ಚನ್ನರಾಯಪಟ್ಟಣ: ಕನ್ನಡ ಸಾಹಿತ್ಯ ಪರಿಷತ್ತಿಗೆ ತನ್ನದೇ ಆದಂತಹ ಇತಿಹಾಸವಿದ್ದು, ಅಂತಹ ಪವಿತ್ರವಾದ ಸಾಹಿತ್ಯ ಸಂಸ್ಥೆಯನ್ನು ಯಾವುದೇ ರೀತಿಯ ಚ್ಯುತಿ ಬಾರದಂತೆ ಮುನ್ನಡೆಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ, ನಿಮ್ಮಗಳ ನಿರೀಕ್ಷೆಯನ್ನು ಹುಸಿಗೊಳಿಸದಂತೆ ಅತ್ಯಂತ ಜವಾಬ್ದಾರಿಯಿಂದ ನಿಮ್ಮಗಳ ಸಹಕಾರದೊಂದಿಗೆ ಪರಿಷತ್ತನ್ನು ಕಟ್ಟುವ ಕೆಲಸಕ್ಕೆ ಸದಾ ನಿಮ್ಮಗಳ ಬೆಂಬಲವಿರಲಿ ಎಂದು ಮುಂಬರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಸೇವಾಕಾಂಕ್ಷಿಯಾಗಿರುವ ರವಿನಾಕಲಗೂಡು ಅವರು ತಿಳಿಸಿದರು.
ಚನ್ನರಾಯಪಟ್ಟಣ ತಾಲೂಕು ಶ್ರವಣಬೆಳಗೂಳ ಹೋಬಳಿ ಕೇಂದ್ರದಲ್ಲಿರುವ ಮುಖ್ಯ ಅತಿಥಿಗಳ ಪ್ರವಾಸಿಮಂದಿರದಲ್ಲಿ ಸೇರಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮುಖಂಡರು, ಸದಸ್ಯರುಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಪರಿಷತ್ತು ಕೇವಲ ಕೆಲವೇ ಕೆಲವರಿಗೆ ಸೀಮಿತವಾಗಬಾರದು. ಅದು ಜನ ಸಾಮಾನ್ಯರು, ಸಾಹಿತ್ಯ ಆಸಕ್ತರು, ಬರಹಗಾರರು, ಲೇಖಕರಿಗೆ, ಕಲಾವಿದರಿಗೆ ಮುಖ್ಯ ಭೂಮಿಕೆಯಾಗಬೇಕು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಹಾಗೂ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇಡೀ ರಾಜ್ಯಕ್ಕೆ ಮಾದರಿ ಸಾಹಿತ್ಯ ಪರಿಷತ್ತು ಎಂಬಂತೆ ಕೆಲಸ ಮಾಡುವ ಮಹದಾಸೆ ನನ್ನದಾಗಿದ್ದು, ತಮ್ಮಗಳ ಅಮೂಲ್ಯ ಸಲಹೆ, ಸಹಕಾರ ಬಹಳ ಮುಖ್ಯ ಎಂದರು. ಕನ್ನಡದ ಮೇಲಿನ ಪ್ರೀತಿಯಿಂದಲೇ ನಿರಂತರವಾಗಿ ಕನ್ನಡ ಸಾಹಿತ್ಯದ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದು, ಇನ್ನೂ ಹೆಚ್ಚಿನ ಕನ್ನಡ ಸಾಹಿತ್ಯ ಪರಂಪರೆಯ ಚಟುವಟಿಕೆಗಳನ್ನು ನಡೆಸುವ ಸದಾಶಯದೊಂದಿಗೆ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸುತ್ತಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರುಗಳ ಬೆಂಬಲ ಸದಾ ನನ್ನೊಂದಿಗಿರಲಿ. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತನಾಗಿದ್ದರು ಕೂಡಾ ನಿಮ್ಮಗಳ ಬೆಂಬಲದೊಂದಿಗೆ ಕನ್ನಡ ಕಟ್ಟುವ ಕೆಲಸವನ್ನು ಮಾಡಿಕೊಂಡು ಬಂದಿರುತ್ತೇನೆ. ಪರಾಜಿತನಾಗಿದ್ದರು ಕೂಡಾ ನನಗೆ ನೀವುಗಳು ಕೊಟ್ಡ ಪ್ರೀತಿ, ವಿಶ್ವಾಸವನ್ನು ಎಂದಿಗೂ ಮರೆಯಲಾರೆ. ನೀವುಗಳು ನನ್ನ ಮೇಲಿಟ್ಟಿರುವ ಅಭಿಮಾನಕ್ಕೆ ಸದಾ ಋಣಿಯಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾಮ ಮಟ್ಟದಿಂದ ರಾಷ್ಟ್ರ ಮಟ್ಟದ ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸಲು ನೀವುಗಳು ನೀಡುವ ಶಕ್ತಿಯೇ ನನಗೆ ಶ್ರೀರಕ್ಷೆಯಾಗಲಿ ಎಂದು ಆಶಿಸುತ್ತೇನೆ.
ಕನ್ನಡ ಹಾಗೂ ಕನ್ನಡದ ಮನಸ್ಸುಗಳನ್ನು ಕಟ್ಟಲು ಕನ್ನಡದ ಪರಿಚಾರಕನಾದ ನನಗೆ ಸದಾ ನಿಮ್ಮ ಪ್ರೀತಿಯ ಬೆಂಬಲವಿರಲಿ ಎಂದು ತಿಳಿಸಿದರು. ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯ ಜನತಾದಳದ ಉಪಾಧ್ಯಕ್ಷರಾದ ಚಿಕ್ಕಬಿಳ್ತಿ ಪ್ರವೀಣ್ ಅವರು ಮಾತನಾಡಿ ಜಗತ್ತಿಗೆ ಅಹಿಂಸಾ ಸಂದೇಶವನ್ನು ನೀಡಿದ ಗೊಮ್ಮಟನ ಕ್ಷೇತ್ರವು ಸಾಹಿತ್ಯಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದ್ದು ಮುಂದಿನ ದಿನಗಳಲ್ಲಿ ಪರಿಷತ್ತಿನ ಚಟುವಟಿಕೆಗಳು ಅತ್ಯಂತ ಕ್ರಿಯಾಶೀಲವಾಗಿ ನಡೆಯಲಿ. ಪವಿತ್ರ ಸನ್ನಿಧಿಯಲ್ಲಿ ಪ್ರಥಮ ಸಭೆಯನ್ನು ಮಾಡಿದ ನಿಮ್ಮ ಗೆಲುವು ಶತಸಿದ್ದವಾಗಿದ್ದು, ನಮ್ಮಗಳ ಪೂರ್ಣ ಬೆಂಬಲ ರವಿನಾಕಲಗೂಡು ಅವರಿಗೆ ಇರುತ್ತದೆ. ಅಧ್ಯಕ್ಷ ಸ್ಥಾನವನ್ನು ಸೇವೆಯ ಸ್ಥಾನವೆಂದು ತಿಳಿದು ಕನ್ನಡ ಸಾಹಿತ್ಯದ ಕಾರ್ಯಗಳು ಜಿಲ್ಲೆಯಲ್ಲಿ ಹೆಚ್ಚೆಚ್ಚು ನಡೆಯುವಂತೆ ಶ್ರಮವಹಿಸಿ ಎಂದು ತಿಳಿಸಿದರು.

ಸಾಹಿತಿ ಜಯಂತಿ ಚಂದ್ರಶೇಖರ್ ಸಭೆಯನ್ನುದ್ದೇಶಿಸಿ ಮಾತನಾಡಿ ಕನ್ನಡ ಸಾಹಿತ್ಯಕ್ಕೆ ಜೈನ ಸಾಹಿತ್ಯದ ಕೊಡುಗೆ ಅಪಾರ, ಅಂತಹ ಜೈನ ಸಾಹಿತ್ಯವನ್ನು ದೇಶಕ್ಕೆ ಸಮರ್ಪಿಸಿದ ಬಾಹುಬಲಿಯ ನಾಡಿನಿಂದ ಪ್ರಾರಂಭಿಸಿದ ಪರಿಷತ್ತಿನ ಚುನಾವಣಾ ಪ್ರಚಾರ ಜಿಲ್ಲೆಯೆಲ್ಲೆಡೆ ಗೆಲುವಿನ ಪ್ರಚಾರವಾಗಲಿ. ಪರಿಷತ್ತಿನ ಸಾರಥಿಯಾಗುವ ತಾವುಗಳು ಮಹಿಳಾ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯವನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಪರಿಶ್ರಮಿಸಬೇಕು. ತಮ್ಮ ಪಾಡಿಗೆ ಎಲೆ ಮರೆ ಕಾಯಿಯಂತೆ ಬರವಣಿಗೆ ಮಾಡುತ್ತಿರುವ ಪ್ರತಿಭಾವಂತರನ್ನು ಗುರುತಿಸಿ ಅವರುಗಳಿಗೆ ಮುಖ್ಯ ವೇದಿಕೆಯನ್ನು ಕೊಡುವ, ಅವರ ಪುಸ್ತಕಗಳನ್ನು ಪ್ರಕಟಿಸಿ ಅವರುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕು ಎಂದು ತಿಳಿಸಿದರು. ರವಿನಾಕಲಗೂಡು ಅವರು ಪರಿಷತ್ತನ್ನು ಕಟ್ಟಲು ಸಮರ್ಥರಿದ್ದು ಅವರ ಗೆಲುವು ನಿಶ್ಚಿತ ಎಂದು ತಿಳಿಸಿದರು.
ಶಿಕ್ಷಕರಾದ ವಸಂತಪ್ಪ ಅವರು ಮಾತನಾಡಿ ಪರಿಷತ್ತನ್ನು ಕಟ್ಟಲು ಸಾಹಿತ್ಯದ ಮನಸ್ಸಿನವರು ಅಧ್ಯಕ್ಷರಾಗಬೇಕು ಎಂಬುದು ಎಲ್ಲರ ಆಶಯವಾಗಿದ್ದು, ಅಂತಹ ಸಾಹಿತ್ಯದ ಮನಸ್ಸು ಹಾಗೂ ಪರಿಷತ್ತನ್ನು ಕಟ್ಟುವ ಶಕ್ತಿ ರವಿನಾಕಲಗೂಡು ಅವರಿಗೆ ಇರುವುದನ್ನು ನಾವುಗಳು ಗಮನಿಸಿದ್ದೇವೆ. ಸಂಘಟನಾ ಸಾಮರ್ಥ್ಯವಿರುವ ರವಿನಾಕಲಗೂಡು ಅವರು ಅಧ್ಯಕ್ಷ ಸ್ಥಾನಕ್ಕೆ ಅತ್ಯಂತ ಸೂಕ್ತ ಎಂಬುದನ್ನೆ ಅರಿತು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸಾಹಿತ್ಯ ಪರಿಷತ್ತಿನ ಮುಖಂಡರುಗಳು ಇಂದಿನ ಸಭೆಯಲ್ಲಿ ಭಾಗವಹಿಸಿದ್ದಾರೆ. ನಿಮ್ಮ ಗೆಲುವಿನಲ್ಲಿ ನಾವುಗಳು ಸದಾ ಜೊತೆಗಿರುತ್ತೇವೆ, ಅದರಂತೆಯೇ ನಾವುಗಳು ನಿಮ್ಮ ಮೇಲೆ ಇಟ್ಟಿರುವ ನಂಬಿಕೆ ಯನ್ನು ಉಳಿಸಿಕೊಳ್ಳಿ ಎಂದು ತಿಳಿಸಿದರು.
ಈ ಸಭೆಯಲ್ಲಿ ಭಾಗವಹಿಸಿದ್ದ ಸಿಂಹಾದ್ರಿ ಶಿಕ್ಷಣ ಸಂಸ್ಥೆಯಯ ಅಧ್ಯಕ್ಷರಾದ ಡಾ.ಸಿಂಹಾದ್ರಿ ಮಂಜುನಾಥ್ ಅವರು ಮಾತನಾಡಿ, ಶಾಲೆಗಳಲ್ಲಿ ಹೆಚ್ಚೆಚ್ಚು ಸಾಹಿತ್ಯ ಚಟುವಟಿಕೆಗಳು ನಡೆಯುವಂತೆ ಗಮನಹರಿಸಲಿ. ಮಕ್ಕಳಲ್ಲಿ ಸಾಹಿತ್ಯವನ್ನು ತುಂಬುವಂತ ಅರ್ಥಪೂರ್ಣ ಚಟುವಟಿಕೆಗಳನ್ನು ಪರಿಷತ್ತು ನಡೆಸುವಂತಾಗಲಿ. ಪರಿಷತ್ತಿನ ಅಧ್ಯಕ್ಷ ಸ್ಥಾನ ಜವಾಬ್ದಾರಿಯ ಸ್ಥಾನವಾಗಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ರವಿನಾಕಲಗೂಡು ಅವರಿಗೆ ಇರುವುದೆಂದು ನಂಬಿ ಶ್ರವಣಬೆಳಗೂಳ ಹೋಬಳಿಯ ಪರಿಷತ್ತಿನ ಸದಸ್ಯರೆಲ್ಲರು ಒಮ್ಮತದಿಂದ ಬೆಂಬಲಿಸೋಣಾ ಎಂದು ತಿಳಿಸಿದರು. ಕವಿಯತ್ರಿ ಪ್ರೇಮಾಪ್ರಶಾಂತ ಮಾತನಾಡಿ ರವಿನಾಕಲಗೂಡು ಅವರ ಸಾರಥ್ಯದಲ್ಲಿ ನಗರದಿಂದ ಗ್ರಾಮಗಳವರೆಗೂ ಪರಿಷತ್ತು ಬರುತ್ತದೆ ಎಂಬ ನಂಬಿಕೆ ನಮಗಿದೆ. ಗ್ರಾಮ ಗ್ರಾಮಗಳಲ್ಲಿ ಸಾಹಿತ್ಯ ಚಟುವಟಿಕೆ ನಡೆದಾಗ ಮಾತ್ರ ಪರಿಷತ್ತು ಉಳಿಯಲು ಸಾಧ್ಯವಾಗುತ್ತದೆ. ಹಳ್ಳಿಗಳ ಶಾಲೆಗಳತ್ತಲೂ ಪರಿಷತ್ತನ್ನು ಕೊಂಡೊಯ್ಯುವ ಕೆಲಸವಾಗಲಿ, ನಿಮ್ಮಗಳ ಬೆಂಬಲಕ್ಕೆ ಸದಾ ಎಲ್ಲರು ಜೊತೆಗಿರುತ್ತೇವೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಾವಗಲ್ ಪ್ರಸನ್ನಕುಮಾರ್ ಅವರು ಅಧ್ಯಕ್ಷ ಸ್ಥಾನವನ್ನು ಪದವಿ ಎಂದು ತಿಳಿಯದೇ ಅದೊಂದು ಸೇವಾ ಸ್ಥಾನ ಎಂದು ತಿಳಿದು ಕನ್ನಡ ಕಟ್ಟುವ ಕೆಲಸಕ್ಕೆ ಮುಂದಾಗಿರುವ ರವಿನಾಕಲಗೂಡು ಅವರು ಮೂರು ದಶಕಗಳ ಕಾಲ ಸಾಹಿತ್ಯ, ಸಂಸ್ಕೃತಿಯ ಕೆಲಸವನ್ನು ಮಾಡಿಕೊಂಡು ಬಂದಿರುತ್ತಾರೆ. ಜಿಲ್ಲೆಯ ಕನ್ನಡಿಗರ ಸ್ವಾಯತ್ತ ಸಂಸ್ಥೆಯಾದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾರಥ್ಯವನ್ನು ಹಿಡಿಯಲು ಹೊರಟಿರುವ ಸಂಘಟಕರು ಮತ್ತು ಕ್ರಿಯಾಶೀಲರಾದ ರವಿನಾಕಲಗೂಡು ಅವರಿಗೆ ಜಿಲ್ಲೆಯ ಪರಿಷತ್ತಿನ ಸದಸ್ಯರು ಮತ್ತು ಮುಖಂಡರು, ಧಾರ್ಮಿಕ ಮುಖಂಡರುಗಳು ಜಾತಿ-ಮತವೆಂದು ಭೇದ ಮಾಡದೇ ಒಕ್ಕೊರಲಿನಿಂದ ಬೆಂಬಲಿಸಿದ್ದು, ಬಾಹುಬಲಿಯ ಪುಣ್ಯ ಕ್ಷೇತ್ರವಾದ ಶ್ರವಣಬೆಳಗೂಳ ಹೋಬಳಿಯ ಸದಸ್ಯರುಗಳ ಪ್ರೀತಿ, ವಿಶ್ವಾಸ ಹಾಗೂ ಪೂರ್ಣ ಬಂಬಲ ಅವರೊಂದಿಗಿರಲಿ ಎಂದು ತಿಳಿಸಿದರು.
ಸಭೆಯಲ್ಲಿದ್ದ ಎಲ್ಲರನ್ನು ಮುಖಂಡರಾದ ಎಸ್.ಆರ್.ರಮೇಶ್ ಸ್ವಾಗತಿಸಿದರು. ಸಭೆಯಲ್ಲಿ ಉಪನ್ಯಾಸಕರಾದ ಎಸ್.ಬಿ.ಲೋಕೇಶ್, ನಿವೃತ್ತ ಶಿಕ್ಷಕರಾದ ಶಿವಕುಮಾರ್, ಶಿಕ್ಷಕರಾದ ಪ್ರಶಾಂತ್, ಹಿರಿಯರಾದ ಪುರುಷೋತ್ತಮ್, ಹಾಲು ಮತ್ತಿಘಟ್ಟ ಶಿವಣ್ಣ, ಮುಖಂಡರಾದ ಪರಮ ದೇವರಾಜೇಗೌಡ, ರಾಘವ,ಎ.ಪಿ.ಎಂ.ಸಿ ಅಶೋಕ್ ಸೇರಿದಂತೆ ಇತರರು ಹಾಜರಿದ್ದರು.
– ಮಂಜುನಾಥ್ ಐ.ಕೆ
