಚ್ಚಿಕೊಂಡಿದ್ದ ಭಾಗದಲ್ಲಿ ಇಂಜೆಕ್ಟ್ ಮಾಡಿದ್ದ ಹಿರುಡಿನ್ನ ಪ್ರಭಾವದಿಂದ ರಕ್ತ ನಿರಂತರವಾಗಿ, ಕಡಿಮೆಯೆಂದರೂ ಇಪ್ಪತ್ತು ನಿಮಿಷ ಸ್ರಾವವಾಗುತ್ತಲೇ ಇರುತ್ತದೆ.
ಕಾಲ್ಬೆರಳುಗಳ ಸಂದಿ, ಮುಂಗಾಲು, ಅವಕಾಶವಾದರೆ ತೊಡೆಯ ಸಂದಿಯಲ್ಲೂ ರಕ್ತಹೀರುವ ಕೆಲಸ ಶುರು ಮಾಡುವ ಈ ಜಿಗಣೆಗಳನ್ನು ವೈದ್ಯಶಾಸ್ತ್ರದಲ್ಲಿ ದೇಹದೊಳಗೆ ಸೇರಿರಬಹುದಾದ ವಿಷವನ್ನು ತೆಗೆಯಲೂ ಬಳಸುತ್ತಾರೆ.
ಜಬ್ಬ, ಅಳಿಲು ಹಿಡಿಯಲು ಇರಿಸಿದ್ದ ಕತ್ತರಿ ತೋರಿಸಲು ನಮ್ಮನ್ನು ಕರೆದುಕೊಂಡು ಹೋದವನು ಗಕ್ಕನೆ ನಿಂತ. ಕತ್ತರಿಯನ್ನು ಚಿಕ್ಕ ಬೈನೇಗಿಡವೊಂದರ ಬುಡಕ್ಕೆ, ತಂತಿಯಿಂದ ನಾಯಿಯನ್ನು ಸರಪಳಿಯಲ್ಲಿ ಕಟ್ಟುವಂತೆ ಕಟ್ಟಲಾಗಿತ್ತು.
ಕತ್ತರಿ ಸಿಡಿದಿತ್ತು. ಆದರೆ ಯಾವುದೇ ಇಲಿಯಾಗಲೀ, ಅಳಿಲಾಗಲೀ ಸಿಕ್ಕಿಬಿದ್ದಿರಲಿಲ್ಲ. ಬದಲಿಗೆ ಬೃಹತ್ತಾದ ಆಮೆಯೊಂದು ಕತ್ತನ್ನು ಆಲ್ಮೋಸ್ಟ್ ಕತ್ತರಿಸಿಕೊಂಡು ಸತ್ತು ಅಂಗಾತ ಬಿದ್ದಿತ್ತು. ರಕ್ತಕ್ಕೆ ಇರುವೆಗಳು ಮುತ್ತುತ್ತಿದ್ದವು. ದೊಡ್ಡ ಗಾತ್ರದ ಹೊನ್ನೊಣಗಳು ಆಮೆಯ ದೇಹದ ಮೇಲೆ ಅಲ್ಲಲ್ಲಿ ಬಿಳಿಪುಡಿಯಂಥ ಮೊಟ್ಟೆಗಳನ್ನು ಇಡುತ್ತಿದ್ದವು.
ಹಿಗ್ಗಿ ಹೀರೇಕಾಯಿಯಾದ ಜಬ್ಬ, ಸರಿಸುಮಾರು ಒಂದೂವರೆ ಕೇಜಿ ಮಾಂಸ ಸಿಗಬಹುದಾದ ಆಮೆಯನ್ನು ಕತ್ತರಿಯಿಂದ ಬಿಡಿಸಿಕೊಂಡು, “ಬನ್ನಿ, ಬನ್ನಿ. ಮುರಲಾಮಿ ರಿಪೇರಿ ಮಾಡದನ್ನು ತೋರಿಸ್ತೀನಿ” ಎಂದ್ಹೇಳಿ, ಬೇಸಿಗೆಯಲ್ಲಿ ನೀರಿಗಾಗಿ ಹಳ್ಳಕ್ಕೆ ಅಡ್ಡಕಟ್ಟಿದ ಒಡ್ಡಿನತ್ತ ನಮ್ಮನ್ನು ಕರೆದೊಯ್ದ.
ಕೈಕಾಲು ತೊಳೆಯಲು ಅಲ್ಲಿ ಇಟ್ಟಿದ್ದ ಅಗಲವಾದ ಕಾಡುಕಲ್ಲಿನ ಮೇಲೆ ಆಮೆಯನ್ನು ಅಡಿಗಟ್ಟು ಮೇಲಕ್ಕೆ ಬರುವಂತೆ ಇಟ್ಟುಕೊಂಡು, ಕತ್ತಿಯಲ್ಲಿ ಅದರ ಬಲವಾದ ಚಿಪ್ಪನ್ನು ಕುಟುಕಿ ಕುಟುಕಿ ಒಡೆದು ತೆಗೆದ.
ಚಿಪ್ಪಿನ ಒಳಮೈಗೆ ಗಟ್ಟಿಯಾಗಿ ಅಂಟಿಕೊಂಡಿದ್ದ ಆಮೆಯ ಮಾಂಸದ ಮುದ್ದೆಯನ್ನು ಮೀಟಿ ಎಳೆದು, ಕಿತ್ತು, ಕಾಲುಗಳಲ್ಲಿ ಚಿಪ್ಪನ್ನು ಒತ್ತಿ ಹಿಡಿದುಕೊಂಡು, ಆಮೆಯ ಕಾಲುಗಳನ್ನು ಕೈಯಲ್ಲಿ ಹಿಡಿದುಕೊಂಡು ಹಲ್ಲುಕಚ್ಚಿ ಕಿತ್ತು ತೆಗೆದನು.
ನನ್ನ ತಮ್ಮ ಪಾಪಣ್ಣ, “ಈ ಆಮೆ ಹೆಂಗ್ ಮರಿಯಾಗುತ್ತೆ? ಮೊಟ್ಟೆಯಿಂದನೇ ತಾನೆ?” ಎಂದ.
“ಹೂ ಕಣಾ. ಹೆಣ್ಣಾಮೆ ಮರಳನ್ನ ಕೊರೆದು ಆದ ಗುಂಡಿಯೊಳಗೆ ಹತ್ತರಿಂದ ಹದಿನೈದು ಸಂಖ್ಯೆಯ, ಒಂದೂವರೆ-ಎರಡಿಂಚು ಉದ್ದುದ್ದನೆಯ, ತಿಳಿಗುಲಾಬಿ ಬಣ್ಣದ, ತೆಳು ಸಿಪ್ಪೆಯ ಮೊಟ್ಟೆಗಳನ್ನಿಟ್ಟು ಮರಳನ್ನ ಮುಚ್ಚುತ್ತದೆ. ಮರ್ರಿಂದ ನಾಲ್ಕ್ ತಿಂಗಳಲ್ಲಿ ಸಣ್ಸಣ್ಣ ಮರಿಗಳು ಮರಳೊಳಗಿಂದ ಹೊರಕ್ಕೆ ರ್ತವೆ” ಎಂದೆ.
“ಅದುಕ್ಕೆ ಚಿಪ್ ಹೆಂಗೆ ಹುಟ್ಟುತ್ತೆ? ಬೇರೆ ಪ್ರಾಣಿಗಳಿಗೆ ಇಲ್ದ ಚಿಪ್ಪು, ಇವುಕ್ಕೆ ಮಾತ್ರ ಹೇಗೆ?” ಎಂದು ಮರು ಪ್ರಶ್ನೆ ಹಾಕಿದ.
ಊಹೂ, ನನಗೂ ಗೊತ್ತಿರಲಿಲ್ಲ. ಜಬ್ಬನ ಕಡೆಗೆ ನೋಡಿದೆ. ಅವನೂ ಗೊತ್ತಿಲ್ಲವೆಂಬಂತೆ ಪ್ಯಾಲಿ ನಗೆ ನಕ್ಕ.
ಯಾಕಿರಬಹುದೆಂದು ಬಹಳ ತಲೆ ಕೆಡಿಸಿಕೊಂಡೆ. ಕಡೆಗೆ, “ಅದು ನಿಧಾನಕ್ಕೆ ನೆಡೀತೀತಲ್ಲ, ಬೇರೆ ಪ್ರಾಣಿಗಳು ಹಿಡಿದು ತಿನ್ನಬಾರದಂತ ದೇವ್ರೇ ಚಿಪ್ಪು ಸಮೇತ ಸೃಷ್ಠಿ ಮಾಡಿದೆ ಅಂತ ಕಾಣುತ್ತೆ” ಅಂದೆ.
ಹಲವು ದಿನಗಳ ನಂತರ ಯಾವುದೋ ಸೈನ್ಸ್ ಜರ್ನಲ್ ಓದುತ್ತಿದ್ದಾಗ ಈ ಆಮೆಯ ಚಿಪ್ಪಿನ ವಿಷಯ ತಿಳಿಯಿತು.
ಘನೀಕರಿಸುವ ಹಂತದಲ್ಲಿ ಎಲ್ಲಾ ಕಶೇರುಕಗಳ ಭ್ರೂಣಗಳು ನೋಡಲು ಒಂದೇ ರೀತಿಯಲ್ಲಿರುತ್ತವೆ. ತನ್ನ ಹದಿನಾರು ದಿನಗಳ ಬೆಳವಣಿಗೆಯ ನಂತರ ಆಮೆಯ ಭ್ರೂಣ ಕೆಲ ಅಪೂರ್ವ ಮಾರ್ಪಾಡು ಹೊಂದಲು ಆರಂಭಿಸುತ್ತದೆ. ಬೆನ್ನ ಮೇಲಿನ ಹಾಗೂ ಹೊಟ್ಟೆ ಕೆಳಗಿನ ಚಿಪ್ಪು ಬೆಳೆಯಲು ಅನುವಾಗುವಂತೆ ಅದರ ಭುಜದ ಮೂಳೆಗಳು ಎದೆಗೂಡಿನ ಮೂಳೆಗಳ ಒಳಭಾಗಕ್ಕೆ ಜಾರಲಾರಂಭಿಸುತ್ತವೆ. ನಂತರ ಅವೇ ಎದೆಗೂಡಿನ ಮೂಳೆಗಳು ಹೊರಮುಖವಾಗಿ ಬೆಳೆಯಲಾರಂಭಿಸಿ, ಒಂದಕ್ಕೊಂದು ಸಂಯೋಜನೆಗೊಂಡು ಬೆನ್ನ ಮೇಲೆ ನಮಗೆ ಕಾಣುವ ಅಗಲವಾದ ಚಿಪ್ಪಾಗಿ ರೂಪುಗೊಳ್ಳುತ್ತದೆ.
